ನೇಪಥ್ಯ ನಾಟಕೋತ್ಸವಕ್ಕೆ ಸಂಭ್ರಮದ ತೆರೆ ನಾಟಕಗಳು ತ್ರಿಕೋನ ಪ್ರೇಮಕಥೆಯಿದ್ದಂತೆ : ಡಾ. ಶ್ರೇಯಾ
ಬೀದರ:ಮಾ.28: ನಾಟಕಗಳು ತ್ರಿಕೋನ ಪ್ರೇಮಕಥೆಯಿದ್ದಂತೆ. ಕಲೆ, ಕಲಾವಿದ ಮತ್ತು ಪ್ರೇಕ್ಷಕರನ್ನೊಳಗೊಂಡ ವ್ಯಕ್ತಿಯ ಜೀವನದ ನೈಜ ಕಥೆಯೇ ನಾಟಕಗಳು. ಜೀವನವೇ ಒಂದು ನಾಟಕರಂಗ. ಅದರಲ್ಲಿ ನಾವು ನೀವುಗಳು ಒಂದು ಅಂಗವಿದ್ದಂತೆ. ನಾಟಕಗಳು ದುಃಖಾಂತ್ಯವೇ ಆಗಲಿ. ಸುಖಾಂತ್ಯವೇ ಆಗಲಿ. ಸಮಾಜಕ್ಕೆ ಒಂದು ಸಂದೇಶ ನೀಡುತ್ತವೆ ಎಂದು ಸಾಹಿತಿ ಡಾ. ಶ್ರೇಯಾ ಮಹೇಂದ್ರಕರ್ ತಿಳಿಸಿದರು.
ಜಾನಪದ ಕಲಾವಿದರ ಬಳಗ, ಮಕ್ಕಳ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಜರುಗಿದ ಏಳು ದಿವಸಗಳ ನೇಪಥ್ಯ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಅಂಬಿಗರ ಚೌಡಯ್ಯ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಜಗನ್ನಾಥ ಜಮಾದಾರ ಮಾತನಾಡಿ ಹಿಂದೆ ನಾಟಕಗಳನ್ನು ನೋಡಲು ನಾಮುಂದೆ ತಾಮುಂದೆ ಎಂದು ಮನೆಯಿಂದಲೇ ಹೊದಿಕೆ, ಚಾಪೆ ತೆಗೆದುಕೊಂಡು ಹೋಗಿ, ಒಂದು ಗಂಟೆ ಮೊದಲೇ ಜಾಗ ಮೀಸಲು ಮಾಡಿಕೊಳ್ಳುತ್ತಿದ್ದರು. ಆದರೆ ಇಂದು ಆಧುನಿಕರಣ ಮತ್ತು ಮೊಬೈಲ್ ಯುಗದಲ್ಲಿ ರಂಗಕಲೆ ತನ್ನ ಬೆಲೆ ಕಳೆದುಕೊಳ್ಳುತ್ತಿದೆ. ಹೀಗಾಗಿ ರಂಗಭೂಮಿ, ಲಕ್ಷ ಕೋಟಿ ಸಂಪಾದನೆ ಮಾಡಿದರೂ ನಮಗೆ ಶಾಂತಿ ಸಿಗುವುದಿಲ್ಲ. ಆದರೆ ಕಲೆ ಮತ್ತು ಕಲಾವಿದರು ಉಳಿದರೆ ಮಾತ್ರ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯ ಎಂದರು.
ಹಿರಿಯ ರಂಗಕಲಾವಿದ ಸಂಗ್ರಾಮ ಎಂಗಳೆ ಮಾತನಾಡಿ ಏಳು ದಿವಸಗಳ ನೇಪಥ್ಯ ನಾಟಕೋತ್ಸವದಲ್ಲಿ ಹಲವು ವಿಷಯಗಳನ್ನು ಕಲಿತೇವು. ನವರಸಗಳ ಜ್ಞಾನ, ಹೊಸ ಕಲೆಗಳ ಪರಿಚಯವಾಯಿತು. ನಾಟಕಗಳು ಹಾಗೂ ಅದರಲ್ಲಿರುವ ವಿಷಯಗಳು ನಮಗೆ ಚಿಂತನೆಗೆ ಈಡು ಮಾಡುತ್ತವೆ. ಪರವಶರಾಗುವಂತೆ ಮಾಡುತ್ತವೆ ಎಂದರು.
ವೇದಿಕೆ ಮೇಲೆ ಲಂಬಾಣಿ ಕಲಾವಿದೆ ಲಲಿತಾ ಲೋಕಪವಾರ್ ಅವರನ್ನು ಸನ್ಮಾನಿಸಲಾಯಿತು. ಏಳು ದಿವಸಗಳ ನೇಪಥ್ಯ ನಾಟಕೋತ್ಸವದ ಕರ್ತೃಗಳಾದ ಪಾರ್ವತಿ ವಿಜಯಕುಮಾರ ಸೋನಾರೆ ದಂಪತಿಗಳಿಗೆ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಸನ್ಮಾನಿಸಲಾಯಿತು. ವೇದಿಕೆ ಮೇಲೆ ಎಂ.ಎಸ್.ಮನೋಹರ, ಲಕ್ಷ್ಮೀ ಅಬ್ರಹಾಂ ಉಪಸ್ಥಿತರಿದ್ದರು. ಸಂಜುಕುಮಾರ ಉಜನಿ ಹಾಗೂ ಸಂಗಡಿಗರಿಂದ ತತ್ವಪದ ಗಾಯನ ಜರುಗಿತು. ಸುನೀಲ ಕಡ್ಡೆ ನಿರ್ದೇಶನದ, ಎಚ್.ಎಲ್.ಕೇಶವಮೂರ್ತಿ ರಚನೆಯ ಬೀದರ ಸಮುದಾಯ ಕಲಾವಿದರಿಂದ ‘ಪುಕ್ಸಟ್ಟೆ ಪ್ರಸಂಗ’ ನಾಟಕ ಪ್ರದರ್ಶನ ಜರುಗಿತು. ಸುನೀಲ ಕಡ್ಡೆ ನಿರೂಪಿಸಿದರು. ವಿಜಯಕುಮಾರ ಸೋನಾರೆ ಸ್ವಾಗತಿಸಿದರು. ದೇವಿದಾಸ ಚಿಮಕೊಡೆ ವಂದಿಸಿದರು.
ಕಾರ್ಯಕ್ರಮದಲ್ಲಿ ಏಸುದಾಸ ಅಲಿಯಂಬರ, ಹಿರಿಯ ಸಾಹಿತಿ ಭಾರತಿ ವಸ್ತ್ರದ್, ಪುಷ್ಪ ಕನಕ, ರೇಖಾ ಸೌದಿ, ವೀರೂಪಾಕ್ಷ ಗಾದಗಿ, ನಾಗಶೆಟ್ಟಿ ಧರಂಪೂರ, ಪುಣ್ಯವತಿ ವಿಸಾಜಿ, ವಿದ್ಯಾವತಿ ಬಲ್ಲೂರ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.