ತಗಡೊರುದಿಂದ ಬಸವಕಲ್ಯಾಣದವರೆಗೆ ವಚನ ಸಂವಿಧಾನ ಪ್ರಣಾಳಿಕೆ ಜಾಥಾ
ಕಲಬುರಗಿ:ಮಾ.30: ಚಾಮರಾಜನಗರ ಜಿಲ್ಲೆಯ ನಂಜನಗೂಡ್ ತಾಲ್ಲೂಕಿನ ತಗಡೊರಿನಿಂದ ಬೀದರ್ ಜಿಲ್ಲೆಯ ಬಸವಕಲ್ಯಾಣದವರೆಗೆ ವಚನ ಸಂವಿಧಾನ ಉಳಿಸೋಣ, ಬಹುತ್ವ ಸಮಾಜ ಕಟ್ಟೋಣ ಎಂಬ ಘೋಷಣೆಯಡಿ ವಚನ ಸಂವಿಧಾನ ಪ್ರಣಾಳಿಕೆ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸಂಚಾಲಕ ಜಗನ್ ಸಿಕೆ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಣ್ಣನವರು ಹೇಳಿದಂತೆ ವಚನ ಸಂವಿಧಾನದಲ್ಲಿ ಬದುಕೋಣ, ಅಂಬೇಡ್ಕರ್ ಅವರು ಹೇಳಿದಂತೆ ಸಂವಿಧಾನವನ್ನು ಉಳಿಸೋಣ, ಗಾಂಧೀಜಿಯವರು ಹೇಳಿದಂತೆ ಸತ್ಯವಾಗಿರಿ, ಶಾಂತವಾಗಿರಿ, ನಿರ್ಭಯವಾಗಿ ಮತದಾನ ಮಾಡೋಣ. ಹಾಗೆಯೇ ಕುವೆಂಪು ಅವರು ಹೇಳಿದಂತೆ ವಿಶ್ವಮಾನವತ್ವವನ್ನು ಸಂರಕ್ಷಿಸೋಣ ಎಂಬ ಉದ್ದೇಶದೊಂದಿಗೆ ಐವರು ಮಹನೀಯರ ವಿಚಾರಧಾರೆಗಳಡಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.
ಜಾಥಾವು ಮಾರ್ಗ ಮಧ್ಯದಲ್ಲಿ ಬಸವಣ್ಣನವರ ಜನ್ಮಸ್ಥಳವಾದ ಬಾಗೇವಾಡಿ ಮೂಲಕ ಡಾ. ಬಿ.ಆರ್. ಅಂಬೇಡ್ಕರ್ ಅವರು ನಡೆದಾಡಿದ ಸ್ಥಳ ಶಹಾಬಾದ್- ವಾಡಿ ಮೂಲಕ ಕಲಬುರ್ಗಿಯನ್ನು ತಲುಪಿ ಸಮಾವೇಶ ಆಯೋಜಿಸಲಾಗಿದೆ. ಜನರಲ್ಲಿ ವನಚ ಸಂವಿಧಾನ ಉಳಿಸೋಣ, ಬಹುತ್ವ ಸಮಾಜ ಕಟ್ಟೋಣ, ಜಾಗೃತಿಯನ್ನು ಜನತೆಗೆ ಕರೆ ನೀಡುವುದರೊಂದಿಗೆ ಬೀದರ್ ಜಿಲ್ಲೆಯ ಬಸವಕಲ್ಯಾಣಕ್ಕೆ ತೆರಳಿ ಜಾಥಾ ಸಮಾರೋಪಗೊಳ್ಳಲಿದೆ ಎಂದು ಅವರು ಹೇಳಿದರು.
ಏಪ್ರಿಲ್ ಕೊನೆಯ ವಾರದಲ್ಲಿ ಇಲ್ಲವೇ ಮೇ ಮೊದಲ ವಾರದಲ್ಲಿ ಜಿಲ್ಲೆಯನ್ನು ಜಾಥಾ ಪ್ರವೇಶಿಸಲಿದೆ. ಮೇ ಐದರಂದು ಬಸವಕಲ್ಯಾಣದಲ್ಲಿ ಸಮಾರೋಪಗೊಳ್ಳಲಿದೆ. ಸಂವಿಧಾನ ವಿರೋಧಿಗಳಿಗೆ ಯಾವುದೇ ರೀತಿಯಲ್ಲಿ ಮತ ಕೊಡದಂತೆ ಹಾಗೂ ಜಾತಿವಾದಿಗಳನ್ನು ಸೋಲಿಸುವಂತೆ ಜಾಥಾವು ಮಾರ್ಗ ಮಧ್ಯೆ ಬಹಿರಂಗ ಸಭೆ, ಕರಪತ್ರಗಳ ಹಂಚಿಕೆಯನ್ನು ಮಾಡಲಾಗುವುದು. ಸಂವಿಧಾನ ಬದಲಾಯಿಸಲು ಬಂದಿದ್ದೇವೆ ಎನ್ನುವವರಿಗೆ ಲೋಕಸಭಾ ಚುನಾವಣೆಯಲ್ಲಿ ಸೋಲಿಸಬೇಕು ಎಂದು ಅವರು ಕರೆ ನೀಡಿದರು.
ಯಾವುದೇ ಪಕ್ಷವನ್ನು ವಚನ ಸಂವಿಧಾನ ಪ್ರಣಾಳಿಕೆ ಜಾಥಾ ಬೆಂಬಲಿಸುವುದಿಲ್ಲ. ಜಾತ್ಯಾತೀತ, ಸಮಾಜವಾದಿ ಹಾಗೂ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಬೆಂಬಲಿಸುವ ದಿಸೆಯಲ್ಲಿ ಸೂಕ್ತ ರೀತಿಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪ್ರೊ. ಆರ್.ಕೆ. ಹುಡಗಿ, ಡಾ. ಶರಣಪ್ಪ ಸೈದಾಪೂರ್ ಅವರು ಉಪಸ್ಥಿತರಿದ್ದರು.