ರಾಜ್ಯದ 28 ಸ್ಥಾನಗಳಲ್ಲಿ ಬಿಜೆಪಿ ಗೆಲವು ನಿಶ್ಚಿತ: ಪ್ರಹ್ಲಾದ ಜೋಶಿ ವಿಶ್ವಾಸ
ವಿಜಯಪುರ, ಮಾ.30 :
ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ರಾಜ್ಯದ 28 ಸ್ಥಾನಗಳಲ್ಲಿ ಭರ್ಜರಿ ಗೆಲವು ಸಾಧಿಸಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.
ಲೋಕಸಭಾ ಚುನಾವಣೆ ಹಿನ್ನೆಲೆ ವಿಜಯಪುರ ಹೊರ ವಲಯದ ತೊರವಿ ನರಸಿಂಹ ದೇವರ ದರ್ಶನ ಪಡೆದ ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದರು.
ಚುನಾವಣೆಗೂ ಮುನ್ನ ಹಾಗೂ ಬಳಿಕ ಜೊತೆಗೆ ನಮ್ಮ ಮನೆಯಲ್ಲಿ ಯಾವುದೇ ಶುಭ ಸಮಾರಂಭ ನಡೆದರೂ ಕುಟುಂಬ ಸಮೇತವಾಗಿ ಮನೆ ದೇವರ ದರ್ಶನ ಮಾಡುವೆ.
ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಬಳಿಕ ಮುಂಬರುವ 15ರಂದು ನಾಮಪತ್ರ ಸಲ್ಲಿಸುವೆ.
ನಾಮಪತ್ರ ಸಲ್ಲಿಕೆಗೂ ಮುನ್ನ ಮನೆದೇವರು ನರಸಿಂಹ ದೇವರ ದರ್ಶನ ಮಾಡುವುದನ್ನು ಪಾಲಿಸಿಕೊಂಡು ಬಂದಿದ್ದೇನೆ ಎಂದರು.
ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಬೇಕು
ಪ್ರಚಂಡ ಬಹುಮತ ಅವರಿಗೆ ಸಿಗಬೇಕು. ಮೋದಿ ಅವರು ಪ್ರಧಾನಿಯಾಗಿ ಆಯ್ಕೆಯಾಗಲು ಹೆಚ್ಚಿನ ಎಂಪಿಗಳು ಬೇಕು. ಆ ಎಂಪಿಗಳ ಪೈಕಿ ನಾನೂ ಒಬ್ಬ ಇರಬೇಕೆಂದು ಬಯಸಿದ್ದೇನೆ ಎಂದು ಹೇಳಿದರು.
ಎನ್ ಡಿ ಎ ಮೈತ್ರಿಕೂಟ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಶಕ್ತಿಮೀರಿ ಪ್ರಯತ್ನ ಮಾಡುತ್ತೇವೆ.
ಮೋದಿ ಅವರ ಹತ್ತು ವರ್ಷದ ಆಡಳಿತದಲ್ಲಿ ದೇಶದಲ್ಲಾದ ಬದಲಾವಣೆಯನ್ನು ಜನ ಗಮನಿಸಿದ್ದಾರೆ. ದುರ್ಬಲ ಆರ್ಥಿಕತೆಯನ್ನು ಹೊಂದಿದ್ದ ಭಾರತ ಜಗತ್ತಿನ ಐದನೇ ಬಲಿಷ್ಠ ಆರ್ಥಿಕ ಶಕ್ತಿಯ ದೇಶವಾಗಿದೆ. ಮೂರನೇ ಬಾರಿ ಅಧಿಕಾರಕ್ಕೆ ಬಂದರೆ ಭಾರತವನ್ನು ಜಗತ್ತಿನ ಮೂರನೇ ಆರ್ಥಿಕ ಬಲಿಷ್ಠ ರಾಷ್ಟ್ರವನ್ನಾಗಿಸುವೆ ಎಂದು ಮೋದಿ ಗ್ಯಾರಂಟಿ ಕೊಟ್ಟಿದ್ದಾರೆ.
ಮೋದಿ ಅವರ ಅಧಿಕಾರದಲ್ಲಿ ಉಗ್ರವಾದ ಬಹಳಷ್ಟು ಕಡಮೆಯಾಗಿದೆ. ಕಾಶ್ಮೀರದಲ್ಲಿ ಒಳ್ಳೆಯ ವಾತಾವರಣ ನಿರ್ಮಾಣವಾಗಿದೆ. ವಿಕಸಿತ ಭಾರತವಾಗಲು ಮೂರನೇ ಬಾರಿಗೆ ಮೋದಿ ಪ್ರಧಾನಿಯಾಗಬೇಕು.
ಈ ಸಂದರ್ಭದಲ್ಲಿ ಒಡಕಿನ ಮಾತುಗಳು ತಪ್ಪು ತಿಳುವಳಿಕೆಗಳು ಬರಬಾರದು. ಎಲ್ಲವನ್ನು ಸರಿ ಮಾಡಿಕೊಂಡು ಹೋಗಬೇಕೆಂದು ಜೋಶಿ ಸಲಹೆ ನೀಡಿದರು.
