ಕಾಂಗ್ರೆಸ್ಸಿನ ತುಷ್ಠೀಕರಣ ರಾಜಕಾರಣದಿಂದಾಗಿ ದೇಶದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ: ವೃಷಬೇಂದ್ರಪ್ಪ ಆರೋಪ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮಾ. 30-ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರದಿಂದ ತುಷ್ಠೀಕರಣ ನೀತಿ ಹಾಗೂ ಭಯೋತ್ಪಾದಕ ಕೃತ್ಯಗಳನ್ನು ಬೆಂಬಲಿಸುವ ಮೂಲಕ ದೇಶದ ಶಾಂತಿ ನೆಮ್ಮದಿಯ ಜೀವನಕ್ಕೆ ಧಕ್ಕೆ ಉಂಟು ಮಾಡುತ್ತಿದೆ ಎಂದು ಬಿಜೆಪಿ ಜಿಲ್ಲಾಉಪಾಧ್ಯಕ್ಷ ಪಿ.ವೃಷಬೇಂದ್ರಪ್ಪ ದೂರಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿಯೇ ಬಾಂಬ್ ಸ್ಪೋಟ, ವಿಧಾನ ಸೌಧದಲ್ಲಿ ಪಾಕಿಸ್ತಾನ ಪರಘೋಷಣೆ ಹಾಗು ಸಿಎಂ, ಡಿಸಿಎಂ ಹಾಗೂ ಸಚಿವರು ಭಯೋತ್ಪಾದನಾ ಕೃತ್ಯವನ್ನು ಬೆಂಬಲಿಸುವ ಹೇಳಿಕೆಗಳು, ರಾಷ್ಟ್ರದ ಭದ್ರತೆ ಮತ್ತು ದೇಶದ ಜನರ ನೆಮ್ಮದಿ ಜೀವನಕ್ಕೆ ತಿಲಾಂಜಲಿ ಇಟ್ಟಿದ್ದಾರೆ. ಇಂಥ ಸರ್ಕಾರ ವಿರುದ್ದ ಬಿಜೆಪಿ ನಿರಂತರ ಹೋರಾಟ ಮಾಡಲಿದೆ ಎಂದರು.
ಬೆಂಗಳೂರಿನಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚಳವಾಗಿದೆ. ಎನ್‍ಸಿಆರ್‍ಬಿ ವರದಿಯಂತೆ ರಾಜ್ಯದಲ್ಲಿ ಆರ್ಥಿಕ ಆಪರಾಧಗಳ ಸಂಖ್ಯೆ 180742ಕ್ಕೇರಿದೆ. ಮಕ್ಕಳು ಮತ್ತು ಹಿರಿಯ ನಾಗರೀಕರ ಮೇಲಿನ ದೌರ್ಜನ್ಯದ ಅಪರಾಧಗಳಲ್ಲಿ ಕೂಡಗ ಮನಾರ್ಹ ಏರಿಕೆಯಾಗಿದ್ದು, ಕಾಂಗ್ರೆಸ್ ಸರ್ಕಾರವು ಹಿರಿಯ ನಾಗರೀಕರನ್ನು ರಕ್ಷಣೆ ಮಾಡುವಲ್ಲಿ ವಿಫಲರಾಗಿದೆ. ಬೆಳಗಾವಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಪ್ರಕರಣ ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಬೀತಿ ಮೂಡಿಸಿತ್ತು. ಹಾವೇರಿ ಜಿಲ್ಲೆಯಲ್ಲಿ ಮಹಿಳೆಯ ಮೇಲೆ ನಡೆದ ಮತ್ತೊಂದು ಸಾಮೂಹಿಕ ಅತ್ಯಾಚಾರ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೆಳೆಸಿದೆ. ಸಂವಿಧಾನ ಕುರಿತಾದ ಸಂವಾದಕ್ಕೆ ಪ್ರತ್ಯೇಕತಾವಾದವನ್ನು ಬೆಂಬಲಿಸುವರನ್ನು ಆಹ್ವಾನಿಸಲಾಗಿದೆ ಎಂದು ದೂರಿದರು.
