ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಬೇಕು
ಸಂಜೆವಾಣಿ ನ್ಯೂಸ್
ಮೈಸೂರು.ಸೆ.19:- ರಾಜ್ಯಾದ್ಯಂತ ಜೆಡಿಎಸ್ ಪಕ್ಷವನ್ನು ಬೇರುಮಟ್ಟದಲ್ಲಿ ಸಂಘಟನೆ ಮಾಡಬೇಕು ಹಾಗೂ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ಗುರುತಿಸಬೇಕು ಎಂಬ ಕಾರಣಕ್ಕಾಗಿ ಪಕ್ಷದ ಸದಸ್ಯತ್ವ ಅಭಿಯಾನ ಪ್ರಾರಂಭಿಸಲಾಗಿದೆ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ನಗರದ ಮಂಜುನಾಥಪುರದಲ್ಲಿರುವ ಕೆಂಪೇಗೌಡ ಕಲ್ಯಾಣಮಂಟಪದ ಆವರಣದಲ್ಲಿ ಜಿಲ್ಲಾ ಜೆಡಿಎಸ್ ಘಟಕದಿಂದ ಏರ್ಪಡಿಸಲಾಗಿದ್ದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಬೇಕಾಗಿದೆ. ಬೂತ್‍ನಲ್ಲಿರುವ ಎಲ್ಲ ಜಾತಿ, ಸಮುದಾಯಗಳನ್ನೊಳಗೊಂಡು ಪಕ್ಷ ಸಂಘಟನೆ ಮಾಡಬೇಕು. ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿ ಅವರ ಕೈ ಬಲಪಡಿಸಲು ನಾವೆಲ್ಲರೂ ಶಕ್ತಿಮೀರಿ ಶ್ರಮಿಸಿ, ಸದಸ್ಯತ್ವ ಅಭಿಯಾನದ ಮೂಲಕ ಪಕ್ಷ ಸಂಘಟನೆ ಮಾಡಬೇಕಾಗಿದೆ ಎಂದು ಕರೆ ನೀಡಿದರು.
ಹೆಚ್.ಡಿ.ದೇವೇಗೌಡರು ಪ್ರಧಾನಿ ಆಗಿದ್ದಾಗ ಹಾಗೂ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ 34 ತಿಂಗಳ ಅವಧಿಯಲ್ಲಿ ರೈತರ ಸಾಲ ಮನ್ನಾ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಅವುಗಳನ್ನು ಜನರಿಗೆ ಮನವರಿಕೆ ಮಾಡಿ, ಹೆಚ್ಚು ಜನರನ್ನು ಸದಸ್ಯರನ್ನಾಗಿ ನೋಂದಾಯಿಸಬೇಕು ಎಂದರು.
ದೇವೇಗೌಡರು ಮತ್ತು ಕುಮಾರಸ್ವಾಮಿ ಎಂದೂ ಜಾತಿ ರಾಜಕಾರಣ ಮಾಡಿದವರಲ್ಲ. ಅವರು ಎಲ್ಲ ಜಾತಿ ಮತ್ತು ಧರ್ಮದವರನ್ನು ಪ್ರೀತಿಸುತ್ತಾರೆ. ಅವರ ನಾಯಕತ್ವದಲ್ಲಿ ಪಕ್ಷ ಮತ್ತೆ ಬಲಗೊಳ್ಳಲಿದೆ. ರಾಜ್ಯದಲ್ಲಿ ಸ್ಥರವಾದ, ಬಲವಾದ ಪ್ರಾದೇಶಿಕ ಪಕ್ಷ ಜೆಡಿಎಸ್ ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ನೀವೆಲ್ಲರೂ ಹೊರಬೇಕು ಎಂದರು.
92ರ ಇಳಿ ವಯಸ್ಸಿನಲ್ಲಿ ದೇವೇಗೌಡರು ಪಕ್ಷ ಸಂಘಟನೆ ಬಗ್ಗೆ ಉತ್ಸಾಹಿಗಳಾಗಿದ್ದಾರೆ. ಮತ್ತೆ ನಾನು ರಾಜ್ಯ ಪ್ರವಾಸ ಮಾಡುತ್ತೇನೆ ಎನ್ನುತ್ತಾರೆ. ಯುವಕರಾದ ನೀವು ಇನ್ನೆಷ್ಟು ಹುರುಪಿನಿಂದ ಕೆಲಸ ಮಾಡಬೇಕು ಎಂದು ಆಲೋಚಿಸಿ. ಇಲ್ಲಿಯವರೆಗೂ ಪಕ್ಷವನ್ನು ಜೋಪಾನವಾಗಿ ಕಾಪಾಡಿದ್ದೀರಿ. ಮುಂದೆ ಕೂಡ ಪಕ್ಷವನ್ನು ಬಲಪಡಿಸಿ ಎಂದರು.
