ಎನ್‍ಡಿಎ ಸರ್ಕಾರದ ಚುನಾವಣಾ ಬಾಂಡ್ ಹಗರಣ: ನ್ಯಾಯಾಂಗ ತನಿಖೆಗೆ ಸಿಪಿಐಎಂ ಒತ್ತಾಯ
ಕಲಬುರಗಿ:ಮಾ.30: ಕಳೆದ 2018ರಿಂದ ಆಡಳಿತಾರೂಢ ಬಿಜೆಪಿಯು ಸುಮಾರು 8,252 ಕೋಟಿ ರೂ.ಗಳ ಚುನಾವಣಾ ಬಾಂಡ್‍ಗಳನ್ನು ಪಡೆದಿದ್ದು, ಮೇಲ್ನೋಟಕ್ಕೆ ಇದೊಂದು ಅಧಿಕಾರ ದುರುಪಯೋಗದ ದುಷ್ಕøತ್ಯದಂತೆ ಕಂಡುಬರುತ್ತಿದ್ದು, ಒಟ್ಟು ಪ್ರಕರಣವನ್ನು ಸರ್ವೋಚ್ಛ ನ್ಯಾಯಾಲಯದ ಸುಪರ್ದಿಯಲ್ಲಿ ಸಮಗ್ರ ತನಿಖೆ ಕೈಗೊಳ್ಳಬೇಕು ಎಂದು ಸಿಪಿಐಎಂ ರಾಜ್ಯ ಸಮಿತಿಯ ಕಾರ್ಯದರ್ಶಿ ಯು. ಬಸವರಾಜ್ ಹಾಗೂ ಜಿಲ್ಲಾ ಕಾರ್ಯದರ್ಶಿ ಶ್ರೀಮತಿ ಕೆ. ನೀಲಾ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ತಾನು ತಿನ್ನುವುದಿಲ್ಲ ಮತ್ತು ತಿನ್ನಲು ಬಿಡುವುದಿಲ್ಲ, ಮಾತ್ರವಲ್ಲ, ಕಪ್ಪು ಹಣ ಬಯಲಿಗೆಳೆಯುತ್ತೇನೆ ಎಂದು ನೀಡಿದ ವಾಗ್ದಾನಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಿರುವುದು ಹಗರಣ ಸಾಬೀತುಪಡಿಸುತ್ತದೆ ಎಂದು ಆರೋಪಿಸಿದರು.
ಚುನಾವಣಾ ಬಾಂಡ್ ಪ್ರಕರಣಗಳು ಈಗ ಒಂದೊಂದಾಗಿ ಮಾಧ್ಯಮಗಳಲ್ಲಿ ಬಯಲಾಗುತ್ತಿವೆ. ಇವು ಸರ್ಕಾರದ ಅಧಿಕಾರ ದುರುಪಯೋಗ, ಭ್ರಷ್ಟಾಚಾರ, ಸ್ವಾಯತ್ತ ಸಂಸ್ಥೆಗಳ ದುರ್ಬಳಕೆ, ಬ್ಲಾಕ್‍ಮೇಲ್ ಅಂಶಗಳನ್ನು ಅವು ಎತ್ತಿ ತೋರಿಸುತ್ತಿವೆ. ಬಿಜೆಪಿಗೆ ಚುನಾವಣಾ ಬಾಂಡ್ ನೀಡಿದ ಔಷಧಿ ಹಾಗೂ ಲಾಟರಿ ಮತ್ತಿತರೆ ಕಂಪೆನಿಗಳು, ಒಕ್ಕೂಟ ಸರ್ಕಾರದ ಈಡಿ, ಐಟಿ ಮುಂತಾದ ಸಂಸ್ಥೆಗಳಿಂದ ದಾಳಿಗೊಳಗಾಗಿರುವುದು, ಅದೇ ರೀತಿ ಹಲವು ಕಂಪೆನಿಗಳು ಚುನಾವಣಾ ಬಾಂಡ್ ನೀಡಿ ಲಾಭದಾಯಕ ಗುತ್ತಿಗೆಗಳನ್ನು ಪಡೆದಿರುವುದು ಕಂಡುಬಂದಿದೆ ಎಂದು ಅವರು ದೂರಿದರು.
