ಏ. 1 ರಿಂದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳು ಆರಂಭ
ಕಲಬುರಗಿ:ಮಾ.30: ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿಯೂ ಸಹ 2024-25ನೇ ಸಾಲಿಗೆ ಎಲ್ಲಾ ಮಂಜೂರಾತಿಗಳನ್ನು ಪಡೆದ ಹಾಗೂ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 2024ರ ಏಪ್ರಿಲ್ 1 ರಿಂದ ಆರಂಭಿಸಬಹುದಾಗಿದೆ ಎಂದು ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.
ಮುಂದಿನ ಆರ್ಥಿಕ ವರ್ಷ 2024-25ನೇ ಸಾಲಿನ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್‍ಗಳ ಕ್ರಿಯಾ ಯೋಜನೆಗಳನ್ನು ಈಗಾಗಲೇ ಅನುಮೋದನೆ ನೀಡಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಿಗೆ ತಲುಪಿಸಲಾಗಿದ್ದು, ದಿನಾಂಕ: 01-04-2024 ರಿಂದ ಕಾಮಗಾರಿಗಳನ್ನು ಪ್ರಾರಂಭಿಸಬೇಕೆಂದು ಈಗಾಗಲೇ ಸಭೆ ನಡೆಸಿ ಜಿಲ್ಲೆಯ ಎಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳು, ಎಲ್ಲಾ ಸಹಾಯಕ ನಿರ್ದೇಶಕರು (ಗ್ರಾಉ) ಹಾಗೂ ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಕಲಬುರಗಿ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ನರೇಗಾ ಕೂಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿರುವ ಸ್ಥಳಗಳಲ್ಲಿ ನೆರಳಿನ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಓ.ಆರ್.ಎಸ್. ಪ್ಯಾಕೇಟ್ ಕಡ್ಡಾಯವಾಗಿ ಇರುವಂತೆ ನೋಡಿಕೊಳ್ಳುವಂತೆ ಸಂಬಂಧಪಟ್ಟ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸಹಾಯಕ ನಿರ್ದೇಶಕರು (ಗ್ರಾಉ) ಇವರು ಉಸ್ತುವಾರಿ ವಹಿಸಿಕೊಳ್ಳಬೇಕು. ಸಂಬಂಧಿಸಿದ ತಾಂತ್ರಿಕ ಸಹಾಯಕರು, ಬಿ.ಎಫ್.ಟಿ.ಗಳು ಹಾಗೂ ಸಹಾಯಕ ನಿರ್ದೇಶಕರು ಪ್ರತಿದಿನ ಬೆಳಿಗ್ಗೆ 7 ಗಂಟೆಯೊಳಗಾಗಿ ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಹಾಜರಿದ್ದು, ಕಾಮಗಾರಿ ವೀಕ್ಷಣೆ ಮಾಡಬೇಕು.
ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಎಲ್ಲಾ ಅನುಷ್ಟಾನ ಇಲಾಖೆಗಳ ಅಧಿಕಾರಿಗಳು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಗಳ ಅನುಷ್ಠಾನ ಸಂದರ್ಭದಲ್ಲಿ ಚುನಾವಣಾ ನೀತಿ ಸಂಹಿತೆಯ ಮಾರ್ಗಸೂಚಿಯನ್ನು ತಪ್ಪದೇ ಪಾಲಿಸಬೇಕೆಂದು ಅವರು ತಿಳಿಸಿದ್ದಾರೆ.