ಗಣೇಶನ ಭಕ್ತರಿಗೆ ಲಡ್ಡು ಪ್ರಸಾದ ವಿತರಿಸಿದ ಸಚಿವ ಖಂಡ್ರೆ
ಭಾಲ್ಕಿ:ಸೆ.೧೯:ಪಟ್ಟಣದಲ್ಲಿ ವಿಘ್ನ ನಿವಾರಕ ವಿನಾಯಕ್ ನಿಗೆ ಮಂಗಳವಾರ ಸಂಭ್ರಮದಿAದ ವಿದಾಯ ಹೇಳಲಾಯಿತು.
ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಕಳೆದ ಸೆ.೭ರಂದು ಪಟ್ಟಣದ ವಿವಿಧ ಕಡೆಗಳಲ್ಲಿ ವಿವಿಧ ಗಣೇಶ ಮಂಡಳದ ವತಿಯಿಂದ ನೂರಕ್ಕೂ ಅಧಿಕ ಗಣೇಶ್ ನ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಲಾಯಿತು.
ಹೀಗಾಗಿ ಕಳೆದ ಹನ್ನೊಂದು ದಿನಗಳಿಂದ ಪಟ್ಟಣದಲ್ಲಿ ಭಕ್ತಿಯ ವಾತಾವರಣ ನಿರ್ಮಾಣಗೊಂಡಿತು. ಎಲ್ಲೆಡೆ ವಿವಿಧ ಮಾದರಿಗಳಲ್ಲಿ ಬೃಹತ್ ಪೆಂಡಾಲ್ ನಿರ್ಮಿಸಿ ಶ್ರದ್ಧೆ, ಭಕ್ತಿಯಿಂದ ಗಣೇಶ್ ನಿಗೆ ಪೂಜೆ, ಪುನಸ್ಕಾರ ನಡೆದಿದ್ದವು.
ಜತೆಗೆ ಹಲವೆಡೆ ಸಾಂಸ್ಕೃತಿಕ ಕಾರ್ಯಕ್ರಮ, ಅನ್ನದಾಸೋಹ ಮೂಲಕ ಗಣೇಶ್‌ನ ಉತ್ಸವ ತೆರೆ ಕಂಡಿತು.
ಗಣೇಶ್ ವಿಸರ್ಜನೆಗೂ ಮುನ್ನ ಗಣೇಶ ನ ಪೆಂಡಾಲ್ ಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭೇಟಿ ನೀಡಿ ಪೂಜೆ ನೆರವೇರಿಸಿ ದರುಶನ ಪಡೆದು ಭಕ್ತರಿಗೆ ಲಡ್ಡು ಪ್ರಸಾದ ವಿತರಿಸಿದರು.
ವಿವಿಧೆಡೆ ಅನ್ನದಾಸೋಹ
ಗಣೇಶ್ ನ ವಿಸರ್ಜನೆಗೂ ಮುನ್ನ ಎಲ್ಲ ಗಣೇಶ್ ನ ಪೆಂಡಾಲ್ ಗಳಲ್ಲಿ ಅನ್ನದಾಸೋಹ ಕಾರ್ಯಕ್ರಮ ನೆರವೇರಿತು. ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರ ಚೌಕ್ ಗಣೇಶ ಮಂಡಳದ ಪೆಂಡಾಲ್ ನಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರ ಸಂಗಮೇಶ ಹುಣಜೆ ಮದಕಟ್ಟಿ ಅವರು ಮಂಗಳವಾರ ಏರ್ಪಡಿಸಿದ್ದ ಅನ್ನದಾಸೋಹ ವಿತರಣೆ ಕಾರ್ಯಕ್ರಮಕ್ಕೆ ಬೀದರ್ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಶಿವಶಂಕರ ಕಾಮಶೆಟ್ಟಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಎಇಇ ಅಲ್ತಾಫ್, ಎಂಜನಿಯರ್ ಗಳಾದ ಲೋಹಿತ, ಅನ್ವರ್, ಪ್ರಥಮ ದರ್ಜೆ ಗುತ್ತಿಗೆದಾರ ಸಂಗಮೇಶ ಹುಣಜೆ ಮದಕಟ್ಟಿ, ಪ್ರಮುಖರಾದ ಬಸವರಾಜ ಪನಶೆಟ್ಟೆ, ಜಗದೀಶ ಬಿರಾದಾರ್, ಸತೀಶ ವಾಡೆ, ಸಂಜು ಚವಳೆ, ಭದ್ರೇಶ ಸ್ವಾಮಿ, ಶೈಲೇಶ ರಿಕ್ಕೆ, ನಂದು ಸಜ್ಜನಶೆಟ್ಟಿ, ಶಿವಕುಮಾರ ಬಿರಾದಾರ್ ಸೇರಿದಂತೆ ಹಲವರು ಇದ್ದರು.