ಇದೆಲ್ಲವೂ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಭ್ರಷ್ಟಾಚಾರವನ್ನು ಆ ಮೂಲಕ ಕಾಯ್ದೆಬದ್ಧಗೊಳಿಸಿರುವುದು ಮತ್ತು ಗೌಪ್ಯವಾಗಿರಿಸಲು ಕ್ರಮ ವಹಿಸಿರುವುದು ಬಯಲುಗೊಳಿಸುತ್ತದೆ. ಇದನ್ನು ಸರ್ವೋಚ್ಛ ನ್ಯಾಯಾಲಯದ ಸುಪರ್ದಿಯಲ್ಲಿ ವಿವಿಧ ಆಯಾಮಗಳ ಮೂಲಕ ನ್ಯಾಯಾಂಗ ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ವಹಿಸುವುದರೊಂದೇ ಪರಿಹಾರವಾಗಿದೆ ಎಂದು ಅವರು ಹೇಳಿದರು.
ಲೋಕಸಭಾ ಚುನಾವಣೆ ಘೋಷಣೆಯಾದ ನಂತರ ದೇಶಾದ್ಯಂತ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ರಾಜಕೀಯ ದುರುದ್ದೇಶದಿಂದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಬಂಧಿಸಿದ್ದು ಖಂಡನೀಯ. ಕೂಡಲೇ ಅವರಿಗೆ ಬಂಧ ಮುಕ್ತಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ಘೋಷಿತ ಸಂಸದೀಯ ಚುನಾವಣೆಯಲ್ಲಿ ತಾನು ಸೋಲಬಹುದೆಂಬ ಭೀತಿ ಹಾಗೂ ಇಂಡಿಯಾ ಕೂಟದ ಮೈತ್ರಿಯಿಂದ ಬೆದರಿದ ಬಿಜೆಪಿ ಇಂತಹ ದುಷ್ಕøತ್ಯಕ್ಕೆ ಕೈಹಾಕಿದೆ ಎಂದು ಟೀಕಿಸಿದ ಅವರು, ಸಂಸತ್ ಚುನಾವಣೆಯಲ್ಲಿ ರಾಜ್ಯದ ಮತದಾರರು ಬಿಜೆಪಿ ಹಾಗೂ ಅದರ ಮಿತ್ರರನ್ನು ಹೀನಾಯವಾಗಿ ಸೋಲಿಸಿ. ಚಿಕ್ಕಬಳ್ಳಾಪುರ ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ತ್ತು ಅದರ ಮಿತ್ರರನ್ನು ಸೋಲಿಸಬಲ್ಲ ಇಂಡಿಯಾ ಕೂಟ ಗೆಲ್ಲಿಸಬೇಕು ಎಂದು ಅವರು ಕರೆ ನೀಡಿದರು.
