ಸಚಿವ ಖರ್ಗೆಗೆ ಜೀವ ಬೆದರಿಕೆ ಹಾಕಿದ ಆರೋಪಿಗಳ ಸೆರೆಗೆ ಆಗ್ರಹ: ಶೋಷಿತ ವಿದ್ಯಾರ್ಥಿಗಳ ಪಿಎಚ್‍ಡಿ ರದ್ದತಿಗೆ ವಿರೋಧ
ಕಲಬುರಗಿ:ಮಾ.29: ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್, ಐಟಿಬಿಟಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆದರಿಕೆ ಹಾಗೂ ಜಾತಿನಿಂದನೆ ಮಾಡಿದ ಪತ್ರದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಡಾ. ಡಿ.ಜಿ. ಸಾಗರ್ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಮೊದಲಿನಿಂದಲೂ ಶಾಂತಿ, ನೆಮ್ಮದಿ, ಸೌಹಾರ್ದತೆಯಿಂದ ಕೂಡಿದ ರಾಜ್ಯವಾಗಿದೆ. ಇಲ್ಲಿ ಯಾವುದೇ ಕೋಮು ಗಲಭೆಗೆ ಅವಕಾಶ ನೀಡದೇ ಸರ್ಕಾರ ನಡೆದುಕೊಂಡಿದೆ. ತುಳಿತಕ್ಕೆ ಒಳಗಾದ ಶೋಷಿತ, ದುರ್ಬಲ ವರ್ಗದವರಿಗೆ ಸಂವಿಧಾನದತ್ತವಾದ ರಕ್ಷಣೆ, ಸಾಮಾಜಿಕ ನ್ಯಾಯ ನೀಡುವಲ್ಲಿ ರಾಜ್ಯ ಹಿಂದೆ ಬಿದ್ದಿಲ್ಲ. ಆದಾಗ್ಯೂ, ಇತ್ತೀಚೆಗೆ ಕರ್ನಾಟಕದಲ್ಲಿ ಯತಸ್ಥಿತಿವಾದಿಗಳು, ಸಂವಿಧಾನ ಬದ್ಧವಾದ ಅಧಿಕಾರ ನಡೆಸುವ ಸರ್ಕಾರಕ್ಕೆ ಸವಾಲು ಎಂಬಂತೆ ಸಚಿವರಿಗೆ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಅದರಲ್ಲೂ ದುರ್ಬಲ ವರ್ಗದಿಂದ ಬಂದ ಸಚಿವ ಪ್ರಿಯಾಂಕ್ ಖರ್ಗೆಯವರಿಗೆ ಕೊಲೆ ಬೆದರಿಕೆ ಪತ್ರ ಬಂದಿದೆ. ಅದೇ ಪತ್ರದಲ್ಲಿ ಅವರ ತಂದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಕುರಿತು, ಜಾತಿ ನಿಂದನೆ ಕುರಿತು ಅವಮಾನಕರವಾಗಿ ಪತ್ರ ಬರೆದು ಆರೋಪಿಗಳು ತಮ್ಮ ಹೆಸರನ್ನೂ ಸಹ ಬರೆದಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೂ ಸಹ ಅವಹೇಳನ ಮಾಡಿದ್ದು ಖಂಡನಾರ್ಹ ಎಂದು ಅವರು ಆಕ್ಷೇಪಿಸಿದರು.
ಜೀವ ಬೆದರಿಕೆ ಹಾಕಿರುವ ಪತ್ರವನ್ನು ಪೋಲಿಸರು ಗಂಭೀರವಾಗಿ ಪರಿಗಣಿಸಬೇಕು. ಕೂಡಲೇ ಆರೋಪಿಗಳನ್ನು ಮತ್ತು ಅವರ ಹಿಂದಿರುವ ವ್ಯಕ್ತಿಗಳನ್ನೂ ಸಹ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಬೀದಿಗಿಳಿದು ಹೋರಾಟ ರೂಪಿಸಲಾಗುವುದು ಎಂದು ಅವರು ಎಚ್ಚರಿಸಿದರು.
ಇನ್ನು ಜಿಲ್ಲೆಯ ಆಳಂದ್ ತಾಲ್ಲೂಕಿನ ಕಡಗಂಚಿ ಬಳಿ ಇರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ದಲಿತ ವಿದ್ಯಾರ್ಥಿ ನಂದಪ್ಪ ಮತ್ತು ಇನ್ನಿತರ 11 ಸಂಶೋಧನಾ ವಿದ್ಯಾರ್ಥಿಗಳ ಭವಿಷ್ಯವನ್ನು ಬಲಿ ತೆಗೆದುಕೊಳ್ಳುತ್ತಿರುವ ವಿತಂಡವಾದಿ ನಿರಂಕುಶಮತಿಯಾದ ಕುಲಪತಿಗಳ ಸರ್ವಾಧಿಕಾರಿ ನೀತಿ ಖಂಡನಾರ್ಹ. ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ನ್ಯಾಯಯುತವಾದ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದೆ ಎಂದು ಘೋಷಿಸಿದ ಅವರು, ಶೋಷಿತ ಸಮುದಾಯಗಳ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡಲು ಹೊರಡಿಸಿರುವ ಸುತ್ತೋಲೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸುರೇಶ್ ಹಾದಿಮನಿ, ಹೆಚ್. ಶಂಕರ್ ಅವರು ಉಪಸ್ಥಿತರಿದ್ದರು.