ಶರಣ ಬುತ್ತಿ ಸಮರ್ಪಿಸಿದ ಭಕ್ತಸಮೂಹ
ತಾಳಿಕೋಟೆ:ಮಾ.28: ಸ್ಥಳೀಯ ಶ್ರೀ ಶರಣಮುತ್ಯಾರವರ ಜಾತ್ರೋತ್ಸವ ಕುರಿತು ಸಾಗಿಬಂದ ಅಂಕಲಿ ಶ್ರೀ ಗುರು ನಿರುಪಾದೀಶ್ವರರ ಮಹಾ ಪುರಾಣ ಪ್ರವಚನದ ಸನ್ನಿವೇಶದಂತೆ ಬುಧವಾರರಂದು ಭಕ್ತಾಧಿಗಳಿಂದ ಶ್ರೀ ಸಾಂಭಪ್ರಭು ಶರಣಮುತ್ಯಾರ ಮಠಕ್ಕೆ ಶ್ರೀ ಶರಣಬುತ್ತಿ ಸಮರ್ಪಿಸುವ ಕಾರ್ಯಕ್ರಮ ಭಕ್ತಿಭಾವದಿಂದ ಜರುಗಿತು.
ಈ ಕಾರ್ಯಕ್ರಮದ ಅಂಗವಾಗಿ ಕರಿಭಾವಿಯ ಭಕ್ತ ಸಮೂಹ ಹಾಗೂ ತಾಳಿಕೋಟೆ ಪಟ್ಟಣ ಒಳಗೊಂಡು ವಿವಿಧ ಗ್ರಾಮಗಳ ಭಕ್ತಾಧಿಗಳು ಸುಮಂಗಲೆಯರು ಪಾಲ್ಗೊಂಡು ಶ್ರೀ ಶರಣರ ಬುತ್ತಿ ಸಮರ್ಪಿಸುವ ಕಾರ್ಯಕ್ಕೆ ಮುಂದಾದರು.
ಶ್ರೀ ಸಾಂಭ ಪ್ರಭು ಶರಣಮುತ್ಯಾರವರ ಮಠದಲ್ಲಿ ಉಭಯ ಗ್ರಾಮ ಪಟ್ಟಣದವರು ತಂದು ಇರಿಸಲಾದ ಶರಣಬುತ್ತಿ ಗಂಟುಗಳನ್ನು ಸಾಯಂಕಾಲ 5 ಗಂಟೆಗೆ ಶ್ರೀ ಶರಣರ ಮಠದಿಂದ ಶರಣಬುತ್ತಿ ಸಮರ್ಪಿಸುವ ಜಾತ್ರೋತ್ಸವನ್ನಾಗಿ ಮಾರ್ಪಡಿಸಿ ಶ್ರೀಮಠದಿಂದ ಭವ್ಯ ಮೆರವಣಿಗೆಗೆ ಶ್ರೀ ಮಠದ ಬಸಣ್ಣ ಶರಣರು, ಶರಣಪ್ಪ ಶರಣರು ಅವರು ಚಾಲನೆ ನೀಡಿದರು.
ಈ ಮೆರವಣಿಯುದ್ದಕ್ಕೂ ಕರಿಭಾವಿಯಿಂದ ಆಗಮಿಸಿದ 8, 10 ಎತ್ತಿನ ಬಂಡಿಗಳಲ್ಲಿ ಇರಿಸಲಾದ ಶರಣಬುತ್ತಿ ಗಂಟುಗಳು ಹಾಗೂ ಅದೇ ಊರಿನ 6, 7 ಟ್ಯಾಕ್ಟರ್‍ಗಳಲ್ಲಿ ಇರಿಸಲಾದ ಶರಣಬುತ್ತಿ ಗಂಟುಗಳು ಒಳಗೊಂಡಿದಲ್ಲದೇ ಸುಮಾರು 200 ಕ್ಕಿಂತಲೂ ಹೆಚ್ಚು ಮಹಿಳೆಯರು ತಮ್ಮ ತಲೆಯ ಮೇಲೆ ಬುತ್ತಿಗಂಟುಗಳನ್ನು ಇಟ್ಟುಕೊಂಡು ಈ ಮೆರವಣಿಗೆಯಲ್ಲಿ ಭಾಗವಹಿಸಿ ಈ ಹಿಂದಿನ ಇತಿಹಾಸವನ್ನು ಮರುಕಳಿಸುವಂತೆ ಮಾಡಿದ್ದನ್ನು ನೋಡಿದ ಜನರು ಬೆರಗಾಗಿದ್ದೇನು ಕಡಿಮೇನಿಲ್ಲಾ.
