ಗ್ರಾಮ ದೇವತೆಯ ದೇವಾಲಯದಲ್ಲಿ ವಿಶೇಷ ಪೂಜೆ: ಸಾವಿರಾರು ಮಂದಿ ಭಾಗಿ
ಸಂಜೆವಾಣಿ ವಾರ್ತೆ
ಸಾಲಿಗ್ರಾಮ.ಮಾ.30:- ಪಟ್ಟಣದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಬಂಡಿ ಹಬ್ಬವನ್ನು ಶುಕ್ರವಾರ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
10 ವರ್ಷಗಳ ನಂತರ ನಡೆದ ಬಂಡಿ ಹಬ್ಬದ ಅಂಗವಾಗಿ ಪಟ್ಟಣದ ಬಸ್ ನಿಲ್ದಾಣದ ಬಳಿ ಇರುವ ಗ್ರಾಮ ದೇವತೆಯ ದೇವಾಲಯದಲ್ಲಿ ವಿಶೇಷ ಪೂಜೆ ಅಭಿಷೇಕಗಳು ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ಬೆಳಿಗ್ಗೆಯಿಂದಲೇ ದೇವಸ್ಥಾನಕ್ಕೆ ಜನರು ತಂಡೋಪ ತಂಡವಾಗಿ ಆಗಮಿಸಿ ಪೂಜೆ ಸಲ್ಲಿಸಿದರು ಈ ಕಾರ್ಯಕ್ರಮದಲ್ಲಿ ಗ್ರಾಮದ ಜನತೆ ಸೇರಿದಂತೆ ವಿವಿಧ ಭಾಗಗಳಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ಪಟ್ಟಣದಲ್ಲಿ ಭಾಷ್ಯಾಕಾರ ಸ್ವಾಮಿ ದೇವಾಲಯದ ಬಳಿಯಲ್ಲಿರುವ ಕೊಳದಲ್ಲಿ ಪೂಜೆ ಸಲ್ಲಿಸಿದ ಹೆಣ್ಣು ಮಕ್ಕಳು ಕಳಸ ಹೊತ್ತು ಕಲಾವಿದರ ಸಂಘದಿಂದ ಮಂಗಳವಾದ್ಯಗಳು ಹಾಗೂ ಪೂಜಾ ಕುಣಿತ ದೊಂದಿಗೆ ಸಾಗಿದರು.
ಹಬ್ಬದ ಅಂಗವಾಗಿ ನೂತನ ಬಂಡಿಯನ್ನು ತಯಾರಿಸಿ, ಅದಕ್ಕೆ ವಿವಿಧ ಬಣ್ಣಗಳ ಲೋಪನಗಳನ್ನು ಮಾಡಿ ವಿಶೇಷವಾಗಿ ಹೂವಿನ ಅಲಂಕಾರ ಮಾಡಿ ಬಂಡಿಯಲ್ಲಿ ಕನ್ನಡಿ ಕಳಸವನ್ನು ಪ್ರತಿಷ್ಠಾಪಿಸಿ ಗ್ರಾಮದಲ್ಲಿನ ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆ ಮಾಡಲಾಯಿತು.ಈ ಸಂದರ್ಭದಲ್ಲಿ ಬಂಡಿಗೆ ಮಹಿಳೆಯರು, ಮಕ್ಕಳು ಸೇರಿದಂತೆ ಸಾರ್ವಜನಿಕರು ವಿಶೇಷ ಪೂಜೆಯನ್ನು ಸಲ್ಲಿಸಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದರು.
ಬಂಡಿ ಹಬ್ಬದ ಅಂಗವಾಗಿ ಪಟ್ಟಣದಲ್ಲಿನ ಪ್ರಮುಖ ರಸ್ತೆಗಳಲ್ಲಿ ತಳಿರು ತೋರಣಗಳನ್ನು ಕಟ್ಟುವ ಮೂಲಕ ಇಡೀ ಪಟ್ಟಣದಲ್ಲಿ ಸಡಗರ ಸಂಭ್ರಮ ಮನೆ ಮಾಡಿತು.
ಹಬ್ಬದ ಮೊದಲು ಗ್ರಾಮದಲ್ಲಿ ಸುಂಕದ ಮಾರಮ್ಮ ಹಬ್ಬ, ಮಾರಮ್ಮ ತಾಯಿ ಹಬ್ಬ, ಶ್ರೀ ಆಂಜನೇಯ ಸ್ವಾಮಿ ಹಬ್ಬ ಮತ್ತು ಸಾಮೂಹಿಕ ಅನ್ನಸತರ್ಪಣ ಕಾರ್ಯವನ್ನು ಈಗಾಗಲೇ ಮಾಡಲಾಗಿದೆ.
ಏ.2 ರಂದು ಕಾಲುವೆಯಮ್ಮನ ಹಬ್ಬವನ್ನು ಮಾಡಲಾಗುತ್ತದೆ. ಆ ಮೂಲಕ ಕಳೆದ 15 ದಿನಗಳಿಂದ ಗ್ರಾಮದಲ್ಲಿ ಸರ್ವರರೂ ಸೇರಿ ಭಕ್ತಿ ಭಾವಗಳಿಂದ ಒಟ್ಟಾಗಿ ಗ್ರಾಮದ ದೇವತೆಗಳ ಹಬ್ಬವನ್ನು ಯಾವುದೇ ರೀತಿಯ ಗೊಂದಲಗಳು ಉಂಟಾಗದಂತೆ ಆಚರಣೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿರುವುದು ವಿಶೇಷವಾಗಿದೆ.
ಗ್ರಾಮ ದೇವತೆ ಹಬ್ಬಗಳಲ್ಲಿ ಮಹಿಳೆಯರು, ಪುರುಷರು, ಮಕ್ಕಳು, ಯುವಕರು, ಜನಪ್ರತಿನಿಧಿಗಳು, ಮುಖಂಡರುಗಳು ಸೇರಿದಂತೆ ಗ್ರಾಮದಲ್ಲಿನ ಎಲ್ಲರೂ ಸಾಮೂಹಿಕವಾಗಿ ಪಾಲ್ಗೊಂಡು ಪೂಜಾ ಕಾರ್ಯಗಳನ್ನು ನಡೆಸಿದರು.