ವಿಧಾನ ಸೌಧದಲ್ಲಿಯೇ ರಾಜ್ಯಸಭಾ ಸದಸ್ಯನಾಸಿರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ ಪರಘೋಷಣೆ, ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ದಾಳಿ ಪ್ರಕರಣಗಳು ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಜ್ಯ ಉಗ್ರರ ಅಡಗು ತಾಣವಾಗಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.
ಬಿಜೆಪಿ ಜಿಲ್ಲಾ ವಕ್ತಾರ ಕಾಡಹಳ್ಳಿ ಕುಮಾರ್ ಮಾತನಾಡಿ, ಶ್ಯಾಡೋ ಸಿಎಂ ಡಾ. ಯತೀಂದ್ರ ಸಿದ್ದರಾಮಯ್ಯ ಕೇಂದ್ರ ಗೃಹ ಸಚಿವರಾದ ಅಮಿತಾ ಶಾ ವಿರುದ್ದ ನೀಡಿರುವ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಯತೀಂದ್ರ ಸಿದ್ದರಾಮಯ್ಯ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಅವರ ಮೇಲೆ ಇದ್ದ ಎಲ್ಲಾ ಪ್ರಕರಣಗಳು ಖುಲಾಸೆಯಾಗಿವೆ. ರಾಜಕೀಯ ದುರುದ್ದೇಶದಿಂದ ನೀಡಿರುವ ದೂರು ಎಂಬುವುದು ಸಾಬೀತಾಗಿದೆ. ಇಂಥ ಪದ ಬಳಕೆ ಮಾಡಿರುವ ಯತೀಂದ್ರ ಕೂಡಲೇ ದೇಶದ ಜನರ ಕ್ಷಮೆ ಯಾಚನೆ ಮಾಡಬೇಕು ಎಂದು ಒತ್ತಾಯಿಸಿದರು.
ಅಲ್ಲದೇ ಜಿಲ್ಲಾಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರು ಜಿಲ್ಲೆಯ ಬರಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದು, ಉಸ್ತುವಾರಿ ಸಚಿವರಾಗಿ ಒಂದು ಕೆಡಿಪಿ ಮೀಟಿಂಗ್ ಮಾಡದೇ ನೆಪ ಮಾತ್ರಕ್ಕೆ ಸಚಿವರಾಗಿದ್ದು, ಅನ್ನ ಭಾಗ್ಯ ಯೋಜನೆಯ ಅಕ್ಕಿಯನ್ನೇ ಜನರಿಗೆ ನೀಡುತ್ತಿಲ್ಲ. ಅದರ ಬದಲು ಕಾಂಗ್ರೆಸ್ ಸರ್ಕಾರ ಹಣ ನೀಡುತ್ತಿದೆ ಎಂಬ ಪರಿಜ್ಞಾನವು ಇಲ್ಲದೇ ಅನ್ನ ಭಾಗ್ಯದ ಅಕ್ಕಿಗೆ ಹರಿಶಿನ ಬೆರೆಸಿ ಬಿಜೆಪಿಯವರು ಮಂತ್ರಾಕ್ಷತೆ ನೀಡಿದ್ದಾರೆ ಎಂದು ಹೇಳಿಕೆ ನೀಡಿರುವುದು ಕಾಂಗ್ರೆಸ್ ಪಕ್ಷದ ತುಷ್ಠೀಕರಣ ರಾಜಕಾರಣ ಮಾಡುತ್ತಿದೆ ಎಂಬುವುದಕ್ಕೆ ಸಾಕ್ಷಿಯಾಗಿದೆ ಎಂದರು.
ಗೋಷ್ಠಿಯಲ್ಲಿ ಬಿಜೆಪಿ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಜಿ.ನಾರಾಯಣ ಪ್ರಸಾದ್, ಜಿಲ್ಲಾ ಸಹ ವಕ್ತಾರ ಮಂಜುನಾಥ್, ಮಾಧ್ಯಮ ಪ್ರಮುಖ್ ವಿರೇಂದ್ರ ಇದ್ದರು.