ಸಹಕಾರಿ ತಿದ್ದುಪಡಿ ಕಾಯ್ದೆ :ಸರ್ಕಾರದ ಹಸ್ತಕ್ಷೇಪ ಕುತಂತ್ರಕ್ಕೆ ಸಿರಗಾಪೂರ ವಿರೋಧ
ಕಲಬುರಗಿ: ಮಾ.28:ರಾಜ್ಯ ಸರ್ಕಾರ ಸಹಕಾರ ತಿದ್ದುಪಡಿ ಕಾಯ್ದೆ ಜಾರಿಗೆ ತರುವ ಮೂಲಕ ಸಹಕಾರ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡುವ ಕುತಂತ್ರ ರೂಪಿಸುತ್ತಿದೆ.ಕೂಡಲೇ ಇದನ್ನು ಹಿಂಪಡೆಯಬೇಕು ಎಂದು ಕಲಬುರಗಿ ಚಾಣಕ್ಯ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಅಧ್ಯಕ್ಷ ಹಾಗೂ ಹೋರಾಟಗಾರ ಲಿಂಗರಾಜ ಸಿರಗಾಪೂರ ಅವರು ಆಗ್ರಹಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಇದೇ ತಿಂಗಳ 16 ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು ಎಪ್ರಿಲ್ ತಿಂಗಳಿನಿಂದ ಜಾರಿಗೆ ಬರುವಂತೆ ಕೆಲವು ನಿರ್ದೆಶನಗಳನ್ನು ನೀಡಿದೆ.ಸ್ವಾಯತ್ತತೆ ಸಂಸ್ಥೆಗಳಾದ ಸೌಹಾರ್ದ ಸಹಕಾರಿಗಳಲ್ಲಿ ಹಸ್ತಕ್ಷೇಪ ಮಾಡುವ ಹುನ್ನಾರ ನಡೆಯುತ್ತಿದೆ.ಅಷ್ಟೆ ಅಲ್ಲದೆ ಸಹಕಾರಿ ಸಂಸ್ಥೆಗಳನ್ನು ತುಳಿಯುವ ನೀತಿ ಅನುಸರಿಸುತ್ತಿದೆ.ಸಹಕಾರಿ ಸಂಘಗಳು ಸ್ವಾವಲಂಬಿಯಾಗಿ ಕೆಲಸ ನಿರ್ವಹಿಸುತ್ತಿವೆ.ಇದನ್ನು ಸಹಿಸದ ರಾಜ್ಯ ಸರ್ಕಾರ ಇಲ್ಲದೊಂದು ತಿದ್ದುಪಡಿ ಕಾಯ್ದೆ ತಂದಿದೆ ಎಂದು ಕಿಡಿಕಾರಿದ್ದಾರೆ.
ದಮನ ನೀತಿ ಎಂಬಂತೆ ಸಾಲದ ಮೇಲೆ ನಿಬಂಧನೆಗಳು ಹಾಕಿದೆ.ಸಹಕಾರಿಗಳ ಹೆಚ್ಚುವರಿ ದ್ರವ್ಯ ಸಂಪನ್ಮೂಲವನ್ನು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಹಾಗೂ ಅಪೇಕ್ಸ್ ಬ್ಯಾಂಕ್ ಗಳಲ್ಲಿ ಕಡ್ಡಾಯವಾಗಿ ಹೂಡಿಕೆ ಮಾಡಬೇಕು.ಪ್ರತಿ ಮೂರು ತಿಂಗಳಿಗೊಮ್ಮೆ ಸಂಘದ ಠೇವಣಿ ಮತ್ತು ಸಾಲದ ಬಡ್ಡಿ ದರಗಳನ್ನು ಪರಿಷ್ಕರಿಸಿ ಸಹಕಾರಿ ಉಪ ನಿಭಂದಕರಿಗೆ ಕಡ್ಡಾಯವಾಗಿ ವರದಿ ಸಲ್ಲಿಸುವಂತೆ ಕಾಯ್ದೆಯಲ್ಲಿ ತಿಳಿಸಲಾಗಿದೆ.ಇವೇಲ್ಲವೂ ಸಹಕಾರ ಬೆಳವಣಿಗೆಗೆ ಮಾರಕವಾಗಿದೆ.ಈಗಾಗಲೇ ತಿದ್ದುಪಡಿ ಕಾಯ್ದೆ ವಿರುದ್ಧ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ.ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಮನ ಹರಿಸಿ ತಿದ್ದುಪಡಿ ಕಾಯ್ದೆಯನ್ನು ಕೂಡಲೇ ಹಿಂಪಡೆಯಬೇಕು.ಇಲ್ಲದಿದ್ದಲ್ಲಿ ಸರ್ಕಾರದ ವಿರುದ್ಧ ಹೋರಾಟ ಅನಿವಾರ್ಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.