ನಾವು ರಾಜ್ಯದ 30 ಜಿಲ್ಲೆಗಳಲ್ಲಿಯೂ ಸಭೆ ನಡೆಸುತ್ತೇವೆ. ಎಲ್ಲೆಡೆ ಪಕ್ಷ ಸಂಘಟಿಸುವ ಕೆಲಸ ಮಾಡುತ್ತೇವೆ. ಸ್ಥಳೀಯವಾಗಿ ಬೂತ್ ಮಟ್ಟದಲ್ಲಿ ಸದಸ್ಯತ್ವ ಅಭಿಯಾನ ಕೈಗೊಳ್ಳಬೇಕು. ಪ್ರತೀ ಬೂತ್‍ನಲ್ಲಿ ಕನಿಷ್ಠ 30 ಮಂದಿಯನ್ನು ಸದಸ್ಯರನ್ನಾಗಿ ಹಾಗೂ ಒಬ್ಬರನ್ನು ಸಕ್ರಿಯ ಸದಸ್ಯರನ್ನಾಗಿ ನೋಂದಾಯಿಸಬೇಕು. ನಿಮ್ಮ ಜೊತೆಯಲ್ಲಿ ಸ್ಥಳೀಯ ನಾಯಕರಿರುತ್ತಾರೆ ಎಂದು ಹೇಳಿದರು.
ಜೆಡಿಎಸ್, ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಅದು ಚುನಾವಣಾ ಕಾರಣಕ್ಕೂ ಇರಬಹುದು ಅಥವ ಸರ್ಕಾರದ ವೈಫಲ್ಯದ ವಿರುದ್ಧ ಸದನದ ಒಳಗೆ ಹಾಗೂ ಹೊರಗೆ ಹೋರಾಟ ರೂಪಿಸಲೂ ಇರಬಹುದು. ಈ ಮೈತ್ರಿ ಮತ್ತಷ್ಟು ಗಟ್ಟಿಯಾಗಬೇಕು ಎಂದಾದಲ್ಲಿ ನಾವು ಕೂಡ ಗಟ್ಟಿಯಾಗಬೇಕು ಎಂದರು.
ಮಾಜಿ ಸಚಿವ ಸಾ.ರಾ.ಮಹೇಶ್ ಮಾತನಾಡಿ, ಪಕ್ಷದ ಮುಖಂಡರು ಎಂದರೆ ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ಕಾಣಿಸಿಕೊಳ್ಳುವುದಲ್ಲ. ಪಕ್ಷವನ್ನು ಸದೃಢವಾಗಿ ಕಟ್ಟಲು ಕಾರ್ಯಕರ್ತರೊಂದಿಗೆ ಶ್ರಮಿಸಬೇಕು. ವಾರ್ಡ್ ಮಟ್ಟದಲ್ಲಿ ಮನೆಮನೆಗಳಿಗೆ ತೆರಳಿ ಪಕ್ಷ ಕಟ್ಟಬೇಕು. ಮುಂದೆ ಜಿ.ಪಂ, ತಾ.ಪಂ, ನಗರಪಾಲಿಕೆ ಚುನಾವಣೆ ಇದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕು ಎಂದು ಹೇಳಿದರು.
ಮಾಜಿ ಸಚಿವ ಜಿ.ಟಿ.ದೇವೇಗೌಡ ಮಾತನಾಡಿ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಸೂಚನೆ ಮೇರೆಗೆ ಸದಸ್ಯತ್ವ ಅಭಿಯಾನ ಆರಂಭವಾಗಿದೆ. ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಅವರಿಗೆ ಜವಾಬ್ದಾರಿ ವಹಿಸಲಾಗಿದೆ. ಅವರು ಈ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ. ಸ್ಥಳೀಯ ಮುಖಂಡರು ಅವರಿಗೆ ಕೈ ಜೋಡಿಸಿ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಮಾಜಿ ಶಾಸಕ ಅನ್ನದಾನಿ, ಎಂಎಲ್ ಸಿ ಸಿ.ಎನ್.ಮಂಜೇಗೌಡ ಸೇರಿದಂತೆ ಸ್ಥಳೀಯ ಜೆಡಿಎಸ್ ಮುಖಂಡರು ಇದ್ದರು.