ವಿಮ್ಸ್ ನರ್ಸಿಂಗ್ ಕಾಲೇಜ್ ನಲ್ಲಿ ಹುತಾತ್ಮ ದಿನಾಚರಣೆ
ಸಂಜೆವಾಣಿ ವಾರ್ತೆಬಳ್ಳಾರಿ, ಮಾ.28 ವಿಮ್ಸ್ ನರ್ಸಿಂಗ್ ಕಾಲೇಜಿನಲ್ಲಿ ಎ ಐ ಡಿ ವೈ ಓ ಯುವಜನ ಸಂಘಟನೆ ವತಿಯಿಂದ ಭಗತ್ ಸಿಂಗ್, ರಾಜಗುರು, ಸುಖದೇವ್ ರವರ 94ನೇ ಹುತಾತ್ಮ ದಿನಾಚರಣೆಯನ್ನು ಆಚರಿಸಲಾಯಿತು.ಡಾಕ್ಟರ್ ಪ್ರಮೋದ್ ರವರು ಮಾತನಾಡುತ್ತಾ – “ಭಗತ್ ಸಿಂಗ್ ಅವರು ನಮ್ಮ ದೇಶದ ಕ್ರಾಂತಿಕಾರಿ ಹೋರಾಟಗಳಲ್ಲಿ ಮುಂಚೂಣಿ ಪಾತ್ರವನ್ನು ವಹಿಸಿದಂತವರು. ರಾಜಿ ರಹಿತ ಹೋರಾಟದ ಪಂಥದ ಅಗ್ರಗಣ್ಯರಲ್ಲಿ ಭಗತ್ ಸಿಂಗ್ ಅವರ ಪಾತ್ರ ಬಹುಮುಖ್ಯವಾದದ್ದು. ದೇಶದ ಜನತೆಗೆ ಯುವಕರಿಗೆ ಇಂದಿಗೂ ಭಗತ್ ಸಿಂಗ್ ಹೆಸರು ಕೇಳಿದರೆ ಮೈ ರೋಮಾಂಚನಗೊಳ್ಳುತ್ತದೆ ಏಕೆಂದರೆ ಅವರ ವಿಚಾರ ಎಲ್ಲರನ್ನು ಆಕರ್ಷಿಸುತ್ತದೆ. ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದ ಅವರ ವಿಚಾರ ಸಮಾಜವಾದದ ಕನಸು, ಶೋಷಣೆರಹಿತ ಸಮಾಜವನ್ನು ಕಟ್ಟುವ ಅವರ ಮಹತ್ವಾಕಾಂಕ್ಷೆ ಬ್ರಿಟಿಷರಿಗೆ ನುಂಗಲಾರದ ತುತ್ತಾಗಿತ್ತು. ಮೊದಲಿಗೆ ಕೆಲವು ಬ್ರಿಟಿಷ್ ಅಧಿಕಾರಿಗಳನ್ನು ಸಾಯಿಸುವುದರಿಂದ ಸಮಸ್ಯೆ ಬಗೆಹರಿಯುತ್ತದೆ ಎಂದುಕೊಂಡಿದ್ದ ಭಗತ್ ಸಿಂಗ್ ಅವರ ವಿಚಾರ ನಂತರ ಬದಲಾಗುತ್ತದೆ ಜನಗಳನ್ನ ಸಂಘಟಿಸಿ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಸಜ್ಜುಗೊಳಿಸಬೇಕು ಎಂಬ ಅವರ ಹೋರಾಟದ ಹಾದಿ ಬ್ರಿಟಿಷರಿಗೆ ಇನ್ನೂ ಹೆಚ್ಚು ಭಯವಾಗಿ ಪರಿಣಮಿಸುತ್ತದೆ. ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಿದಾಗ ಅವರ ತಂದೆ ಕಿಶನ್ ಸಿಂಗ್ ಬ್ರಿಟಿಷರಿಗೆ ಕ್ಷಮೆ ಕೋರಿ ಪತ್ರ ಬರೆದು ನನ್ನ ಮಗನ ಶಿಕ್ಷೆಯನ್ನು ಕಡಿಮೆ ಮಾಡಿ ಎಂದು ಪತ್ರವನ್ನು ಬರೆದಿದ್ದರು. ಇದನ್ನು