ಕಳೆದ ಹತ್ತು ವರ್ಷಗಳ ಬಿಜೆಪಿಯು ತನ್ನ ಅಧಿಕಾರವಧಿಯಲ್ಲಿ ಭಾರತದ ಸಂವಿಧಾನದ ನಾಲ್ಕು ಆಧಾರ ಸ್ಥಂಭಗಳಾದ ಜಾತ್ಯಾತೀತ ಪ್ರಜಾಪ್ರಭುತ್ವ, ಒಕ್ಕೂಟವಾದಿ ಸ್ವರೂಪ, ಸಾಮಾಜಿಕ ನ್ಯಾಯ ಹಾಗೂ ಆರ್ಥಿಕ ಸಾರ್ವಭೌಮತೆಯ ಮೇಲೆ ಗಂಭೀರ ದಾಳಿಗಳನ್ನು ಮಾಡುವ ಹಾಗೂ ಲೂಟಿಕೋರ ಕಾರ್ಪೋರೇಟ್ ಹಾಗೂ ಹಿಂದೂತ್ವವನ್ನು ಹೇರುವ ಮೂಲಕ ದೇಶವನ್ನು ಅತ್ಯಂತ ಸಂಕಷ್ಟಕ್ಕೆ ಒಳಗಾಗಿಸಿದೆ. ಮಾತ್ರವಲ್ಲ, ಮರಳಿ ಅಧಿಕಾರಕ್ಕೆ ಬಂದರೆ ಲೂಟಿಕೋರ ಕಾರ್ಪೋರೇಟ್ ಹಾಗೂ ಹಿಂದೂತ್ವವಾದಿ ರಾಷ್ಟ್ರವನ್ನಾಗಿ ಬದಲಾಯಿಸುವ ಅಪಾಯಗಳು ನಿಚ್ಚಳವಾಗಿರುವುದರಿಂದ ರಾಜ್ಯದ ಮತದಾರರು ಮುಂಬರುವ ಸಂಸತ್ ಚುನಾವಣೆಯಲ್ಲಿ ಫ್ಯಾಸಿಸ್ಟ್ ಬಿಜೆಪಿ ಮತ್ತು ಅದರ ಮಿತ್ರಕೂಟವನ್ನು ತಿರಸ್ಕರಿಸಿ ಸೋಲಿಸಬೇಕು ಎಂದು ಅವರು ಹೇಳಿದರು.
ದೇಶದ ಜನತೆಗೆ ಹಿಂದಿನ ಚುನಾವಣೆಯಲ್ಲಿ ನೀಡಿದ ಶುಭ ದಿನಗಳನ್ನು ತರುವ, ಒಂದೇ ಒಂದು ಆರ್ಥಿಕ ಭರವಸೆಯನ್ನು ಬಿಜೆಪಿ ಈಡೇರಿಸಲಿಲ್ಲ. ಜನತೆಗೆ ನೀಡಿದ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ನೀಡುವ ಮತ್ತು ರೈತರ ಹಾಗೂ ಕೂಲಿಕಾರರ ಆದಾಯ ದ್ವಿಗುಣಗೊಳಿಸುವ ಯಾವ ಭರವಸೆಗಳನ್ನು ಗಮನಿಸಲಿಲ್ಲ. ರಾಜ್ಯವು ಅತ್ಯಂತ ತೀವ್ರತರ ಬರಗಾಲವನ್ನು ಎದುರಿಸುತ್ತಿರುವಾಗ ರಾಜ್ಯದಿಂದ ಆಯ್ಕೆಯಾದ ಬಿಜೆಪಿ ಹಾಗೂ ಅದರ ಮಿತ್ರ 27 ಸಂಸತ್ ಸದಸ್ಯರು ರಾಜ್ಯದಿಂದ ಆಯ್ಕೆಯಾದ ಅರ್ಥ ಸಚಿವರು ಮತ್ತಿತರರೆ ಸಚಿವರು ಬಾಯಿ ಮುಚ್ಚಿಕೊಂಡು ಮೌನ ವಹಿಸಿ ರಾಜ್ಯದ ವಿರೋಧಿ ನೀತಿ ಅನುಸರಿಸಿದ್ದರಿಂದ ಒಕ್ಕೂಟ ಸರ್ಕಾರವು ಇದುವರೆಗೂ ಒಂದು ಪೈಸೆ ಬಿಡುಗಡೆ ಮಾಡಿಲ್ಲ ಎಂದು ಅವರು ಆಕ್ರೋಶ ಹೊರಹಾಕಿದರು.
