ಎಟಿಎಂ ಯಂತ್ರ ಕತ್ತರಿಸಿ 9.13 ಲಕ್ಷರೂ.ಗಳು ದೋಚಿದ್ದ: ಆರೋಪಿ ಸೆರೆ
ಕಲಬುರಗಿ:ಮಾ.29: ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಚಿಮ್ಮನಚೋಡ್ ಗ್ರಾಮದ ಅಂಬೇಡ್ಕರ್ ವೃತ್ತದ ಬಳಿ ಇರುವ ಇಂಡಿಯಾ-01 ಎಟಿಎಂನ್ನು ಕಳೆದ ಮಾರ್ಚ್ 18ರಂದು ಬೆಳಗಿನ ಜಾವ ಒಂದು ಗಂಟೆಯ ಸುಮಾರಿಗೆ ಯಂತ್ರವನ್ನು ಕತ್ತರಿಸಿ ಅದರಲ್ಲಿದ್ದ 9,13,400ರೂ.ಗಳನ್ನು ದೋಚಿ ಪರಾರಿಯಾಗಿರುವ ಕುರಿತು ಎಂಟಿಎಂ ಪ್ರಾಚೈಸಿ ಹಾಗೂ ನಗರದ ರಾಘವೇಂದ್ರ ನಗರದ ನಿವಾಸಿ ಮಹೇಶ್ ತಂದೆ ಮೋಹನರಾವ್ ಮಠ್ ಅವರು ಕೊಟ್ಟ ದೂರಿನ ಮೇರೆಗೆ ಪೋಲಿಸರು ಓರ್ವ ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಹರಿಯಾಣಾ ರಾಜ್ಯದ ನೂಹ್ (ಮೇವಾತ್) ಜಿಲ್ಲೆಯ ಖ್ವಾಜಾಲಿಕಾ ತಹಶೀಲ್ ಪುಲ್ಹಾನಾ ಗ್ರಾಮದ ನಿವಾಸಿ ಶೋಯೆಬ್ ತಂದೆ ರಶೀದಿ (20) ಎಂದು ಗುರುತಿಸಲಾಗಿದೆ.
ಬಂಧಿತನಿಂದ ನಗದು 3,75,400ರೂ.ಗಳನ್ನು, ಕೃತ್ಯಕ್ಕೆ ಬಳಸಿದ 4.50 ಲಕ್ಷ ರೂ.ಗಳ ಮೌಲ್ಯದ ಮಹಾರಾಷ್ಟ್ರ ನೊಂದಣಿ ಹೊಂದಿರುವ ಹೊಂಡೈ ವರುಣಾ ಕಾರು ವಶಪಡಿಸಿಕೊಂಡು, ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ತನಿಖಾಧಿಕಾರಿ ಸಿಪಿಐ ಎಲ್.ಹೆಚ್. ಗೌಂಡಿ ಅವರ ನೇತೃತ್ವದಲ್ಲಿ ಪಿಎಸ್‍ಐಗಳಾದ ಸಿದ್ದೇಶ್ವರ್ ಗೇರಡೆ, ರಾಚಯ್ಯಸ್ವಾಮಿ, ಪ್ರಭಾಕರ್ ಪಾಟೀಲ್, ಶಿವರಾಜ್ ಪಾಟೀಲ್, ಮುಖ್ಯ ಪೇದೆಗಳಾದ ಶಫಿಯೋದ್ದೀನ್, ಬೀರಪ್ಪ ಹೆಚ್, ಪೇದೆಗಳಾದ ಬದ್ದು ರಾಠೋಡ್, ಶಿವಾನಂದ್, ನಾಗರಾಜ್, ರಮೇಶ್, ಅಲ್ಲಾಭಕ್ಷ, ವಿಶ್ವನಾಥ್, ಈಶ್ವರ್, ಶಿವರಾಜ್, ಅಪ್ಪಾಸಾಬ್ ಅವರು ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಪ್ರಕರಣದ ಇನ್ನುಳಿದ ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯ ಮುಂದುವರೆದಿದೆ. ಪೋಲಿಸರ ಕಾರ್ಯಾಚರಣೆಯನ್ನು ಪೋಲಿಸ್ ಅಧೀಕ್ಷಕ ಅಕ್ಷಯ್ ಹಾಕೆ ಅವರು ಶ್ಲಾಘಿಸಿದ್ದಾರೆ.