ರೇಣಕಾಚಾರ್ಯರ ಜಯಂತ್ಯುತ್ಸವ ಪೂರ್ವಭಾವಿ ಸಭೆ
ಚಿಂಚೋಳಿ,ಮಾ. 28: ಪಟ್ಟಣದ ಮಹಾಂತೇಶ್ವರ ಮಠದಲ್ಲಿ ತಾಲೂಕ ಮಟ್ಟದ ಜಗದ್ಗುರು ಶ್ರೀ ರೇಣಕಾಚಾರ್ಯರ ಜಯಂತ್ಯುತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆ ಜರುಗಿತು. ಈ ಸಂದರ್ಭದಲ್ಲಿ ಯುವ ಮುಖಂಡ ಮತ್ತು ನ್ಯಾಯವಾದಿ ಶರಣು ಪಾಟೀಲ ಮೋತಕಪಳ್ಳಿರವರನ್ನು ಸರ್ವಾನುಮತದಿಂದ ನಿಡಗುಂದಾದ ಪೂಜ್ಯ ಕರುಣೇಶ್ವರ ಶಿವಾಚಾರ್ಯರ ಸಮ್ಮುಖದಲ್ಲಿ ಸ್ವಾಗತ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತೆಂದು ಸ್ವಾಗತ ಸಮಿತಿಯ ಸಂಚಾಲಕರು ಹಾಗೂ ಚಿಂಚೋಳಿ ತಾಲೂಕ ಬೇಡ ಜಂಗಮ ಸಮಾಜದ ಅಧ್ಯಕ್ಷ ಉಡುಪಿ ಮಲ್ಲಿಕಾರ್ಜುನ ಸ್ವಾಮಿ ತಿಳಿಸಿದರು.
ಇದೆ ಸಂದರ್ಭದಲ್ಲಿ ಕಾಶಿನಾಥ ಪಾಟೀಲ ಎಂಪಳ್ಳಿ ಗೌರವ ಅಧ್ಯಕ್ಷರನ್ನಾಗಿ, ಶರಣಗೌಡ ಮುದ್ದಾ ದೇಗಲ್ಮಡಿ, ರಾಜಶೇಖರ ಪೌಡಶೆಟ್ಟಿ ಮತ್ತು ರಾಜಶೇಖರ ಸಾಲಿಮಠ ರವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಯಿತು ಜಗದ್ಗುರು ರೇಣಕಾಚಾರ್ಯರ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಬಾಳೇಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರನ್ನು ಆಹ್ವಾನಿಸಬೇಕೆಂದು ತೀರ್ಮಾನಿಸಲಾಯಿತು ಮತ್ತು ಜಯಂತಿ ಪ್ರಯುಕ್ತ ಲಿಂಗದೀಕ್ಷೆ, ಜಂಗಮ ವಟುಗಳಿಗೆ ಅಯ್ಯಾಚಾರ, ಸಾಮೂಹಿಕ ಇಷ್ಟಲಿಂಗ ಪೂಜೆ ಮತ್ತು ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುವ ಕುರಿತಂತೆ ಚರ್ಚಿಸಲಾಯಿತು. ಸ್ವಾಗತ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿರುವ ಶರಣು ಪಾಟೀಲ ಮೊತಕಪಳ್ಳಿ ಮಾತನಾಡಿ ಜಗದ್ಗುರು ರೇಣಕಾಚಾರ್ಯರು ಜಗತ್ತಿಗೆ ಬೆಳಕನ್ನು ನೀಡಿದವರು. ಅವರ ಸನ್ಮಾರ್ಗದಲ್ಲಿ ನಾವೆಲ್ಲರೂ ನಡೆಯುವ ಅವಶ್ಯಕತೆ ಇದೆ. ಅವರ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ತಾಲೂಕಿನ ಎಲ್ಲಾ ಭಕ್ತಾದಿಗಳು ಪಾಲ್ಗೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಶಿವಕುಮಾರ ಸ್ವಾಮಿ, ಸಂತೋಷ ಕಡಗದ, ನಿಕಟ ಪೂರ್ವ ಅಧ್ಯಕ್ಷ ಗುಂಡಯ್ಯ ಸ್ವಾಮಿ ಗಣಾಚಾರಿ, ಮಹಾಂತಯ್ಯ ಮಠಪತಿ, ಸಂಗಮೇಶ ಮೂಲಿಮನಿ, ಮಲ್ಲಿಕಾರ್ಜುನ ಸ್ವಾಮಿ, ಸಿದ್ದಯ್ಯ ಸ್ವಾಮಿ, ಸಂಪತ ಮುಸ್ತಾರಿ, ಸಂಗಮೇಶ ಸುಂಕದ, ಶಿವಬಸ್ಸಯ್ಯ ಸ್ವಾಮಿ, ಬಸವರಾಜ ಗಡಂತಿ, ಬಸವರಾಜ ಚನ್ನೂರ, ಸಂಗನಬಸ್ಸಯ್ಯ ಸ್ವಾಮಿ ಗಾರಂಪಳ್ಳಿ, ಅವಿನಾಶ ಗೋಸುಲ, ಬಸ್ಸಯ್ಯ ಸ್ವಾಮಿ ಹಾಗೂ ಅನೇಕರಿದ್ದರು. ಉಡುಪಿ ಮಲ್ಲಿಕಾರ್ಜುನ ಸ್ವಾಮಿ ಸ್ವಾಗತಿಸಿದರು ಮತ್ತು ನ್ಯಾಯವಾದಿ ಚಂದು ಮಲಸಾ ನಿರೂಪಿಸಿ ವಂದಿಸಿದರು.