ಬಿಜೆಪಿಗರ ಆಟ ನಡೆಯುವುದಿಲ್ಲ, ಜನ ಜಾಗೃತರಾಗಿದ್ದಾರೆ: ಕೊರಬು
ಅಫಜಲಪುರ:ಮಾ.30: ಚುನಾವಣೆ ಬಂದಾಗಲೆಲ್ಲ ಧರ್ಮ ಧರ್ಮಗಳ ಮಧ್ಯೆ ಮತ್ತು ಜಾತಿ ಜಾತಿಗಳ ನಡುವೆ ಕೋಮುಗಲಭೆ ಸೃಷ್ಟಿಸಿ ಜನರ ಮನಸ್ಸಿನ ಭಾವನೆಯನ್ನು ಕದಡುತ್ತಿರುವ ಬಿಜೆಪಿಗರ ಆಟ ಇನ್ನು ಮುಂದೆ ನಡೆಯುವುದಿಲ್ಲ. ಏಕೆಂದರೆ ಈ ದೇಶದ ನಾಗರಿಕರು ಜಾಗೃತರಾಗಿದ್ದಾರೆ ಎಂದು ಬಿಜೆಪಿ ವಿರುದ್ಧ ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಜೆ.ಎಂ ಕೊರಬು ಗುಡುಗಿದರು.
ಮುಂಬರುವ ಲೋಕಸಭೆ ಚುನಾವಣೆಯ ಅಂಗವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ದೊಡ್ಮನಿ ಅವರು ಮಾರ್ಚ್ 31ರ ರವಿವಾರದಂದು ಸಂಜೆ 4 ಗಂಟೆಗೆ ಪಟ್ಟಣದ ನ್ಯಾಷನಲ್ ಫಂಕ್ಷನ್ ನಲ್ಲಿ ನಡೆಯುವ ಕಾರ್ಯಕರ್ತರ ಬೃಹತ್ ಸಭೆಗೆ ಆಗಮಿಸುತ್ತಿರುವ ಹಿನ್ನೆಲೆ ತುರ್ತು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದಾಗಿ ಈ ನಾಡಿನ ಬಡ ಜನತೆಯ ಆರ್ಥಿಕ ಸಂಕಷ್ಟ ನಿರ್ವಹಣೆಗೆ ಸಹಕಾರಿಯಾಗಿದೆ. ಕಲಬುರಗಿ ಸಂಸದ ಉಮೇಶ ಜಾಧವ ರವರು ಕೇಂದ್ರದಲ್ಲಿ ತಮ್ಮದೇ ಬಿಜೆಪಿ ಸರ್ಕಾರ ಇದ್ದರೂ ಸಹ ಕಳೆದ 5 ವರ್ಷದಲ್ಲಿ ಜಿಲ್ಲೆಗಾಗಲಿ ಅಥವಾ ತಾಲೂಕಿಗಾಗಲಿ ಹೇಳಿಕೊಳ್ಳುವಂತಹ ಯಾವುದೇ ಯೋಜನೆ ತರದ ಹಿನ್ನೆಲೆ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಹೀಗಾಗಿ ಪರೋಪಕಾರ ಸೇವಾ ಮನೋಭಾವ ಮತ್ತು ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವ ರಾಧಾಕೃಷ್ಣ ದೊಡ್ಮನಿ ಅವರಿಗೆ ಈ ಬಾರಿ ಅಫಜಲಪುರ ಮತಕ್ಷೇತ್ರದ ಮತದಾರರು ಆಶೀರ್ವದಿಸುವ ಮೂಲಕ ಪ್ರಚಂಡ ಬಹುಮತದಿಂದ ಆಯ್ಕೆ ಮಾಡಲಿದ್ದಾರೆ ಎನ್ನವ ವಿಶ್ವಾಸ ನಮಗಿದೆ. ಈ ಬಾರಿ ಲೋಕಸಭೆ ಚುನಾವಣೆಯನ್ನು ಸಾಕಷ್ಟು ಶಕ್ತಿಯುತವಾಗಿ ಎದುರಿಸಲು ತಯಾರಿ ನಡೆಸಿದ್ದೇವೆ. ಕಳೆದ ಬಾರಿ ಆಗಿರುವ ಹಿನ್ನಡೆಗಿಂತ ಹೆಚ್ಚಿನ ಮತಗಳ ಮುನ್ನಡೆಯನ್ನು ಕಾಂಗ್ರೆಸ್ ಅಭ್ಯರ್ಥಿಗೆ ನೀಡುವ ನಿಟ್ಟಿನಲ್ಲಿ ಸಿದ್ಧಗೊಂಡಿದ್ದೇವೆ. ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ಮುಂದಿಟ್ಟುಕೊಂಡು ಜನರ ವಿಶ್ವಾಸಗಳಿಸಿ ಅವರ ಮನೆ ಬಾಗಿಲಿಗೆ ತೆರಳಿ ಮತಯಾಚಿಸಲಿದ್ದೇವೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಮತ್ತು ವಿಶೇಷವಾಗಿ ಕಲಬುರಗಿ ಜಿಲ್ಲೆಗೆ ಸಾಕಷ್ಟು ನಿರ್ಲಕ್ಷ್ಯ ಮಾಡಿದೆ. ಹೀಗಾಗಿ ನಾವು ಈ ಬಾರಿ ಜನರ ಮನಸ್ಸನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮುನ್ನಡೆ ನೀಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹೀಗಾಗಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಬೃಹತ್ ಸಭೆಗೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ಗ್ರಾ.ಪಂ ಸದಸ್ಯ ದತ್ತು ವಗ್ಗೆ, ಭೀಮಾಶಂಕರ ಬಿರಾದಾರ ಉಪಸ್ಥಿತರಿದ್ದರು.