ಔರಾದ್ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ಜೆಡಿ ಭೇಟಿ, ಪರಿಕ್ಷೆಯಲ್ಲಿ ನೈತಿಕತೆ ಕಾಪಾಡಲು ಸೂಚನೆ
ಸಂಜೆವಾಣಿ ವಾರ್ತೆ
ಔರಾದ್ :ಮಾ.31: ಎಸ್ಸೆಸ್ಸೆಲ್ಸಿ ಪರೀಕ್ಷಾ ಕೆಂದ್ರಗಳಿಗೆ ಶನಿವಾರ ಕಲಬುರಗಿಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಜಂಟಿ ನಿರ್ದೇಶಕ ಎಚ್.ಸಿ ಚಂದ್ರಶೇಖರ ಭೇಟಿ ನೀಡಿ ಪರಿಶೀಲಿಸಿದರು.
ಪಟ್ಟಣದ ಆದರ್ಶ ವಿದ್ಯಾಲಯ, ಅಮರೇಶ್ವರ ಕನ್ಯಾ ಪ್ರೌಢ ಶಾಲೆ, ಸಂತಪೂರ ನಗರದ ದೀಪಾಲಯ ಶಾಲೆ, ಸರಕಾರಿ ಪ್ರೌಢ ಶಾಲೆ, ಠಾಣಾಕುಶನೂರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ ಮತ್ತು ಕನ್ಯಾ ಪ್ರೌಢ ಶಾಲೆಯಲ್ಲಿ ನಡೆಯುತ್ತಿರುವ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಪರಿಶೀಲನೆ ನಡೆಸಿದರು.
ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ವೆಬ್‍ಕಾಸ್ಟಿಂಗ್ ಮೇಲೆ ನಡೆಯುತ್ತಿದ್ದು, ಕೊಠಡಿ ಮೇಲ್ವಿಚಾರಕರು ಜಾಗರೂಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪರೀಕ್ಷೆಯ ಪಾವಿತ್ರ್ಯತೆ, ನೈತಿಕತೆ ಕಾಪಾಡುವ ನಿಟ್ಟಿನಲ್ಲಿ ಪರೀಕ್ಷಾ ಕಾರ್ಯ ಬಹಳ ಎಚ್ಚರಿಕೆಯಿಂದ ನಿರ್ವಹಿಸಿ ಎಂದು ಸಲಹೆ ನೀಡಿದರು. ವಿದ್ಯಾರ್ಥಿಗಳು ವೆಬ್‍ಕಾಸ್ಟಿಂಗ್ ಬಗ್ಗೆ ತಲೆ ಕೆಡಸಿಕೊಳ್ಳದೇ ತಮ್ಮ ಪಾಡಿಗೆ ತಾವುಗಳು ಬರೆಯಬೇಕು. ನಕಲು ಮಾಡಲು ಯಾವ ತಂತ್ರಗಾರಿಕೆಯೂ ನಡೆಯುವದಿಲ್ಲ ಎಂದರು.
ಈ ವೇಳೆ ಪಟ್ಟಣದ ಬಸವಗುರುಕುಲ ಶಾಲೆಯಲ್ಲಿ ನಡೆಯುತ್ತಿರುವ 8ನೇ ಮತ್ತು 9ನೇ ತರಗತಿಯ ಮೌಲ್ಯಮಾಪನ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪ್ರಮುಖರಾದ ಬಿಇಒ ಟಿಆರ್ ದೊಡ್ಡೆ, ಇಸಿಒ ಬಲಭೀಮ ಕುಲಕರ್ಣಿ, ಮೌಲ್ಯಮಾಪನ ಕೇಂದ್ರದ ನೋಡಲ್ ಅಧಿಕಾರಿ ನಾರಾಯಣ ರಾಠೋಡ್ ಸೇರಿದಂತೆ ಇತರರಿದ್ದರು.
ವಿಜ್ಞಾನ ಪರೀಕ್ಷೆ ಬರೆದ 3313
ಔರಾದ್ ತಾಲೂಕಿನಲ್ಲಿ ಶನಿವಾರ ನಡೆದ ಎಸ್ಸೆಸ್ಸೆಲ್ಸಿ ವಿಜ್ಞಾನ ಪರೀಕ್ಷೆಯನ್ನು ತಾಲೂಕಿನಾದ್ಯಂತ 3313 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಔರಾದ್, ಕಮಲನಗರ ತಾಲೂಕಿನ ಒಟ್ಟು 13 ಪರೀಕ್ಷಾ ಕೇಂದ್ರದಲ್ಲಿ ನೋಂದಾಯಿತ 3487 ವಿದ್ಯಾರ್ಥಿಗಳ 174 ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ಎಸ್ಸೆಸ್ಸೆಲ್ಸಿ ಪರೀಕ್ಷೆಯ ತಾಲೂಕು ನೋಡಲ್ ಅಧಿಕಾರಿ ಈಶ್ವರ ಕ್ಯಾದೆ ತಿಳಿಸಿದ್ದಾರೆ.