ಕೇಳಿ ಸಹಿಸಲಾಗದ ಭಗತ್ ಸಿಂಗ್, ಅವರ ತಂದೆಗೆ ಹೀಗೆ ಹೇಳುತ್ತಾರೆ ಅಪ್ಪ ನೀನೇಕೆ ನನ್ನ ವಿಷಯದಲ್ಲಿ ತಪ್ಪು ಕೆಲಸ ಮಾಡಿದೆ ನಮ್ಮ ಮುಂದಿನ ಹೋರಾಟದ ನಿರ್ಧಾರ ಈಗಾಗಲೇ ತೆಗೆದುಕೊಂಡಾಗಿದೆ ಈಗ ನೀನು ದೇಶದ ಬೇರೆ ತಂದೆಯವರಿಗೆ ಆದರ್ಶವಾಗಬೇಕಾಗಿದೆ ಹಾಗಾಗಿ ಬ್ರಿಟಿಷರ ಹತ್ತಿರ ನನ್ನ ಪ್ರಾಣಭಿಕ್ಷೆ ಬೇಡುವುದು ಸರಿಯಲ್ಲ ಎಂದು ಪ್ರತಿಕ್ರಿಯಿಸಿದರು. ಜೈಲಿನಲ್ಲಿದ್ದಾಗಲೂ ಸಹ ಅಲ್ಲಿ ರಾಜಕೀಯ ಕೈದಿಗಳನ್ನ ಅತ್ಯಂತ ಕೀಳಾಗಿ ನೋಡುತ್ತಿದ್ದಂತ ಸಂದರ್ಭದಲ್ಲಿ ಸುಮಾರು 92 ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿ ತಮ್ಮ ಬೇಡಿಕೆಗಳಾದ ಒಳ್ಳೆ ಬಟ್ಟೆ, ಒಳ್ಳೆಯ ಆಹಾರ, ಓದಲು ಪುಸ್ತಕ ಪತ್ರಿಕೆಗಳ ಪೂರೈಕೆಗಾಗಿ ಮಾಡಿದ ಅವರ ಹೋರಾಟ ಯಶಸ್ವಿಯಾಗಿತ್ತು. ಈ ಹೋರಾಟದಿಂದ ಭಗತ್ ಸಿಂಗ್ ದೇಶದಲ್ಲಿ ಎಲ್ಲ ಮನೆಮಾತಾದರು. ಹೀಗೆ ಬಿಟ್ಟರೆ ಭಗತ್ ಸಿಂಗ್ ಗಾಂಧೀಜಿಯವರಿಗಿಂತ ಹೆಚ್ಚು ಪ್ರಬಲರಾಗುತ್ತಾರೆಂದು ಬ್ರಿಟಿಷರು ಬೇಗನೆ ಅವರನ್ನ ಮರಣದಂಡನೆ ಒಂದು ದಿನ ಮುಂಚಿತವಾಗಿ ಅಂದರೆ ಮಾರ್ಚ್ 24ರ ಬದಲು ಮಾರ್ಚ್ 23, 1931 ಗೆ ಮುಂಚಿತವಾಗಿ ನೇಣಿಗೆ ಹಾಕಲಾಯಿತು ಇದು ಇತಿಹಾಸ. ಆದರೆ ಭಗತ್ ಸಿಂಗ್ ಹೇಳುತ್ತಿದ್ದರು ವ್ಯಕ್ತಿ ಸಾಯಬಹುದು ಆದರೆ ವ್ಯಕ್ತಿ ವಿಚಾರಗಳ್ಳಲ್ಲ ಎಂಬ ಅವರ ಮಾತಿನಂತೆ ಅವರ ವಿಚಾರಗಳು ಇಂದಿಗೂ ಪ್ರಸ್ತುತವಿದೆ ಹಾಗಾಗಿ ಇಂದಿನ ಯುವಕರು ಅವರ ವಿಚಾರಗಳನ್ನು ಮೈಗೂಡಿಸಿಕೊಂಡು ಅವರ ಕನಸನ್ನ ನನಸು ಮಾಡಲಿ ಸಂಕಲ್ಪ ತೊಡಬೇಕಾಗಿದೆ” ಎಂದರು.