ಸಚಿವ ಪ್ರಿಯಾಂಕ್ ಖರ್ಗೆಗೆ ಜಾತಿ ನಿಂದನೆ, ಜೀವ ಬೆದರಿಕೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಕಲಬುರಗಿ,ಮಾ.28: ನನ್ನ ವಿರುದ್ಧ ಜಾತಿ ನಿಂದನೆ ಮಾಡಿರುವುದಲ್ಲದೆ ಮಾತನಾಡುವುದನ್ನು ಕಡಿಮೆ ಮಾಡದೆ ಹೋದರೆ ಎನ್‍ಕೌಂಟರ್ ಮಾಡುವುದಾಗಿ ಜೀವ ಬೆದರಿಕೆ ಪತ್ರ ಬಂದಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ತಮಗೆ ಬರೆದಿರುವ ಪತ್ರದ ಸಾರಾಂಶವನ್ನು ಓದುತ್ತಾ ತೀವ್ರ ಬೇಸರ ವ್ಯಕ್ತಪಡಿಸಿದರು.
ಬೆದರಿಕೆ ಪತ್ರದಲ್ಲಿ ನನ್ನ ಜಾತಿಯ ವಿರುದ್ಧ ಕೆಟ್ಟಕೆಟ್ಟದಾಗಿ ಪದಗಳನ್ನು ಬಳಸಲಾಗಿದೆ. ಎಂಥದ್ದೇ ವೇಷಭೂಷಣ ಹಾಕಿದರೂ ನನ್ನ ಜಾತಿಯಿಂದಲೇ ನನ್ನನ್ನು ಗುರುತಿಸುತ್ತಾರೆ ಎನ್ನುವ ಅರ್ಥದಲ್ಲಿ ಪತ್ರದಲ್ಲಿ ನಿಂದನಾರ್ಹ ಪದಗಳನ್ನು ಬಳಸಲಾಗಿದೆ. ಮೇಲಾಗಿ, ಹೆಚ್ಚು ಮಾತನಾಡುವುದನ್ನು ನಿಲ್ಲಿಸದೆ ಹೋದರೆ ಪೊಲೀಸ್, ರಾಜಕಾರಣಿ ಅಥವಾ ಯಾವುದಾದರೂ ಜನಸಾಮಾನ್ಯನಿಂದ ಎನ್‍ಕೌಂಟರ್ ಮಾಡಿಸುವುದಾಗಿ ಜೀವ ಬೆದರಿಕೆ ಹಾಕಲಾಗಿದೆ ಎಂದರು.
ಪತ್ರದಲ್ಲಿ ತಮ್ಮ ತಾಯಿ-ತಂದೆ ಸೇರಿದಂತೆ ಕುಟುಂಬದ ಎಲ್ಲ ಸದಸ್ಯರ ವಿರುದ್ಧ ಅಶ್ಲೀಲ ಪದಗಳನ್ನು ಬಳಸಿದ ಪತ್ರವನ್ನು ಕಲಬುರಗಿಯ ಒಂದು ಅಂಚೆ ಕಚೇರಿಯಿಂದ ಬೆಂಗಳೂರಿನ ವಿಧಾನಸೌಧದಲ್ಲಿರುವ ತಮ್ಮ ಕಚೇರಿಗೆ ಪೋಸ್ಟ್ ಮಾಡಲಾಗಿದೆ. ಫೆ.15, 2024ರಂದು ಈ ಪತ್ರ ಬರೆಯಲಾಗಿದ್ದು, ಎಂಟ್ಹತ್ತು ದಿನಗಳ ಹಿಂದೆ ತಮ್ಮ ಕಚೇರಿ ತಲುಪಿದೆ. ಹೀಗೆ ಬಂದಿರುವ ಬೆದರಿಕೆ ಪತ್ರದ ಮೂಲ ಪತ್ತೆ ಹಚ್ಚಿ ತನಿಖೆ ನಡೆಸುವಂತೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಮಾಹಿತಿ ನೀಡಿದರು. ಪತ್ರದ ತಿರುಳು ಮತ್ತು ಬಳಸಿರುವ ಭಾಷೆ ನೋಡಿದರೆ ಇದು ಯಾವ ಪಕ್ಷ ಅಥವಾ ಸಂಘಟನೆಯ ವಿಚಾರಧಾರೆ ಎಂಬುದು ಸುಲಭಕ್ಕೆ ಅರ್ಥವಾಗುತ್ತದೆ. ಬುದ್ಧ-ಬಸವ-ಅಂಬೇಡ್ಕರ್ ತತ್ವದಲ್ಲಿ ನಂಬಿಕೆ ಇಟ್ಟಿರುವ ತಾವು ಇಂತಹ ಗೊಡ್ಡು ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ಸ್ಟಷ್ಟಪಡಿಸಿದರು.
