ದಾಸಸಂತರ ಚಳುವಳಿಗಳು ಭಾರತದ ಸಾಂಸ್ಕೃತಿಕ ಇತಿಹಾಸಕ್ಕೆ ದೊಡ್ಡ ತಿರುವುಗಳುಡಾ.ವಿಠಲರಾವ್ ಗಾಯಕ್ವಾಡ್
ಸಂಜೆವಾಣಿ ವಾರ್ತೆ
ಹೊಸಪೇಟೆ ಮಾ28: ಸಂಶೋಧನಾರ್ಥಿಗಳು ಚಳುವಳಿಗಳನ್ನು ಸೀಮಿತ ದೃಪ್ಠಿಯಿಂದ ನೋಡದೆ ಸಾಮಾಜಿಕವಾಗಿ, ಧಾರ್ಮಿಕವಾಗಿ, ಸಾಹಿತ್ಯಕವಾಗಿ, ಅವುಗಳ ಮೂಲ ಆಶಯವನ್ನು ನೋಡಬೇಕಾಗುತ್ತದೆ ಕರ್ನಾಟಕದಲ್ಲಿ ದಾಸಸಾಹಿತ್ಯ ಮಹರಾಷ್ಟ್ರದಲ್ಲಿ ವಾರಕರಿ ಚಳುವಳಿ ಏಕಕಾಲದಲ್ಲಿ ಆರಂಭವಾಗಿದ್ದು ವಾರಕರಿ ಅಂದೋಲನವು ಮಹಾರಾಷ್ಟ್ರದ ಸಾಂಸ್ಕೃತಿಕ ಮತ್ತು ಧಾರ್ಮಿಕ ಜೀವನದ ಅತ್ಯಗತ್ಯ ಭಾಗವಾಗಿದೆ ಈ ಎರಡು ರಾಜ್ಯಗಳು ಅವಳಿ ಸಹೋದರರಿದ್ದಂತೆ ಎಂದು ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ.ವಿಠ್ಠಲರಾವ್ ಟಿ. ಗಾಯಕ್ವಾಡ್ ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ನುಡಿ ಕಟ್ಟಡದಲ್ಲಿ ಪುರಂದರದಾಸ ಅಧ್ಯಯನ ಪೀಠ ಹಾಗೂ ಹಸ್ತಪ್ರತಿಶಾಸ್ತ್ರ ವಿಭಾಗದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ದಾಸ ಸಾಹಿತ್ಯ ವಿಶೇಷ ಉಪನ್ಯಾಸ ಮತ್ತು ಹಳೆಯ ಹೊನ್ನು 100ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಕನ್ನಡ ಹರಿದಾಸರು-ಮರಾಠಿ ಸಂತರು ವಿಷಯದ ಕುರಿತು ಮಾತನಾಡುತ್ತ ಅವರು ಒಂಬತ್ತನೇ ಶತಮಾನದಲ್ಲಿ ಮಹಾರಾಷ್ಟ್ರದಲ್ಲಿ ಮರಾಠಿ ಭಾಷೆ ಆಡು ಭಾಷೆಯಾಗಿತ್ತು. ಮುಂದೆ 13ನೇ ಶತಮಾನದಲ್ಲಿ ಮಹಾನುಭಾವ ಪಂಥವನ್ನು ಶ್ರೀ ಚಕ್ರದರ ಸ್ವಾಮಿಯವರು ಸ್ಥಾಪಿಸುವ ಮೂಲಕ ಮರಾಠಿ ಭಾಷೆಗೆ ಹೊಸ ಕಾಯಕಲ್ಪ ನೀಡಿದರು. ಶ್ರೀ ವಿಠಲನು ಜಾನಪದ ನಾಯಕನಾಗಿದ್ದ ಕಾಲಾನಂತರ ಮರಾಠಿಗರ ಭಕ್ತಿ ಮತ್ತು ಸ್ವಾಭಿಮಾನದ ಸಂಕೇತವಾಗಿ ನೋಡುತ್ತಾರೆ ಎಂದರು. ದಾಸಪರಂಪರೆ ಹುಟ್ಟುಹಾಕಿದ ಕೀರ್ತಿ ಪುರಂದರದಾಸರಿಗೆ ಸಲ್ಲುತ್ತದೆ, ದಾಸ ಮತ್ತು ಸಂತರು ಕನ್ನಡ ಮತ್ತು ಮರಾಠಿ ಅಸ್ಮಿತೆಯನ್ನು ತಂದು ಕೊಟ್ಟವರು. ನಾಡು ನುಡಿ ಸಾಹಿತ್ಯ ಮತ್ತು ಸಂಸ್ಕೃತಿಗೆ ಇವರು ನೀಡಿದ ಕೊಡುಗೆ ಅಪಾರವಾಗಿದೆ ಎಂದರು.
ಈ ಸಂದರ್ಭದಲ್ಲಿ ಅಗಲಿದ ಹಿರಿಯ ಸಾಹಿತಿಗಳಾದ ಡಾ.ಗುರುಲಿಂಗ ಕಾಪಸೆಯವರಿಗೆ ಮೌನಾಚರಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಅವರು ಹರಿದಾಸರಿಗೆ ಮತ್ತು ಕನ್ನಡ ವಿಶ್ವವಿದ್ಯಾಲಯಕ್ಕೆ ಹತ್ತಿರದ ಸಂಬಂಧವಿದ್ದು, ದಾಸರ ಮತ್ತು ಶರಣರ ದಾರಿ ಬೇರೆ ಆದರೂ ಗುರಿ ಮೋಕ್ಷ ಸಂಪಾದಿಸುವುದೇ ಆಗಿತ್ತು. ಧರ್ಮ ಪರಂಪರೆಯಲ್ಲಿ ಏರಿಳಿತವಾದರೂ ಐಕ್ಯತೆಯನ್ನು ಸಾಧಿಸುವಲ್ಲಿ ಭಾರತ ಸದಾ ಮುಂದಿದೆ ಎಂದರು.
ಕಾರ್ಯಕ್ರಮದಲ್ಲಿ ಪುರಂದರದಾಸ ಅಧ್ಯಯನ ಪೀಠದ ಸಂಚಾಲಕರಾದ ಡಾ.ಎಸ್.ಆರ್. ಚನ್ನವೀರಪ್ಪ ಗಣ್ಯರನ್ನು ಸ್ವಾಗತಿಸಿದರು, ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಕೆ ರವೀಂದ್ರನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಳೆಯ ಹೊನ್ನು ಕಾರ್ಯಕ್ರಮದ ಸಂಚಾಲಕರಾದ ಕಮ್ಮಾರ ಸುಮ ನಿರೂಪಿಸಿದರು, ಬಿ. ಸತೀಶ್‍ಗೌಡ ವಂದಿಸಿದರು. ವಿವಿಧ ನಿಕಾಯದ ಡೀನರು, ಮುಖ್ಯಸ್ಥರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
One attachment • Scanned by Gmail