ಮಾ.31ಕ್ಕೆ ನಗರದಲ್ಲಿ ಯೋಗ ಜಾಗೃತಿ ಕಾರ್ಯಕ್ರಮ
ಸಂಜೆವಾಣಿ ನ್ಯೂಸ್
ಮೈಸೂರು: ಮಾ.29:- ಒಡನಾಡಿ ಸೇವಾ ಸಂಸ್ಥೆ ವತಿಯಿಂದ ಮಾ.31ರಂದು ಮಾನವ ಕಳ್ಳ ಸಾಗಣೆ ತಡೆಗಾಗಿ ಯೋಗದ ಮೂಲಕ ಜಾಗೃತಿ ಮೂಡಿಸುವ ಯೋಗಾ ಸ್ಟಾಪ್ಸ್ ಟ್ರಾಫಿಕಿಂಗ್ ಎಂಬ ಅಂತರ ರಾಷ್ಟ್ರೀಯ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥರಾದ ಸ್ಟ್ಯಾನ್ಲಿ ಮತ್ತು ಪರಶು ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದರಲ್ಲಿ ಸುಮಾರು 42 ದೇಶಗಳ 170ಕ್ಕೂ ನಗರಗಳಲ್ಲಿ ಏಕ ಕಾಲದರಲ್ಲಿ ಒಡನಾಡಿ ಮುದ್ರಿಸಿರುವ ಸಂದೇಶದ ಟೀ ಶರ್ಟ್ ಧರಿಸಿ ಸಹೃದಯರು ಪಾಲ್ಗೊಳ್ಳಲಿದ್ದಾರೆ.
ಮುಖ್ಯ ಕಾರ್ಯಕ್ರಮ ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಅಂದು ಬೆಳಗ್ಗೆ 7.30ಕ್ಕೆ ಆರಂಭವಾಗಲಿದೆ. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ನ್ಯಾಯಾಧೀಶೆ ಡಿ.ಮಂಜುಳಾ, ಶೈಮಾ ಖಮ್ರೋಜ್, ಡಾ.ರತಿರಾವ್, ಯೋಗಾಚಾರ್ಯ ಬಿ. ಶಾಂತಾರಾಮ್ ಇನ್ನಿತರರು ಪಾಲ್ಗೊಳ್ಳುವರು.
ಒಡನಾಡಿಯ ಕಾರ್ಯಕ್ರಮಗಳಿಗೆ ನೈತಿಕ ಹಾಗೂ ಸಾಮಾಜಿಕ ಬೆಂಬಲ ಕ್ರೋಢೀಕರಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಯೋಗಿಗಳ ಮೂಲಕ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತುತ್ತಾ, ಆರೋಗ್ಯಕರ ಸಮಾಜ ಕಟ್ಟುವುದು ಇದರ ಮತ್ತೊಂದು ಉದ್ದೇಶವಾಗಿದೆ.
ಜತೆಗೆ, ಈ ಬಾರಿಯ ಕಾರ್ಯಕ್ರಮ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಕೊಲೆಯಾದ ಸೌಜನ್ಯಳ ನೆನಪಿನಲ್ಲಿ ಹಾಗೂ ಆಕೆಯ ಸಾವಿಗೆ ನ್ಯಾಯ ದೊರಕಿಸುವಂತೆ ಒತ್ತಾಯಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಯೋಗಾಚಾರ್ಯ ಬಿ.ಶಾಂತಾರಾಮ್, ಪ್ರದೀಪ್ ಇದ್ದರು.