ಬಂಜಾರ ಮತಗಳು ನನಗೆ ಬೇಡ ಎಂದು ವಿಜಯಪುರ ಎಸ್ಸಿ ಮೀಸಲು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಹೇಳಿದ್ದಾರೆ ಎಂಬ ಆರೋಪದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಜೋಶಿ,
ಆ ರೀತಿ ಯಾರು ಹೇಳಲು ಸಾಧ್ಯವಿಲ್ಲ. ಆ ರೀತಿ ಹೇಳಿದರೆ ಅದನ್ನು ಸರಿಪಡಿಸಲಾಗುತ್ತದೆ.
ಎಲ್ಲಾ ವರ್ಗದ ಮತಗಳು ನಮಗೆ ಬೇಕು ಎಂದರು.
ರಾಜ್ಯದ 28ಕ್ಕೆ 28 ಸ್ಥಾನಗಳನ್ನು ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ರೌಡಿ ಎಂದು ಮಾತನಾಡಿರುವ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವಿಚಾರ ಪ್ರತಿಕ್ರಿಯೆ ನೀಡಿದ ಅವರು, ಅವರ ಭಾಷೆಯನ್ನೇ ನೋಡಿದರೆ ನಿಮಗೆ ಅರ್ಥವಾಗುತ್ತದೆ. ಬಾಯಿಗೆ ಬಂದಂತೆ ಮನಬಂದಂತೆ ಏಕವಚನದಲ್ಲಿ ಟೀಕೆ ಮಾಡುತ್ತಾರೆ.
ಇವರು ಹತಾಶೆರಾಗಿ ಸರ್ಟಿಫಿಕೇಟ್ ಕೊಡುವ ಮಟ್ಟಕ್ಕೆ ಹೋಗಿದ್ದಾರೆ.
ತಮ್ಮ ಎಲ್ಲಾ ದೋಷಗಳಿಗೂ ಸಿದ್ದರಾಮಯ್ಯ ಕೇಂದ್ರವನ್ನು ದೂಷಿಸುವ ಮೂಲಕ ಕಾಲಹರಣ ಮಾಡುತ್ತಾರೆ. ಅವರ ಮಗ ಸರ್ಟಿಫಿಕೇಟ್ ಕೊಡುವ ಹಂತಕ್ಕೆ ಬೆಳೆದಿದ್ದಾರೆ. ಇದಕ್ಕೆ ಜನರೇ ಉತ್ತರ ನೀಡುತ್ತಾರೆ.
ಅಮಿತ್ ಹಾಗೂ ಮೋದಿ ಅವರ ನೇತೃತ್ವದಲ್ಲಿ ನಾವು ಎರಡು ಬಾರಿ ಚುನಾವಣೆಗಳನ್ನು ಗೆದ್ದಿದ್ದೇವೆ.
ಕರ್ನಾಟಕದಲ್ಲಿ ಚುನಾವಣೆ ಗೆದ್ದಿದ್ದೇವೆ ಎಂಬ ದುರಹಂಕಾರದಲ್ಲಿ ಮೆರೆಯಬೇಡಿ ಎಂದು ಸೂಚ್ಯವಾಗಿ ಕಾಂಗ್ರೆಸ್ ನವರಿಗೆ ಎಚ್ಚರಿಕೆ ನೀಡಿದರು.
ಇಡೀ ದೇಶದಲ್ಲಿ ಮೂರು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಸರ್ಕಾರವಿದೆ. ಹಿಮಾಚಲ ಪ್ರದೇಶದಲ್ಲಿ ನಿಮ್ಮ ಸರ್ಕಾರ ಅಲಗಾಡುತ್ತಿದೆ. ಕಾಂಗ್ರೆಸ್ ನವರು ಸೋಲುತ್ತೇವೆ ಎಂಬ ಹತಾಶೆಯಿಂದ ಹೀಗೆ ಮಾತನಾಡುತ್ತಿದ್ದಾರೆ.
ಸಿದ್ದರಾಮಯ್ಯನವರ ಕ್ಷೇತ್ರದ ಲೋಕಸಭಾ ಅಭ್ಯರ್ಥಿ ಲಕ್ಷ್ಮಣಗೆ ಡಿಪಾಸಿಟ್ ಬಂದರೆ ಸಾಕು ಎನ್ನುವಂತಾಗಿದೆ.
ಹತಾಶೆಯಿಂದ ಕೆಟ್ಟ ಭಾಷೆಯನ್ನು ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಪ್ರಹ್ಲಾದ ಜೋಶಿ ಬದಲಾಗಿ ಬೇರೆಯವರಿಗೆ ಟಿಕೆಟ್ ನೀಡಬೇಕೆಂಬ ದಿಂಗಾಲೇಶ್ವರ ಸ್ವಾಮೀಜಿ ಒತ್ತಾಯ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು,
ದಿಂಗಾಲೇಶ್ವರ ಸ್ವಾಮೀಜಿಗಳ ಹೇಳಿಕೆ ಕುರಿತು ನಾನು ಪ್ರತಿಕ್ರಿಯೆ ನೀಡಲ್ಲ. ಅವರ ಎಲ್ಲಾ ಹೇಳಿಕೆಗಳು ನನಗೆ ಆಶೀರ್ವಾದವಿದ್ದಂತೆ. ಅವರ ಆಶೀರ್ವಾದದಿಂದ ನಾನು ಚುನಾವಣೆಯಲ್ಲಿ ಗೆಲ್ಲುವೆ. ಇದಕ್ಕಿಂತ ಹೆಚ್ಚಿಗೆ ನಾನು ಏನು ಹೇಳಲ್ಲ ಎಂದರು.