ಕಾನ್ಸ್‍ಟೇಬಲ್ ಹುದ್ದೆಗೆ ವಯೋಮಿತಿ ಹೆಚ್ಚಿಸಿ
ಸಂಜೆವಾಣಿ ನ್ಯೂಸ್
ಮೈಸೂರು.ಸೆ.19:- ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಗೆ ನೇಮಕಾತಿ ವಯೋಮಿತಿ ಹೆಚ್ಚಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಹಲವು ರಾಜ್ಯಗಳಲ್ಲಿ ಪೊಲೀಸ್ ಕಾನ್ಸ್‍ಟೇಬಲ್ ವಯೋಮಿತಿ ಆಯಾ ವರ್ಗಗಳಿಗೆ ಒಂದೊಂದು ರೀತಿ ಇದೆ. ಎಲ್ಲಾ ರಾಜ್ಯಗಳಲ್ಲೂ 30-35 ವರ್ಷದ ಮೇಲೆ ಇದೆ. ಆದರೆ, ನಮ್ಮ ರಾಜ್ಯದಲ್ಲಿ 27 ವರ್ಷಕ್ಕೆ ಮಿತಿಗೊಳಿಸಲಾಗಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಅತಿ ಕಡಿಮೆ ಎಂದು ಬೇಸರಿಸಿದರು.
ಸಾಮಾನ್ಯ ವರ್ಗಕ್ಕೆ 30, ಪ.ಜಾ, ಪ.ಪಂ ವಿದ್ಯಾರ್ಥಿಗಳಿಗೆ 33 ವರ್ಷಕ್ಕೆ ಏರಿಕೆ ಮಾಡಬೇಕು. ಪೊಲೀಸ್ ಇಲಾಖೆಯಲ್ಲಿ ಹಲವು ವರ್ಷಗಳಿಂದ ನೇಮಕಾತಿ ಆಗಿಲ್ಲ. ಕೂಡಲೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ರಾಜ್ಯದಲ್ಲಿರುವ ನಿರುದ್ಯೋಗ ಸಮಸ್ಯೆ ಬಗೆಹರಿಸಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪೊಲೀಸ್ ಇಲಾಖೆಗೆ ಸೇರಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.