ಸೇವಾಲಾಲರು ಮನುಕುಲೋದ್ಧಾರಕರು: ದಾಕ್ಷಾಯಣಿ ಬಿರಾದಾರ
ವಿಜಯಪುರ,ಮಾ.30:ದೇಶದ ಇಪ್ಪತ್ನಾಲ್ಕು ರಾಜ್ಯಗಳಲ್ಲಿ ಹರಿದು ಹಂಚಿ ನೆಲೆ ಕಂಡುಕೊಂಡಿರುವ ಬಂಜಾರಾ ಸಮುದಾಯದವರು ಕಾಯಕನಿಷ್ಠ ಶ್ರಮ ಜೀವಿಗಳಾಗಿದ್ದಾರೆ. ಅವರ ಮೂಲ ಉದ್ಯೋಗ ಪಶುಸಂಗೋಪನೆ ಮತ್ತು ವ್ಯಾಪಾರವಾಗಿದೆ. ರಾಣಾ ಪ್ರತಾಪಸಿಂಗ್ ಸೋಲಿನ ಬಳಿಕ ಕಾಡು ಸೇರಿ ಅಲೆಮಾರಿಗಳಾಗಿ ಬದುಕಿದರು. ಈಗ ದೇಶದಾದ್ಯಂತ ಗ್ರಾಮಗಳನ್ನು ನಿರ್ಮಿಸಿಕೊಂಡು ಸ್ವಾವಲಂಬಿಗಳಾಗಿ ಬದುಕುತ್ತಿದ್ದಾರೆ. ಇದು ಎಲ್ಲರಿಗೂ ಹೆಮ್ಮೆ ತಂದಿದೆ ಎಂದು ದ್ರಾಕ್ಷಾಯಣಿ ಬಿರಾದಾರ ಆವರು ಹೇಳಿದರು.
ವೀರಶೈವ ಲಿಂಗಾಯತ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂತ ಸೇವಾಲಾಲರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಲಂಬಾಣಿ ಜನಾಂಗದ ಜಗದ್ಗುರು ಸಂತ ಸೇವಾಲಾಲರು ಕರ್ನಾಟಕದ ದಾವಣಗೆರೆ ಜಿಲ್ಲೆಯಲ್ಲಿ ಜನಿಸಿ ಸಾತ್ವಿಕ ಜೀವನವನ್ನು ಬದುಕಿದ್ದಾರೆ. ದೇವಿ ಆರಾಧಕರಾಗಿ ತಮ್ಮ ಜನರ ಅಲ್ಲದೆ ಲೋಕೋದ್ಧಾರಕ್ಕಾಗಿ ಬದುಕನ್ನೇ ತ್ಯಾಗ ಮಾಡಿದ್ದಾರೆಂದು ಅವರು ಹೇಳಿದರು.
ಇದೇ ವೇಳೆ ರಾಜ್ಯ ಬಂಜಾರಾ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಆಯ್ಕೆಯಾದ ಆರ್.ಬಿ. ನಾಯಕ ಮತ್ತು ಸುರೇಖಾ ರಾಠೋಡ ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಿ.ಸಿ. ನಾಗಠಾಣ ವಹಿಸಿದ್ದರು. ದಾಸೋಹಿಗಳಾದ ಇಂದುಮತಿ ಲಮಾಣಿ ಹಾಗೂ ಪರಿಷತ್ತಿನ ಅಧ್ಯಕ್ಷÀ ಜಂಬುನಾಥ ಕಂಚ್ಯಾಣಿ ಉಪಸ್ಥಿತರಿದ್ದರು.
ಅಮರೇಶ ಸಾಲಕ್ಕಿ ಸ್ವಾಗತಿಸಿದರು. ಪ್ರೊ. ಶರಣಗೌಡ ಪಾಟೀಲ ನಿರೂಪಿಸಿದರು. ಈರಣ್ಣ ತೊಂಡಿಕಟ್ಟಿ ವಂದಿಸಿದರು.
ಕಾರ್ಯಕ್ರಮದಲ್ಲಿ ಡಾ. ವಿ.ಡಿ. ಐಹೊಳ್ಳಿ, ಪರಶುರಾಮ ಪೋಳ, ಕಮಲಾ ಗೆಜ್ಜಿ, ಶಶಿಕಲಾ ರಾಠೋಡ, ಸಂಗೀತಾ ನಾಯಕ, ಶಾರದಾ ಲಮಾಣಿ, ರಮಾಬಾಯಿ ನಾಯಕ ಮುಂತಾದವರು ಉಪಸ್ಥಿತರಿದ್ದರು.