ಮ.ಮ.ಹಳ್ಳಿ ನಾಡಕಛೇರಿಗೆ ಬೆಂಕಿ: ದಾಖಲೆಗಳು ಭಸ್ಮ
ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಮಾ.30: ಪಟ್ಟಣದ ನಾಡಕಛೇರಿಯಲ್ಲಿ ಶುಕ್ರವಾರ ಸಂಜೆ ಕಾಣಿಸಿಕೊಂಡ ಆಕಸ್ಮಿಕ ಬೆಂಕಿಯಿಂದ ದಾಖಲೆಗಳು, ಪೀಠೋಪಕರಣಗಳು ಸೇರಿದಂತೆ ಇನ್ನಿತರೆ ವಸ್ತುಗಳು ಬೆಂಕಿಗೆ ಆಹುತಿಯಾಗಿ ಅಪಾರಪ್ರಮಾಣದ ನಷ್ಟ ಉಂಟಾಗಿದೆ.
ಪಟ್ಟಣದ ನಾಡಕಛೇರಿಯಲ್ಲಿ ವಿದ್ಯುತ್ ಶಾಟ್ ಸರ್ಕ್ಯೂಟ್ ಜರುಗಿದ್ದು, ಈ ಅವಘಡದಿಂದ ಕಚೇರಿಯಲ್ಲಿದ್ದ ಲಕ್ಷಾಂತರ ರೂ. ಬೆಲೆಬಾಳುವ 3 ಕಂಪ್ಯೂಟರ್, 1 ಸ್ಕ್ಯಾನರ್, 1 ಪ್ರಿಂಟರ್, ಪೀಠೋಪಕರಣಗಳು ಹಾಗು ದಾಖಲೆ, ಕಡತಗಳು ಸುಟ್ಟು ಭಸ್ಮವಾಗಿವೆ.
ಗುಡ್ ಫ್ರೈಡೆ ನಿಮಿತ್ತ ಕಚೇರಿಗೆ ರಜೆ ಇದ್ದು, ಜನಸಂದಣಿ, ಸಿಬ್ಬಂದಿಗಳು ಇರದ ಕಾರಣ ಯಾವುದೇ ಜೀವಹಾನಿಯಾಗಿಲ್ಲ ಎಂಬುದು ಸಮಾಧಾನದ ಸಂಗತಿಯಾಗಿದೆ. ಸುತ್ತಲಿನ ನಿವಾಸಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಮತ್ತು ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಹೊಸಪೇಟೆ ಅಗ್ನಿಶಾಮಕದಳ ಸಕಾಲಕ್ಕೆ ಆಗಮಿಸಿ, ಬೆಂಕಿನಂದಿಸಿ ಆಗುತ್ತಿರುವ ಹೆಚ್ಚಿನ ಅನಾಹುತವನ್ನು ತಪ್ಪಿಸಿದರು. ಈ ಸಂಬಂಧ ಪಟ್ಟಣದ‌ ಪೊಲೀಸ್ ಠಾಣೆ ಹಾಗೂ ಅಗ್ನಿಶಾಮಕದಳ ಉಪತಹಶಿಲ್ದಾರ ನಾಗರಾಜ್ ರವರು ನೀಡಿದ ಮಾಹಿತಿ ಮೇರೆಗೆ ದೂರು ದಾಖಲಿಸಿ ಕೊಂಡಿದ್ದು, ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.