ಬೆಂಗಳೂರು ಸೇರಿ ಹಲವೆಡೆ ಗುಡ್ ಫ್ರೈಡೆ ಆಚರಣೆ
ಬೆಂಗಳೂರು, ಮಾ.೨೯- ಕ್ರೈಸ್ತ ಸಮುದಾಯದ ಪವಿತ್ರ ದಿನವಾದ ಶುಭ ಶುಕ್ರವಾರವನ್ನು(ಗುಡ್ ಫ್ರೈಡೆ) ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಉಪವಾಸ, ಧ್ಯಾನ ಹಾಗೂ ಪ್ರಾರ್ಥನೆಯೊಂದಿಗೆ ಆಚರಿಸಲಾಯಿತು.
ಶುಕ್ರವಾರ ಬೆಳಿಗ್ಗೆ ೭.೩೦ರಿಂದಲೇ ಆಚರಣೆಗಳು ಆರಂಭಗೊಂಡವು. ಚರ್ಚ್‌ಗಳಲ್ಲಿ ಪ್ರಾರ್ಥನೆ, ಧ್ಯಾನ, ಯೇಸುವಿನ ಶಿಲುಬೆಯ ಹಾದಿಯ ವಾಚನ ನಡೆಯಿತು. ಎಂ.ಜಿ.ರಸ್ತೆಯ ಈಸ್ಟ್ ಪರೇಡ್ ಮಲಯಾಳಂ ಚರ್ಚ್‌ನಲ್ಲಿ ನೂರಾರು ಭಕ್ತರು ಭಾಗಿಯಾಗಿದ್ದರು.
ಚಾಮರಾಜಪೇಟೆಯ ಸೇಂಟ್ ಲೂಕ್ಸ್ ಚರ್ಚ್‌ನಲ್ಲೂ ಗುಡ್‌ಫ್ರೈಡೇ ಆಚರಣೆ ನಡೆಯಿತು. ಅದೇ ರೀತಿ,
ಎಟಿಯನ್ ಸ್ಮಾರಕ ಚರ್ಚ್, ತಿಲಕನಗರ
ಸೇಂಟ್ ಮೇರಿ ಚರ್ಚ್, ಶಿವಜಿಂಗಾರ್ ಫ್ರಾಂಚೈಸ್ ಕ್ಸೇವಿಯರ್ ಚರ್ಚ್, ಸೇಂಟ್ ಜೋಹಾನ್ಸ್ ರಸ್ತೆ, ಶಿಶು ಜೀಸಸ್ ಚರ್ಚ್ ವಿವೇಕನಗರ ಸೇರಿದಂತೆ ಹಲವೆಡೆ ವಿಶೇಷ ಪ್ರಾರ್ಥನೆ ಜರುಗಿತು.
ಚರ್ಚ್‌ನ ವೆಬ್‌ಸೈಟ್, ಯೂಟ್ಯೂಬ್, ಫೇಸ್‌ಬುಕ್ ಹಾಗೂ ಟ್ವಿಟರ್‌ಗಳಲ್ಲಿ ಕಾರ್ಯಕ್ರಮದ ನೇರಪ್ರಸಾರ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ಮನೆಗಳಿಂದಲೇ ಆಚರಣೆಯಲ್ಲಿ ಪಾಲ್ಗೊಂಡರು.
ಯೇಸುವನ್ನು ಗೊಲ್ಗೊಥಾ
ಬೆಟ್ಟಕ್ಕೆ ಕರೆದೊಯ್ದ ಅಂದಿನ ದೃಶ್ಯ, ಬೀಬತ್ಸತೆ ಇಂದಿಗೂ ಮಾಸಿಲ್ಲ. ಪ್ರಸ್ತುತ ಬಂದೂಕುಗಳು, ಟ್ಯಾಂಕ್, ಬಾಂಬ್, ಗ್ರೆನೆಡ್, ರಾಕೆಟ್‌ಗಳ ರೂಪತಾಳಿ ಭೀಕರ ಸನ್ನಿವೇಶಗಳನ್ನು ಸೃಷ್ಟಿಸುತ್ತಿವೆ. ಪರಸ್ಪರ ಪ್ರೀತಿಸುವ ಬದಲು ದ್ವೇಷದ ಜ್ವಾಲೆ ಹರಡುತ್ತಿದೆ ಎಂದು ಕ್ರೈಸ್ತ ಧರ್ಮ ಗುರುಗಳು ವಿಷಾದ ವ್ಯಕ್ತಪಡಿಸಿದರು.
ಜಗತ್ತಿನಾದ್ಯಂತ ಇರುವ ಕೆಟ್ಟತನಕ್ಕೆ ಯೇಸುವಿನ ಪ್ರೀತಿ, ಕರುಣೆ, ಕ್ಷಮೆ, ಔದಾರ್ಯಗಳು ಔಷಧವಾಗಬೇಕು. ಹೊಣೆಗೇಡಿತನ, ಕ್ರೋಧ, ತಿಳಿಗೇಡಿತನಕ್ಕೆ ಯೇಸು ಉತ್ತರವಾಗಿದ್ದಾರೆ.
ಯೇಸುಕ್ರಿಸ್ತ ಶಿಲುಬೆಯನ್ನು ಹೊತ್ತು ನಡೆದಂತೆ ನಾವೂ ಜೀವನದಲ್ಲಿ ಎದುರಾಗುವ ಕಷ್ಟ, ಸಾವು, ನೋವು, ಸಂಕಟಗಳನ್ನು ಎದುರಿಸಿ ಮುನ್ನಡೆಬೇಕಿದೆ. ಸ್ವಾರ್ಥ ತ್ಯಜಿಸಿ ಪರರ ಪ್ರೀತಿಯಲ್ಲಿ ಬದುಕಲು ದೇವರು ತೋರಿರುವ ದಾರಿಯೇ ಶಿಲುಬೆಯ ಹಾದಿ ಎಂದರು.
ಕೆಲವು ಚರ್ಚ್‌ಗಳಲ್ಲಿ ಯೇಸು ಕ್ರಿಸ್ತರ ಬಂಧನ, ಶಿಲುಬೆಯ ಮೇಲೆ ಮರಣವನ್ನಪ್ಪುವ ಘಟನಾವಳಿಗಳನ್ನು ಪ್ರಸ್ತುತಪಡಿಸಲಾಯಿತು. ಧರ್ಮಗುರುಗಳು ರಕ್ತವರ್ಣದ ಪೂಜಾ ಬಟ್ಟೆ ಧರಿಸಿ ಯೇಸು ಕ್ರಿಸ್ತನ ಕೊನೆಯ ಘಳಿಗೆಗಳ ವತ್ತಾಂತ ಓದಿದರು. ಬಳಿಕ ಶಿಲುಬೆಯನ್ನು ಮೆರವಣಿಗೆಯಲ್ಲಿ ತರಲಾಯಿತು. ತ್ಯಾಗದ ಉಳಿಕೆಯ ಹಣವನ್ನು ಬಡವರಿಗೆ ಹಂಚಲಾಯಿತು.