ದಾರಿ ಸುತ್ತೋಲೆ ಮಾರ್ಪಾಡಿಗೆ ಕಾನೂನು ತಿದ್ದುಪಡಿ ಮಾಡಿ: ಸಚಿವ ಎಂ.ಬಿ. ಪಾಟೀಲರಿಗೆ ರೈತರ ಮನವಿ
ಸಂಜೆವಾಣಿ ವಾರ್ತೆ,
ವಿಜಯಪುರ,ಮಾ.30:ಹೊಲದ ದಾರಿ ಸುತ್ತೋಲೆ ಮಾರ್ಪಾಡಿಗೆ ಕಾನೂನು ತಿದ್ದುಪಡಿ ಮಾಡಬೇಕು ಎಂದು ಅಖಂಡ ಕರ್ನಾಟಕ ರೈತ ಸಂಘ ವತಿಯಿಂದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಹೊಲಗಳ ದಾರಿ ಸಮಸ್ಯೆ ಇತ್ಯರ್ಥಕ್ಕಾಗಿ ಸರಕಾರ ರಾಜ್ಯದ ಎಲ್ಲ ತಹಸೀಲ್ದಾರರುಗಳಿಗೆ ದಾರಿ ಮಾಡಿ ಕೊಡುವಂತೆ ಸುತ್ತೋಲೆ ಹೊರಡಿಸಿದ್ದರೂ ಇಲ್ಲಿಯವರೆಗೂ ಯಾವ ತಹಸೀಲ್ದಾರಗಳು ದಾರಿ ಮಾಡಿ ಕೊಡುತ್ತಿಲ್ಲ. ಸರಕಾರದ ಸುತ್ತೋಲೆ ತಪ್ಪು ಇದೆ ಎಂದು ರೈತರಿಗೆ ಹೇಳಿ ಕಳಿಸುತ್ತಿದ್ದಾರೆ. ಹಿಗಾಗಿ ಸರಕಾರ ಸುತ್ತೋಲೆ ಹೊರಡಿಸಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಆದ್ದರಿಂದ ಮತ್ತೋಮ್ಮೆ ಸರಕಾರ ಸುತ್ತೋಲೆ ಮಾರ್ಪಾಡು ಮಾಡಿ ದಾರಿಗಾಗಿಯೇ ವಿಶೇಷ ಸಚಿವ ಸಂಪುಟ ಸಭೆ ಕರೆದು ಕಾನೂನು ತಜ್ಞರ ಒಳಗೊಂಡಂತೆ. ಚರ್ಚಿಸಿ ಕಾನುನು ತಿದ್ದುಪಡಿ ಮಾಡಿ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರದಂತೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವÀ ಎಂ.ಬಿ ಪಾಟೀಲರಿಗೆ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು
ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಕಳೆದ 10 ವರ್ಷಗಳಿಂದ ದಾರಿಗಾಗಿ ಹೋರಾಟ ಮಾಡಿದರೂ ಪ್ರಯೋಜನೆ ಇಲ್ಲದಂತಾಗಿದೆ. ಸರಕಾರದ ಸುತ್ತೋಲೆ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ. ತಹಸೀಲ್ದಾರರು ಕೂಡಾ ದಾರಿ ಮಾಡಿಕೊಡಲು ಅರ್ಜಿ ಸಲ್ಲಿಸಿದ ರೈತರಿಗೆ ಇದೆ ನೆಪ ಹೇಳುತ್ತಿದ್ದಾರೆ. ಸರಕಾರದ ಸುತ್ತೋಲೆಯಲ್ಲಿ ಅನುಭೋಗದ ಹಕ್ಕು 1882 ಸಿ.ಆರ್.ಪಿ.ಸಿ 1973 ಕಲಂ 147 ಇದು ಕೊನೆಯ ಪ್ಯಾರಾದಲ್ಲಿ ಇಲ್ಲದ ಕಾರಣ ನಮಗೆ ದಾರಿ ಮಾಡಿಕೊಡಲು ಗೊಂದಲಮಯವಾಗಿದೆ. ಆದ್ದರಿಂದ ಸರಕಾರದಿಂದ ಸ್ಪಷ್ಟ ಆದೇಶ ಹೊರಬಂದರೆ ಮತ್ತು ನಕ್ಷೆಯಲ್ಲಿ ದಾರಿ ಇಲ್ಲದಿದ್ದರೂ ಕೂಡಾ ದಾರಿ ಮಾಡಿ ಕೊಡಬೇಕೆಂದು ಆದೇಶದಲ್ಲಿ ಬಂದರೆ ದಾರಿ ಮಾಡಿಕೊಡುತ್ತೇವೆ. ಈಗ ಬಂದಿರುವ ಸುತ್ತೋಲೆ ನಕ್ಷೆಯಲ್ಲಿ ದಾರಿ ಗುರುತು ಇದ್ದರೆ. ದಾರಿ ಮಾಡಿ ಕೊಡಿ ಎಂದು ಸರಕಾರದ ಸುತ್ತೋಲೆಯಲ್ಲಿ ಇದೆ ಎಂದು ನೆಪ ಹೇಳುತ್ತಿದ್ದಾರೆ. ಇದರಿಂದ ದಾರಿ ಮಾಡಿಕೊಡಲು ಹಿಂದೇಟು ಹಾಕುತ್ತಿರುವದರಿಂದ ಹಳ್ಳಿಗಳಲ್ಲಿ ಇನ್ನು ರೈತರ ಮಧ್ಯ ಹೊಡೆದಾಟಗಳು ನಡೆಯುತ್ತಲೆ ಇವೆ. ಇದೇ ಪರಿಸ್ಥಿತಿ ಮುಂದುವರೆದರೆ. ದಾರಿಗಾಗಿ ರೈತರು ಹೊಡದಾಡಿಕೊಂಡು ಇರಬೇಕಾಗುತ್ತದೆ ಎಂದು ಸಚಿವರಿಗೆ ವಿವರಿಸಿದರು.
ಶೀಘ್ರದಲ್ಲಿ ಮುಖ್ಯ ಮಂತ್ರಿಗಳು ಹಾಗೂ ಕಂದಾಯ ಸಚಿವರ ಬಳಿ ಕರೆದುಕೊಂಡು ಹೋಗಿ ಇದಕ್ಕಾಗಿ ವಿಶೇಷ ಕಾನೂನು ರಚಿಸಲು ಮನವಿ ಮಾಡಿಕೊಳ್ಳಲಾಗುವುದೆಂದು ಸಚಿವ ಎಂ.ಬಿ. ಪಾಟೀಲ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಸಿದ್ರಾಮಪ್ಪ ರಂಜಣಗಿ, ಪಾಂಡು ಹ್ಯಾಟಿ, ಪ್ರಹ್ಲಾದ ನಾಗರಾಳ, ಸದಾಶಿವ ಭರಟಗಿ. ಮುದ್ದುಗೌಡ ಬಿರಾದಾರ.ಹೊನಕೇರೆಪ್ಪ ತೆಲಗಿ.ಇದ್ದರು