ಮಕ್ಕಳಲ್ಲಿ ಮಾನವೀಯ, ನೈತಿಕ ಮೌಲ್ಯ ಬೆಳೆಸಿ : ರೇಷ್ಮಾ ಕೌರ್
ಬೀದರ್: ಮಾ.29:ಮಕ್ಕಳಲ್ಲಿ ಮಾನವೀಯ, ನೈತಿಕ ಮೌಲ್ಯಗಳನ್ನು ಬೆಳೆಸಬೇಕು ಎಂದು ಗುರುನಾನಕ್ ಶಿಕ್ಷಣ ಸಂಸ್ಥೆಗಳ ಸಮೂಹದ ಉಪಾಧ್ಯಕ್ಷೆ ಶ್ರೀಮತಿ ರೇಷ್ಮಾ ಕೌರ್ ಇಲ್ಲಿ ಸಲಹೆ ನೀಡಿದರು.
ನಗರದ ನೆಹರು ಕ್ರೀಡಾಂಗಣ ಬಳಿ ಇರುವ ಗುರುನಾನಕ್ ಪಬ್ಲಿಕ್ ಶಾಲೆಯ ಆವರಣದಲ್ಲಿ ಗುರುವಾರ ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ನಡೆದ `ಪದವಿ ದಿನ’ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಕ್ಕಳನ್ನು ಮೊಬೈಲ್‍ನಿಂದ ದೂರ ಇಡಬೇಕು. ಮೊಬೈಲ್ ಮಕ್ಕಳ ಕಲಿಕೆ ಮೇಲೆ, ಸ್ವಭಾವದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಎಚ್ಚರಿಸಿದರು.
ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಹಿರಿದಾಗಿದೆ. ಮಕ್ಕಳಿಗೆ ಮಾದರಿಯಾಗುವ ರೀತಿಯಲ್ಲಿ ಪಾಲಕರು ನಡೆದುಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು. ಪದವಿ ದಿನ ಸಮಾರಂಭದಲ್ಲಿ ಪಾಲಕರು, ಮಕ್ಕಳು ಪಾಲ್ಗೊಂಡು ಸಂಭ್ರಮ ಹೆಚ್ಚಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಜೇತ ಮಕ್ಕಳಿಗೆ ಮೆಡಲ್ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಿದರು.
ಅದೇ ರೀತಿ ಡಾ|| ಮೊಹ್ಮದ ಶೋಯೇಬ್ ಅಕ್ರಮ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ಕೊಟ್ಟರು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಆರಿಫ್ ಹಾದಿ, ಪ್ರಾಂಶುಪಾಲರಾದ ಎನ್.ರಾಜು, ಶೇಖ್ ಅಮಜದ ಅಲಿ ಉಪಸ್ಥಿತರಿದ್ದರು.