ಬಂಜಾರ ಸಮುದಾಯಕ್ಕೆ ಅವಹೇಳನ: ಸಂಸದ ಜಿಗಜಿಣಗಿ ಕ್ಷಮೆಯಾಚನೆಗೆ ಆಗ್ರಹ
ವಿಜಯಪುರ,ಮಾ.29 :ಸಂಸದ ಹಾಗೂ ಬಿಜೆಪಿ ವಿಜಯಪುರ ಲೋಕಸಭೆ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರು ಬಂಜಾರ ಸಮುದಾಯಕ್ಕೆ ಬೇಷರತ್ ಕ್ಷಮೆ ಯಾಚನೆ ಕೇಳಬೇಕು ಎಂದು ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಅರ್ಜುನ ರಾಠೋಡ ಆಗ್ರಹಿಸಿದರು.
ಗುರುವಾರ ಮಧ್ಯಾಹ್ನ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸಂಸದ ಜಿಗಜಿಣಗಿ ಅವರು ಬಂಜಾರ ಮತಗಳಿಂದ ಲೋಕಸಭೆಗೆ ಆಯ್ಕೆಯಾಗುತ್ತ ಬಂದಿದ್ದಾರೆ. ಆದರೆ ಈಗ ಜಿಗಜಿಣಗಿ ಅವರು ಬಂಜಾರ ಸಮುದಾಯದ ಮತ ನನಗೆ ಬೇಡ ಎಂದು ಬಂಜಾರಾ ಸಮುದಾಯದ ವಿರುದ್ಧ ದರ್ಪದ ಮಾತುಗಳನ್ನು ಆಡುವ ಮೂಲಕ ಬಂಜಾರಾ ಜನಾಂಗದ ಸ್ವಾಭಿಮಾನ ಕೆಣಕಿದ್ದಾರೆ ಎಂದರು.
ಈ ಬಾರಿ ಬಂಜಾರಾ ಸಮುದಾಯದ ಎಲ್ಲರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜು ಆಲಗೂರ ಅವರನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ. ಈ ಚುನಾವಣೆಯಲ್ಲಿ ಜಿಗಜಿಣಗಿ ಅವರಿಗೆ ಬಂಜಾರ ಸಮುದಾಯ ತಕ್ಕ ಪಾಠ ಕಲಿಸಲಿದೆ ಎಂದರು.
ಬಂಜಾರಾ ಸಮಾಜದ ಹಿರಿಯರಾದ ಡಿ.ಎಲ್. ಚವ್ಹಾಣ, ಮಹಾನಗರ ಪಾಲಿಕೆ ಸದಸ್ಯರಾದ ರಾಜು ಚವ್ಹಾಣ, ರಾಜು ಜಾಧವ್, ಎಪಿಎಂಸಿ ಮಾಜಿ ಸದಸ್ಯ ವಾಮನ ಚವ್ಹಾಣ, ಲಲಿತಾ ದೊಡಮನಿ, ಸರಿತಾ ನಾಯಕ, ಡಾ. ಪ್ರವೀಣ ಚೌರ, ಶೈಲೇಜಾ ನಾಯಕ, ವೀಣಾ ರಾಠೋಡ, ಗ್ರಾಂ ಪ. ಮಾಜಿ ಅಧ್ಯಕ್ಷ ರವಿದಾಸ ಜಾಧವ, ಬಿ.ಬಿ. ಲಮಾಣಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.