ವಿವಿಧ ವಾದ್ಯ ವೈಭವಗಳೊಂದಿಗೆ ಶ್ರೀ ಶರಣರ ಭಾವಚಿತ್ರದ ಹಾಗೂ ನಿರುಪಾದೀಶ್ವರರ ಭಾವಚಿತ್ರ, ಫಲ್ಲಕ್ಕಿ ಉತ್ಸವದ ಮೆರವಣಿಗೆಯಲ್ಲದೇ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವ ವಿದ್ಯಾಲಯದ ಸಂಚಾಲಕಿ ಡಿ.ಕೆ.ಸುವರ್ಣಅಕ್ಕನವರು ಕೆಲವು ಮಕ್ಕಳಿಗೆ ದೇವಾದಿ ದೇವತೆಗಳ ಉಡುಪುಗಳನ್ನು ಹಾಗೂ ಕಿರಟಗಳನ್ನು ಧರಿಸಿದ್ದಲ್ಲದೇ ಶರಣ ಶರಣಿಯರ ಮತ್ತು ಸ್ವಾಮಿ ವಿವೇಕಾನಂದರ ವೇಷ ಭೂಷಣಗಳನ್ನು ಧರಿಸಿದ ಮಕ್ಕಳನ್ನು ಎತ್ತಿನ ಬಂಡಿಯಲ್ಲಿ ಕೂಡ್ರಿಸಿ ಮೆರವಣಿಗೆ ಗೈದಿದ್ದು ಇದೊಂದು ಭೂ ಕೈಲಾಸದಲ್ಲಿ ನಡೆದ ಭಕ್ತಿಯ ಕಾರ್ಯವೆಂಬಂತೆ ಭಾಸವಾಯಿತು.
ಕೊನೆಗೆ ಮೆರವಣಿಗೆ ಶ್ರೀ ಸಾಂಭಪ್ರಭು ಶರಣಮುತ್ಯಾರವರ ಮಂದಿರಕ್ಕೆ ತೆರಳಿ ಎಲ್ಲ ಬುತ್ತಿಯ ಗಂಟುಗಳನ್ನು ಶರಣರ ಮಂದಿರಕ್ಕೆ ಸಮರ್ಪಿಸಲಾಯಿತು.
ನಂತರ ಸಭೆಯಾಗಿ ಮಾರ್ಪಟ್ಟ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಪುರಾಣಿಕರಾದ ಶ್ರೀ ಡಾ.ಶಿವಲಿಂಗಯ್ಯ ಶರಣರು ಶರಣರ ಬುತ್ತಿ ಎಂದರೆನು? ಈ ಸಮರ್ಪಿಸುವ ಕಾರ್ಯಕ್ರಮದಿಂದಾಗುವ ಲಾಭಗಳೇನು? ಎಂಬುದನ್ನು ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವ ವಿದ್ಯಾಲಯದ ಸಂಚಾಲಕಿ ಬಿ.ಕೆ.ಸುವರ್ಣಅಕ್ಕನವರು, ಬಿ.ಕೆ.ಕಾಶಿಬಾಯಿ ಅಜ್ಜಿ, ಶರಣೆ ಕಾಶಿಬಾಯಿ, ಕಾಶಿಬಾಯಿ ಶರಣರ, ಶ್ರೀಮತಿ ಪ್ರೇಮಾಬಾಯಿ ದೇಗಿನಾಳ, ಬಿ.ಕೆ.ಬಸವರಾಜ, ಬಿ.ಕೆ.ಪಾರ್ವತಿ, ಬಿ.ಕೆ.ರತ್ನಾ, ಸಿದ್ದನಗೌಡ ಪೊಲೀಸ್‍ಪಾಟೀಲ(ಕರಿಭಾವಿ), ಬಂಡೆಪ್ಪಗೌಡ ಬಿರಾದಾರ, ಸಿದ್ದಣ್ಣ ಶರಣರ, ಮಲ್ಲಣ್ಣ, ಲಿಂಗರಾಜ, ಸಂಗಮೇಶ, ಹಾಗೂ ಕಾಶಿರಾಯ ದೇಸಾಯಿ(ಶಳ್ಳಗಿ), ಸಂಗಣ್ಣ ಹೂಗಾರ, ಶಾಂತಗೌಡ ಬಿರಾದಾರ, ಮಲ್ಲಣ್ಣ ಇಂಗಳಗಿ, ಶರಣಗೌಡ ಬಿರಾದಾರ, ತಿಪ್ಪಣ್ಣ ಸಜ್ಜನ, ಶ್ರೀಕಾಂತ ಕುಂಭಾರ, ಹಾಗೂ ಸಂಗೀತಗಾರರಾದ ಕುಮಾರ ಕುದರಗುಂಡ, ಬಸನಗೌಡ ಬಿರಾದಾರ, ವಾಯಿಲಿನ್ ವಾದಕ ಯಲ್ಲಪ್ಪ ಗುಂಡಳ್ಳಿ, ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಾವಿರಾರು ಭಕ್ತಸಮೂಹದವರು ಶರಣರ ಬುತ್ತಿಯನ್ನು ಮಹಾ ಪ್ರಸಾದವೆಂದು ಸ್ವಿಕರಿಸಿ ಪುನಿತರಾದರು.