ಇ-ಸ್ವತ್ತು ಮಾಡಿಕೊಡಲು ಒತ್ತಾಯಿಸಿ ದಂಪತಿ ಧರಣಿ
ಕಲಬುರಗಿ,ಮಾ.28-ಆಳಂದ ತಾಲ್ಲೂಕಿನ ಸಾವಳೇಶ್ವರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕಿಣ್ಣಿ ಅಬ್ಬಾಸ ಗ್ರಾಮದಲ್ಲಿ ಇಂದಿರಾ ಆವಾಸ್ ಯೋಜನೆ ಅಡಿಯಲ್ಲಿ ಮನೆ ಮಂಜೂರಾಗಿದ್ದು, ಮನೆ ನಿರ್ಮಿಸಲು ಅನುಮತಿ ನೀಡಿ ಇ-ಸ್ವತ್ತು ಅಥವಾ 11-ಬಿ ಮಾಡಿಕೊಡಲು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮದ ಲಕ್ಷ್ಮೀ ಪಂಡಿತ ಸಲಗರೆ ದಂಪತಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಿದರು.
ಇ-ಸ್ವತ್ತು ಮಾಡಿಕೊಡಲು ನಿರಾಕರಿಸುತ್ತಿರುವ ಪಿಡಿಒ ಮೇಲೆ ಶಿಸ್ತು ಕ್ರಮ ಜರುಗಿಸಬೇಕು, ಗ್ರಾಮದಲ್ಲಿ ರಸ್ತೆ ಒತ್ತುವರಿ ಮಾಡಿರುವುದನ್ನು ತೆರವುಗೊಳಿಸಬೇಕು, ಗ್ರಾಮಕ್ಕೆ ಕುಡಿಯುವ ನೀರು ಮತ್ತು ವಿದ್ಯುತ್ ದೀಪದ ವ್ಯವಸ್ಥೆ ಕಲ್ಪಿಸಬೇಕು, ಸರಕಾರಿ ಶಾಲೆಯಲ್ಲಿ ಬಿಸಿಯೂಟದ ಸಿಬ್ಬಂದಿ ನಿಯೋಜನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.