85 ವರ್ಷ ಮೇಲ್ಪಟ್ಟವರಿಗೆ ಮನೆಯಿಂದ ಮತದಾನ ಮಾಡಲು ಅವಕಾಶ:ಅರ್ಹರು ಏ.17 ರೊಳಗಾಗಿ ನಮೂನೆ 12ಡಿ ಭರ್ತಿ ಮಾಡಿ ಸಲ್ಲಿಸಿ:ಜಿಲ್ಲಾಧಿಕಾರಿ ಗೋವಿಂದರೆಡ್ಡಿ
ಬೀದರ. ಮಾ. 29: ಲೋಕಸಭಾ ಸಾರ್ವತ್ರಿಕ ಚುನಾವಣಾ 2024ರ ವೇಳಾಪಟ್ಟಿಯನ್ನು ಭಾರತ ಚುನಾವಣಾ ಆಯೋಗದಿಂದ ಈಗಾಗಲೇ ಹೊರಡಿಸಲಾಗಿದ್ದು, ಅದರಂತೆ 85 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಮತ್ತು ದಿವ್ಯಾಂಗ ಚೇತನರಿಗೆ ಮತದಾನ ದಿನದಂದು ಮನೆಯಿಂದ ಮತಗಟ್ಟೆ ಕೇಂದ್ರಕ್ಕೆ ಕರೆದುಕೊಂಡು ಬರಲು ಉಚಿತ ಆಟೊ ವ್ಯವಸ್ಥೆ, ಮತಗಟ್ಟೆ ಕೇಂದ್ರಗಳಲ್ಲಿ ರ್ಯಾಂಪ್ ವ್ಯವಸ್ಥೆ, ಮತಗಟ್ಟೆ ಕೇಂದ್ರಗಳಲ್ಲಿ ವ್ಹೀಲ್ ಚೇರ್‍ಗಳ ವ್ಯವಸ್ಥೆ, ಮತಗಟ್ಟೆ ಕೇಂದ್ರಗಳಲ್ಲಿ ಸರದಿ ರಹಿತ ವ್ಯವಸ್ಥೆಗಳನ್ನು ಮಾಡಲಾಗಿರುತ್ತದೆ.
ಕಳೆದ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿಯು ಈ ವ್ಯವಸ್ಥೆಗಳು ಮಾಡಲಾಗಿದ್ದು, ಸದ್ಯ ಲೋಕಸಭೆಯ ಚುನಾವಣೆಯಲ್ಲಿಯೂ ಈ ಎಲ್ಲಾ ವ್ಯವಸ್ಥೆಗಳು ಇರುತ್ತವೆ.
ಮಾನ್ಯ ಭಾರತ ಚುನಾವಣಾ ಆಯೋಗವು 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ದಿವ್ಯಾಂಗ ಚೇತನರಿಗೆ ಮತಗಟ್ಟೆ ಕೇಂದ್ರಕ್ಕೆ ಬರಲು ತೊಂದರೆಯಾಗುತ್ತಿದ್ದಲ್ಲಿ, ಅಂತಹ ಮತದಾರರಿಗೆ ಮನೆಯಿಂದ ಮತದಾನ ಮಾಡಲು ಅವಕಾಶ ಕಲ್ಪಿಸಿಕೊಟ್ಟಿರುತ್ತದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 584 ಮತದಾರರು ಮನೆಯಿಂದ ಮತದಾನ ಮಾಡಿದ್ದರು. ಮನೆಯಿಂದ ಮತದಾನ ಮಾಡುವವರ ಪಟ್ಟಿಯು ತಹಸೀಲ್ದಾರ ಕಛೇರಿಯಲ್ಲಿ ಲಭ್ಯವಿರುತ್ತದೆ. ಈ ಪಟ್ಟಿಯಲ್ಲಿರುವ ಮತದಾರರನ್ನು ಹೊರತುಪಡಿಸಿ ಯಾರಾದರೂ ಅಂದರೆ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ದಿವ್ಯಾಂಗ ಚೇತನರು ಮನೆಯಿಂದ ಮತದಾನ ಮಾಡಲು ಇಚ್ಛಿಸಿದ್ದಲ್ಲಿ, ದಿನಾಂಕ: 17-04-2024ರ ರೊಳಗಾಗಿ ಸಂಬಂಧಪಟ್ಟ ಮತಗಟ್ಟೆ ಮಟ್ಟದ ಅಧಿಕಾರಿಯವರ ಮೂಲಕ 12-ಡಿ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸಬೇಕು, ಸಲ್ಲಿಸಿರುವ 12-ಡಿ ನಮೂನೆಗಳನ್ನು ಸಂಬಂಧಪಟ್ಟ ಸಹಾಯಕ ಚುನಾವಣಾಧಿಕಾರಿಗಳು ಪರಿಶೀಲಿಸಿ ಅರ್ಹರಿದ್ದಲ್ಲಿ ಅರ್ಜಿದಾರರಿಗೆ ಮನೆಯಿಂದ ಮತದಾನ ಮಾಡಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ.
ಸಾರ್ವಜನಿಕರು 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ದಿವ್ಯಾಂಗ ಚೇತನರಿಗೆ ಮತಗಟ್ಟೆ ಕೇಂದ್ರಕ್ಕೆ ಬರಲು ತೊಂದರೆಯಾಗುತ್ತಿದ್ದಲ್ಲಿ ಸಂಬಂಧಪಟ್ಟ ಮತಗಟ್ಟೆ ಮಟ್ಟದ ಅಧಿಕಾರಿಯವರಲ್ಲಿ 12-ಡಿ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸಲು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.