ಅದ್ಧೂರಿ ಮೆರವಣಿಗೆ
ಪಟ್ಟಣದ ವಿವಿಧೆಡೆ ಗಣೇಶ ಚತುರ್ಥಿ ನಿಮಿತ್ತ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳನ್ನು ಮಂಗಳವಾರ ರಾತ್ರಿ ಅದ್ಧೂರಿ ಮೆರವಣಿಗೆ ಮೂಲಕ ವಿಸರ್ಜಿಸಲಾಯಿತು.
ಮೆರವಣಿಗೆಯುದ್ದಕ್ಕೂ ಯುವಕರು, ಮಹಿಳೆಯರು, ಮಕ್ಕಳು ಡಿಜೆ ಸೌಂಡ್ ನಲ್ಲಿ ಮೊಳಗಿದ ಭಕ್ತಿ, ಚಲನಚಿತ್ರ ಗೀತೆಗಳಿಗೆ ಹೆಜ್ಜೆ ಹಾಕಿದರು. ಯುವಕರು ಪರಸ್ಪರರ ಮೇಲೆ ಗುಲಾಲ್ ಎರಚಿಕೊಂಡು, ಸಿಳ್ಳೆ, ಕೇಕೆ ಹಾಕುತ್ತ ಭರ್ಜರಿ ಸ್ಟೆಪ್ಸ್ ಹಾಕಿ ಸಂಭ್ರಮಿಸಿದರು.
ರಸ್ತೆಯ ಎರಡು ಬದಿಗಳಲ್ಲಿ ನಿಂತುಕೊAಡ ಜನರು ವಿವಿಧ ಬಗೆಯ ಗಣೇಶ ಮೂರ್ತಿಗಳನ್ನು ಕಂಡು ಸಂತಸ ವ್ಯಕ್ತಪಡಿಸಿ, ದೂರದಿಂದಲೇ ಭಕ್ತಿ, ಭಾವದಿಂದ ಕೈಮುಗಿದು ನಮಸ್ಕರಿಸಿ ಗಣೇಶನ ಕೃಪೆಗೆ ಪಾತ್ರರಾಗಲು ಪ್ರಯತ್ನಿಸಿದರು.
ಯುವಕರು ಸಿಡಿಸಿದ ಬಗೆ ಬಗೆಯ ಪಟಾಕಿಗಳು ಆಕಾಶದಲ್ಲಿ ಬಣ್ಣ ಬಣ್ಣದ ಚಿತ್ತಾರ ಮೂಡಿಸಿ ನೋಡುಗರನ್ನು ಆಕರ್ಷಿಸಿದವು. ಅಹಿತಕರ ಘಟನೆ ನಡೆಯದಂತೆ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಪಟ್ಟಣದ ಹೊರವಲಯದಲ್ಲಿ ನಿರ್ಮಿಸಿದ ಕೃತಕ ಹೊಂಡದಲ್ಲಿ ಒಂದಾದ ಮೇಲೊಂದರAತೆ ಗಣೇಶ ಮೂರ್ತಿಗಳನ್ನು ವಿಸರ್ಜಿಸಿದರು.