ಐಗಳಿ ಮಾಣಿಕಪ್ರಭು ದೇವರ ಜಾತ್ರೆ. ಭಾವೈಕ್ಯತೆಯ ಪ್ರತಿರೂಪ : ಡೊಂಗರಗಾಂವ
ಅಥಣಿ :ಮಾ.29: ಜಾತ್ರೆಗಳು ಭಾವೈಕ್ಯತೆಯ ಪ್ರತಿರೂಪಗಳು ಸಮಾಜದಲ್ಲಿ ಭಾವೈಕ್ಯತೆ ಇರಬೇಕು, ಸಂವಿಧಾನದಲ್ಲೂ ಇದಕ್ಕೆ ಒತ್ತು ನೀಡಿದೆ. ಭಾವೈಕ್ಯತೆಗೆ ಹೆಸರಾದ ಐಗಳಿಯ ಮಾಣಿಕಪ್ರಭು ದೇವರ ಜಾತ್ರೆಯಲ್ಲಿ ಎಲ್ಲರೂ ಸಮಾನರೂ ಎಂಬುದಕ್ಕೆ ನಾನೇ ಸಾಕ್ಷಿ. ಇಲ್ಲಿ ವಿಶ್ವಗುರು ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಉಳಿಸಿಕೊಂಡು ಬಂದಿದ್ದಾರೆ ಎಂದು ಮಾಜಿ ಶಾಸಕ ಶಹಾಜಹಾನ ಡೊಂಗರಗಾಂವ ಹೇಳಿದರು.
ಅವರು ತಾಲೂಕಿನ ಐಗಳಿ ಗ್ರಾಮದಲ್ಲಿ ನಡೆಯುತ್ತಿರುವ ಮಾಣಿಕಪ್ರಭು ದೇವರ ಜಾತ್ರೆಯ 3ನೇ ದಿನದ ಶಿವಾನುಭವ ಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. 30 ವರ್ಷದ ಹಿಂದೆ ಈ ಜಾತ್ರೆಯಲ್ಲಿ ಕೇವಲ 30-40 ಜಾನುವಾರುಗಳು ಸೇರುತ್ತಿದ್ದವು. ಈಗ ಲಕ್ಷಾಂತರ ಜಾನುವಾರುಗಳು ಸೇರುತ್ತಿದ್ದು, ಇದೆಲ್ಲ ಲಿಂ.ರಾಚೋಟೇಶ್ವರ ಸ್ವಾಮಿಗಳ ತಪಸ್ಸಿನ ಪ್ರಭಾವ. ಬರಗಾಲ ಇರುವುದರಿಂದ ರೈತರು ಜಾನುವಾರುಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ನಿಜವಾಗಿಯೂ ರೈತರು ಸಂಕಷ್ಟದಲ್ಲಿದ್ದು, ಸರ್ಕಾರ ಸಮಗ್ರ ಕೃಷಿ ನೀತಿ ಪದ್ಧತಿ ಜಾರಿ ಮಾಡಬೇಕು. ರೈತರ ಬೆಳೆಗೆ ಬೆಂಬಲ ಬೆಲೆ ನೀಡಿ ಖರೀದಿಸಲು ಮುಂದಾಗಬೇಕು. ಬೇಸಿಗೆಯಲ್ಲಿ ನೀರಿನ ತೊಂದರೆಯಾಗಿದ್ದು, ಇಬ್ಬರೂ ಮಹಾತಪಸ್ವಿಗಳು ಬೇಗನೆ ಮಳೆರಾಯನನ್ನು ತರೆಸಿ ನೀರಿನ ಅಭಾವ ಕಡಿಮೆ ಮಾಡಬೇಕು ಎಂದು ಪ್ರಾರ್ಥಿಸಿದರು.
