ಕಳಪೆ ಮಟ್ಟದ ಕಾಮಗಾರಿ ತನಿಖೆಗೆ ಆಗ್ರಹ
ರಾಯಚೂರು, ಮಾ.೩೦- ತಾಲೂಕಿನ ಮನ್ಸಲಾಪೂರು ಗ್ರಾಮದ ವಾಲ್ಮೀಕಿ ವೃತ್ತದಿಂದ ಡಾ. ಬಿ ಆರ್ ಅಂಬೇಡ್ಕರ್ ವೃತ್ತದ ವರೆಗೂ ಪಿಡಬ್ಲ್ಯೂ ಡಿ ಇಲಾಖೆಯಿಂದ ಕೈಗೊಂಡ ಸಿಸಿ ರಸ್ತೆ ಮತ್ತು ಒಳಚರಂಡಿ ಕಾಮಗಾರಿ ಅತ್ಯಂತ ಕಳಪೆ ಗುಣಮಟ್ಟದಿಂದ ಪ್ರಗತಿಯಲ್ಲಿದೆ ಎಂದು ದಲಿತ ಸಂರಕ್ಷ ಸಮತಿ ಕಲ್ಮಲಾ ಹೋಬಳಿ ಘಟಕ ಅಧ್ಯಕ್ಷ ಉದಯಕುಮಾರ ಅವರು ಆರೋಪಿಸಿದ್ದಾರೆ.
ಕಳೆದ ಒಂದು ವಾರದಿಂದ ಕಾಮಗಾರಿ ಕೈಗೆತ್ತಿಕೊಂಡಿದ್ದು, ಯೋಜನೆಯಂತೆ ಕಾಮಗಾರಿ ಮಾಡದೇ ಸಂಪೂರ್ಣ ಕಳಪೆ ಮಟ್ಟದಲ್ಲಿ ರಸ್ತೆ ಮತ್ತು ಒಳಚರಂಡಿ ನಿರ್ಮಾಣ ಮಾಡಲಾಗುತ್ತಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ಸಂಬಂಧ ಕಳೆದ ಐದು ದಿನಗಳಿಂದ ಕಾಮಗಾರಿ ಕುರಿತು ಅಧಿಕಾರಗಳ ಗಮನಕ್ಕೆ ತರಲಾಗಿದ್ದರೂ ನಿರ್ಲಕ್ಷ ?ಯ ವಹಿಸಿದ್ದಾರೆ. ಮಾಹಿತಿ ಕೇಳಿದರೆ ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಕಳಪೆ ಕಾಮಗಾರಿಗಳು ಹೆಚ್ಚಾಗಿದ್ದು, ಸರಕಾರದ ಹಣ ವ್ಯರ್ಥವಾಗುತ್ತಿದೆ ಎಂದು ದೂರಿದರು. ಕಾಮಗಾರಿ ಅತ್ಯಂತ ಕಳಪೆ ಮಟ್ಟದಿಂದ ಕೂಡಿದ್ದು, ಅಧಿಕಾರಿಗಳು ಮತ್ತು ಗುತ್ತೇದಾರ ಒಳ ಒಪ್ಪಂದ ಮಾಡಿಕೊಂಡು ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ, ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತನಿಖೆ ಕೈಗೊಂಡು ಗುಣಮಟ್ಟದ ಕಾಮಗಾರಿ ಮಾಡುವಂತೆ ಆಗ್ರಹಿಸಿದ್ದಾರೆ.