ಸಿದ್ದಗಂಗಾ ಶ್ರೀಗಳ ಜನ್ಮದಿನೋತ್ಸವ: ಏ. 1ರಂದು ಸಿದ್ದಗಂಗಾಶ್ರೀ, ಶಿವಕುಮಾರ್ ಶ್ರೀ ಪ್ರಶಸ್ತಿ ಪ್ರದಾನ
ಕಲಬುರಗಿ:ಮಾ.29: ನಡೆದಾಡುವ ದೇವರು, ತ್ರಿವಿಧ ದಾಸೋಹಮೂರ್ತಿಗಳೂ ಆದ ಸಿದ್ದಗಂಗಾ ಮಠದ ಶಿವಕುಮಾರ್ ಮಹಾ ಶಿವಯೋಗಿಗಳ 117ನೇ ಗುರುವಂದನಾ ಮಹೋತ್ಸವವು ಏಪ್ರಿಲ್ 1ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಗತ್ ವೃತ್ತದ ಬಳಿ ಇರುವ ಪತ್ರಿಕಾ ಭವನದ ಸಾಂಸ್ಕøತಿಕ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ವೀರಶೈವ ಸಮಾಜದ ಹಾಗೂ ಶ್ರೀ ಸಿದ್ದಗಂಗಾ ಹಳೆಯ ವಿದ್ಯಾರ್ಥಿಗಳ ಮತ್ತು ಹಿತೈಷಿಗಳ ಸಂಘದ ಅಧ್ಯಕ್ಷ ಅರುಣಕುಮಾರ್ ಪಾಟೀಲ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾರಂಭದಲ್ಲಿ ದಿವ್ಯ ಸಾನಿಧ್ಯವನ್ನು ಮಾದನಹಿಪ್ಪರಗಾದ ಶಿವಲಿಂಗೇಶ್ವರ್ ಸಂಸ್ಥಾನದ ಅಭಿನವ ಶಿವಲಿಂಗೇಶ್ವರ್ ಮಹಾಸ್ವಾಮೀಜಿ ವಹಿಸುವರು. ಶ್ರೀ ಶರಣಬಸವೇಶ್ವರ್ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ್ ದೇಶಮುಖ್ ಅವರು ಉದ್ಘಾಟಿಸುವರು ಎಂದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ್ ಯಡ್ಡಾಮಿ ಅವರು ಆಗಮಿಸುವರು. ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರಗತಿಪರ ಮಹಿಳೆ ಆಳಂದ್‍ನ ಶ್ರೀಮತಿ ಗುರುಬಾಯಿ ಆಳಂದ್ ಅವರಿಗೆ ಸಿದ್ಧಗಂಗಾ ಶ್ರೀ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ನೆಲ್ಲೂರ್ ಪ್ರೌಢಶಾಲೆಯ ಡಿ.ಎನ್. ಪಾಟೀಲ್ ಅವರಿಗೆ ಡಾ. ಶಿವಕುಮಾರ್ ಸ್ವಾಮಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ ಪಡೆದ ಮಹಿಪಾಲರೆಡ್ಡಿ ಮುನ್ನೂರ್, ಸುಮಂಗಲಿ ಡಿಜಿಟಲ್ ಮಾಲಿಕ ವೆಂಕಟೇಶ್ ಮೂರ್ತಿ, ಪತ್ರಿಕಾ ಛಾಯಾಗ್ರಾಹಕ ತಾಜೋದ್ದೀನ್ ಆಜಾದ್, ವಿಜಯಕುಮಾರ್ ವಾರದ್ ಅವರಿಗೆ ವಿಶೇಷ ಸನ್ಮಾನ ಮಾಡಲಾಗುವುದು. ನಂದಗೋಕುಲ ಮಕ್ಕಳಿಗೆ 5117ರೂ.ಗಳನ್ನು ದೇಣಿಗೆ ನೀಡಿ ಸನ್ಮಾನಿಸಿ ಗೌರವಿಸಲಾಗುವುದು. ನಂತರ ಪ್ರಸಾದದ ವ್ಯವಸ್ಥೆ ಮಾಡಲಾಗಿದ್ದು, ಶ್ರೀ ಸಿದ್ಧಗಂಗಾ ಮಠದಲ್ಲಿ ಕಲಿತ ವಿದ್ಯಾರ್ಥಿಗಳು, ಭಕ್ತರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಕೋರಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕಲ್ಯಾಣಪ್ಪ ಪಾಟೀಲ್ ಮಳಖೇಡ್, ಶ್ರೀಶೈಲ್ ಘೂಳಿ, ದೇವೆಂದ್ರಪ್ಪ ಅವಂಟಿ, ಚನ್ನಬಸಯ್ಯ ಗುರುವಿನ, ರುದ್ರಮುನಿ ಪುರಾಣಿಕ್, ಅಶೋಕ್ ಹೋಳಕುಂದಾ ಮುಂತಾದವರು ಉಪಸ್ಥಿತರಿದ್ದರು.