ಈ ವೇಳೆ ದುಮ್ಮವಾಡದ ಶ್ರೀ ಗುರು ಚೈತನ್ಯಾಶ್ರಮದ ಸರ್ಪಭೂಷಣ ದೇವರು ಮಾತನಾಡಿ, ಜಾತ್ರೆ, ಹಬ್ಬ, ಹರಿದಿನಗಳು ಅನಾದಿಕಾಲದಿಂದ ನಮ್ಮ ಸಂಪ್ರದಾಯಗಳಾಗಿವೆ. ತಂದೆಗಿಂತ ತಾಯಿಯ ತ್ಯಾಗ ಮನೋಭಾವ ದೊಡ್ಡದು.ತಾಯಿಯೇ ಮೊದಲು ಮಕ್ಕಳಿಗೆ ಸಂಸ್ಕಾರ ಕಲಿಸುತ್ತಾಳೆ. ಮಕ್ಕಳಿಗೆ ದೂರದರ್ಶನ ಮತ್ತು ಮೊಬೈಲ್‍ಗಳನ್ನು ಕೊಡಬೇಡಿ, ಗುಣಮಟ್ಟದ ಶಿಕ್ಷಣ ಕೊಡಿಸುವಂತೆ ಕಿವಿಮಾತು ಹೇಳಿದ ಅವರು
ಕಾರ್ಯಕ್ರಮದ ಅಧ್ಯಕ್ಷತೆಯನ್ನ ಅಭಿನವ ರಾಚೋಟೇಶ್ವರ ದೇವರು ವಹಿಸಿದ್ದರು.
ಈ ಸಂದರ್ಭದಲ್ಲಿ ಶಿವಬಸವ ದೇವರು, ಮಾತೋಶ್ರೀ ಪ್ರಮೀಳಾ ತಾಯಿ, ವಿಶ್ರಾಂತ ಪ್ರಾಚಾರ್ಯ ಎ.ಎಸ್ ನಾಯಿಕ, ಪತ್ರಕರ್ತ ಪ್ರಕಾಶ ಪೂಜಾರಿ ಮಾತನಾಡಿದರು.
ಈ ವೇಳೆ ಅಪ್ಪಾಸಾಬ ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ರಾಮುಗೌಡ ಪಾಟೀಲ, ಬಸವರಾಜ ಬಿರಾದಾರ, ಅಣ್ಣಾರಾಯ ಹಾಲಳ್ಳಿ, ಸಿದ್ದಪ್ಪ ಬಳ್ಕೊಳ್ಳಿ, ಅಪ್ಪಾಸಾಬ ತೇರದಾಳ, ಭೈರಪ್ಪ ಹುಣಶಿಕಟ್ಟಿ, ಬಂದೇನಮಾಜ ಮುಜಾವರ, ಕಮಿಟಿ ಅಧ್ಯಕ್ಷ ಪ್ರಲಾದ ಪಾಟೀಲ, ಗುರಪ್ಪ ಬಿರಾದಾರ, ಸದಾಶಿವ ಏಳ್ಳೂರ, ಭೈರಪ್ಪ ಬಿಜ್ಜರಗಿ ಸೇರಿ ಅನೇಕರಿದ್ದರು.
ಭಾರತ ಅನೇಕ ಧರ್ಮಗಳಿರುವ ವಿಶಿಷ್ಟ ದೇಶ, ಇಲ್ಲಿ ಎಲ್ಲರೂ ಸಹಬಾಳ್ವೆ ನಡೆಸಿದಾಗ ಬದುಕಿಗೆ ಅರ್ಥ ಬರುತ್ತದೆ. ಧಾರ್ಮಿಕವಾಗಿ. ಸಾಂಸ್ಕøತಿಕವಾಗಿ ಜನರನ್ನು ತಲುಪಲು ಇಂತಹ ಜಾತ್ರಾ ಮಹೋತ್ಸವಗಳ ಆಚರಣೆ ಅಗತ್ಯ. ಜಾತ್ರಾ ಮಹೋತ್ಸವದ ಉದ್ದೇಶ ಜನರಿಗೆ ತಲುಪಿದರೆ ಜಾತ್ರೆ ಸಾರ್ಥಕತೆ ಕಾಣುತ್ತದೆ ಎಂದು ಮಾಜಿ ಶಾಸಕ ಶಹಾಜಹಾನ ಡೊಂಗರಗಾಂವ ಹೇಳಿದರು.