ರಾಜ್ಯದ ಮತದಾರರು ಕೇಂದ್ರದ ಜನವಿರೋಧಿ ನೀತಿಯನ್ನು ಅರಿಯಬೇಕು. ಬಿಜೆಪಿಯ ಐವರು ಸಂಸದರು ಕಳೆದ ಐದು ವರ್ಷಗಳಲ್ಲಿ ಒಂದೇ ಒಂದು ಮಾತನ್ನು ಸಂಸತ್ತಿನಲ್ಲಿ ಮಾತನಾಡಿಲ್ಲ. ಅಂತಹ ಜನವಿರೋಧಿ ಪಕ್ಷಕ್ಕೆ ಮತ್ತೆ ಅವಕಾಶ ಕೊಡಬಾರದು ಎಂದು ಅವರು ಒತ್ತಾಯಿಸಿದರು.
ಸಿಪಿಐಎಂ ಚಿಕ್ಕಬಳ್ಳಾಪುರ ಮತಕ್ಷೇತ್ರದಲ್ಲಿ ಮಾತ್ರವೇ ಸ್ಪರ್ಧಿಸಲು ಉದ್ದೇಶಿಸಿದೆ. ಆದ್ದರಿಂದ ಆ ಕ್ಷೇತ್ರದಲ್ಲಿ ಸಿಪಿಐಎಂಗೆ ಉಳಿದೆಡೆ ಬಹುತೇಕ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಗೆಲ್ಲಿಸಲು ಮನವಿ ಮಾಡಿದ ಅವರು, ದೇಶದ ಹಾಗೂ ರಾಜ್ಯದ ಎಲ್ಲ ದುಡಿಯುವ ಜನರನ್ನು ಅತ್ಯಂತ ಸಂಕಷ್ಟಕ್ಕೀಡು ಮಾಡುವ ಜಾಗತೀಕರಣದ ನೀತಿಗಳನ್ನು ಬೆಂಬಲಿಸುವ ಮತ್ತು ಕೋಮುವಾದಕ್ಕೆ ಸಂಬಂಧಿಸಿ ಮೃಧು ಧೋರಣೆಯನ್ನು ತಾಳುವ ಕಾಂಗ್ರೆಸ್ ಪಕ್ಷವು ಜನತೆಗೆ ನೈಜ ಪರ್ಯಾಯವಲ್ಲದಿದ್ದರೂ ಸರ್ವಾಧಿಕಾರಿ ಹಾಗೂ ಮನುವಾದ ಮತ್ತು ಹಿಂದುತ್ವ ರಾಷ್ಟ್ರವನ್ನು ದೇಶದ ಮೇಲೆ ಹೇರಲಿರುವ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ಇದು ಅನಿವಾರ್ಯವಾಗಿದೆ ಎಂದರು.
ಮತದಾರರು ಬಿಜೆಪಿ ಹಾಗೂ ಅದರ ಮಿತ್ರರನ್ನು ಸೋಲಿಸುವ ಕರ್ತವ್ಯದ ಜೊತೆ ಜನವಿರೋಧಿ ಆರ್ಥಿಕ ನೀತಿ ಹಾಗೂ ಸೌಹಾರ್ದತೆ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಚಳುವಳಿಯಲ್ಲಿ ತೊಡಗುವ ಮತ್ತೊಂದು ಕರ್ತವ್ಯದಲ್ಲಿ ತೊಡಗಬೇಕು ಎಂದು ಅವರು ಕೋರಿದರು. ಸುದ್ದಿಗೋಷ್ಠಿಯಲ್ಲಿ ಯು. ಬಸವರಾಜ್, ಭೀಮಶೆಟ್ಟಿ ಯಂಪಳ್ಳಿ, ಎಂ.ಬಿ. ಸಜ್ಜನ್, ಶರಣಬಸಪ್ಪ ಮಮಶೆಟ್ಟಿ, ಶ್ರೀಮಂತ್ ಬಿರಾದಾರ್ ಮುಂತಾದವರು ಉಪಸ್ಥಿತರಿದ್ದರು.