ಇತ್ತೀಚೆಗೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಶಾಸಕ ಕೆ.ಗೋಪಾಲಯ್ಯ ಅವರಿಗೆ ವ್ಯಕ್ತಿಯೊಬ್ಬ ದೂರವಾಣಿ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಲ್ಪವೂ ವಿಳಂಬ ಮಾಡದೆ ಬೆದರಿಕೆ ಹಾಕಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಇನ್ನೊಂದೆಡೆ, ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದಾಗ ತಮಗೆ ಮೂರು ಬಾರಿ ಜೀವ ಬೆದರಿಕೆ ಕರೆಗಳು ಬಂದಿದ್ದವು. ಈ ಕುರಿತು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೂ ತರಲಾಗಿತ್ತು. ಆದರೆ, ಯಾರೊಬ್ಬರನ್ನೂ ಬಂಧಿಸುವ ಕೆಲಸ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಹೆಸರು ಪ್ರಸ್ತಾಪಿಸದೆ ಪರೋಕ್ಷವಾಗಿ ಉಲ್ಲೇಖಿಸಿದ ಪ್ರಿಯಾಂಕ್, ಕಳೆದ ಅಸೆಂಬ್ಲಿ ಚುನಾವಣೆ ವೇಳೆ ಚಿತ್ತಾಪುರದ ಅಪರಂಜಿ ಇಡೀ ಖರ್ಗೆ ಕುಟುಂಬವನ್ನು ಸಾಫ್ ಮಾಡುವ ಬೆದರಿಕೆ ಹಾಕಿದ್ದಾಗಲೂ ಅಂದಿನ ಬಿಜೆಪಿ ಸರಕಾರ ಆತನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಮೇಲಾಗಿ, ಆ ವ್ಯಕ್ತಿಯ ಪರವಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಚುನಾವಣಾ ಪ್ರಚಾರ ಮಾಡಿ ಹೋಗಿದ್ದರು. ಯಾದಗಿರಿ ಬಳಿ ಅಪಘಾತ ಸಂಭವಿಸಿದ್ದರೂ, ಆತನನ್ನು ಕೊಲ್ಲಲು ತಾವೇ ಅಪಘಾತ ಮಾಡಿಸಿರುವುದಾಗಿ ತಮ್ಮ ವಿರುದ್ಧ ಬಿಜೆಪಿಯವರು ಹರಿಹಾಯ್ದಿದ್ದರು. ವಿಪರ್ಯಾಸ ಎಂದರೆ, ತನಿಖೆಯ ಬಳಿಕ ಆ ಆರೋಪದಲ್ಲಿ ಹುರುಳಿಲ್ಲ ಎಂಬುದು ಸಾಬೀತಾಗಿದೆ. ಇಷ್ಟೆಲ್ಲಾ ಆದಾಗ್ಯೂ ಬಿಜೆಪಿಯ ಒಬ್ಬ ಮುಖಂಡರೂ ತಮ್ಮ ಕ್ಷಮೆ ಕೋರಿಲ್ಲ ಎಂದು ಪ್ರಿಯಾಂಕ್ ಅಚ್ಚರಿ ವ್ಯಕ್ತಪಡಿಸಿದರು.
ಈಗ ತಮಗೆ ಬಂದಿರುವ ಈ ಜೀವ ಬೆದರಿಕೆ ಪತ್ರದ ಹಿಂದೆ ಮನುವಾದಿಗಳ ಕೈವಾಡವಿದೆ. ಮೇಲಾಗಿ, ಮನುವಾದಿಗಳ ಬೆನ್ನಿಗೆ ಬಿಜೆಪಿಯವರು ನಿಂತಿದ್ದಾರೆ. ಇಷ್ಟೆಲ್ಲಾ ಇದ್ದಾಗ್ಯೂ ಸಂಸದ ಉಮೇಶ್ ಜಾಧವ್ ಅವರು ಮಾತೆತ್ತಿದರೆ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸರಿಯಿಲ್ಲ. ಹೀಗಾಗಿ, ಮುಕ್ತ ಮತ್ತು ಪಾರದರ್ಶಕ ಚುನಾವಣೆ ನಡೆಯೋದು ಅನುಮಾನ ಎನ್ನುತ್ತಿದ್ದಾರೆ. ಹಾಗಾದರೆ, ಕೇಂದ್ರ ಚುನಾವಣಾ ಆಯೋಗ ಯಾರ ಕೈಯಲ್ಲಿದೆ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಕಲಬುರಗಿ ಜಿಲ್ಲೆಯಲ್ಲಿ ಈವರೆಗೆ ಯಾವುದೇ ಚುನಾವಣೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟ ಚರಿತ್ರೆಯಿಲ್ಲ. ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಯಾವುದೇ ಆಘಾತಕಾರಿ ಘಟನೆಗಳು ನಡೆದಿಲ್ಲ. ಇಷ್ಟಕ್ಕೂ ಕಲಬುರಗಿ ಜಿಲ್ಲೆ ಎಂದರೆ ಉತ್ತರ ಪ್ರದೇಶ ಅಥವಾ ಬಿಹಾರ ಅಲ್ಲ ಎಂದು ಮಾರುತ್ತರ ನೀಡಿದರು.
ಶಾಸಕ ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್, ಚಿತ್ತಾಪುರದ ಕಾಂಗ್ರೆಸ್ ಮುಖಂಡ ಅರವಿಂದ ಚವ್ಹಾಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
‘ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ’
ಈ ಬಾರಿ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ಖಚಿತ ಎಂದು ಕೆಕೆಆರ್‍ಡಿಬಿ ಅಧ್ಯಕ್ಷ ಡಾ.ಅಜಯ್‍ಸಿಂಗ್ ಹೇಳಿದರು. ಈಗಾಗಲೇ ಜೇವರ್ಗಿ ತಾಲೂಕಿನಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರ, ಕಾರ್ಯಕರ್ತರ ಸಭೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮುಂದಿನ ಎಂಟ್ಹತ್ತು ದಿನಗಳಲ್ಲಿ ಯಡ್ರಾಮಿ ತಾಲೂಕಿನಲ್ಲಿಯೂ ಕಾಂಗ್ರೆಸ್ ಮುಖಂಡರ ಹಾಗೂ ಕಾರ್ಯಕರ್ತರ ಸಭೆ ನಡೆಸಲಾಗುವುದು ಎಂದರು.