ಜಿಲ್ಲಾ ಎ ಐ ಡಿ ವೈ ಓ ಯುವಜನ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಜಗದೀಶ್ ನೇಮಕಲ್ ಮಾತನಾಡಿ-  “ಭಗತ್ ಸಿಂಗ್ ರವರ ಕನಸಾದ ಸಮಾಜವಾದಿ ಭಾರತವನ್ನ ಕಟ್ಟಲು ನಾವೆಲ್ಲ ಸಂಕಲ್ಪ ತೊಡಬೇಕಾಗಿದೆ. ಜೈಲಿನಲ್ಲಿ ನೇಣುಕುಣಕ್ಕೆ ಹೋಗುವ ಮುನ್ನ ಜೈಲರ್ ಭಗತ್ ಸಿಂಗ್ ಅವರಿಗೆ ನಿಮ್ಮ ಕೊನೆಯ ಆಸೆ ಯಾರಾದರೂ ಸಂಬಂಧಿಕರನ್ನ ಭೇಟಿಯಾಗಬೇಕೆಂದು ಕೇಳಿದಾಗ ಅವರು ಹೇಳುತ್ತಾರೆ ನನಗೆ ಈಗಾಗಲೇ ಸಂಬಂಧಿಕರಿದ್ದಾರೆ ಈಗಾಗಲೇ ಸ್ವತಂತ್ರಕ್ಕಾಗಿ ಮಡಿದು ಜೀವ ಬಲದಾನ ಮಾಡಿದ್ದಾರೆ ಅವರು ನನ್ನ ಮೊದಲನೇ ರಕ್ತ ಸಂಬಂಧಕರು ಎರಡನೇದಾಗಿ ಈಗ ನನ್ನೊಟ್ಟಿಗೆ ರಾಜಕೀಯ ಕೈದಿಗಳಾಗಿ ಹೋರಾಟ ನಿರತರಾಗಿದ್ದಾರೆ ಜೀವ ಕೊಡಲು ಮುಂದಿದ್ದಾರೆ ಅವರು ನನ್ನ ಎರಡನೇ ಸಂಬಂಧಿಕರು ಇನ್ನೇನು ಕೆಲವೇ ಕ್ಷಣಗಳಲ್ಲಿ ನನ್ನ ಪ್ರಾಣಪಕ್ಷಿ ಹಾರಿಹೋಗುತ್ತದೆ ನಾನು ಸತ್ತ ನಂತರವೂ ಈ ದೇಶದಲ್ಲಿ ನಡೆಯುವ ಅನ್ಯಾಯ ಅಸತ್ಯಗಳ ವಿರುದ್ಧ ಯಾರು ಧ್ವನಿ ಎತ್ತುತ್ತಾರೋ ಅವರೇ ನನ್ನ ನಿಜವಾದ ಮೂರನೇ ಸಂಬಂಧಿಕರು ಎಂದು ಉತ್ತರಿಸುತ್ತಾರೆ. ಸಾಯುವ ಕೊನೆ ಉಸಿರಿರುವರೆಗೂ ಅವರಲ್ಲಿ ಓದುವ, ಜ್ಞಾನವನ್ನು ಪಡೆದುಕೊಳ್ಳುವ ಹಂಬಲ. ಕೊನೆಗೆ ಅವರು ಓದಿದ್ದು ರಷ್ಯಾದ ಸಮಾಜವಾದಿ ಶಿಲ್ಪಿ ಲೆನಿನ್ ಅವರ ಪುಸ್ತಕವನ್ನು. ಹಾಗಾಗಿ ಸ್ನೇಹಿತರೆ ಇಂತಹ ಅದನ್ಯ ಚೇತನಗಳ ವಿಚಾರ ನಮ್ಮೊಂದಿಗೆ ಇದೆ ಆದರೆ ಇಂದಿನ ಪ್ರಸಕ್ತ ಸಮಾಜದಲ್ಲಿ ಅಂತಹ ವಿಚಾರಗಳನ್ನ ನಮ್ಮಿಂದ ದೂರ ಮಾಡಿ ನಮ್ಮನ್ನ ಬೇರೆಲ್ಲದವರಂತೆ ಮಾಡುತ್ತಿದ್ದಾರೆ ಹಾಗಾಗಿ ನಾವು ಆ ಬೇರಿನ ಕೊಂಡಿಯನ್ನು ಕಳುಹಿಸಿಕೊಳ್ಳದೆ ಅವರ ಉನ್ನತ ವಿಚಾರಗಳನ್ನ ಸದಾ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾ ಈ ದೇಶದಲ್ಲಿರುವ ಬಂಡವಾಳಶಾಹಿ ವ್ಯವಸ್ಥೆಯ ಲಕ್ಷಣಗಳಾದ ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರ, ಮಹಿಳೆಯರು ಮೇಲೆ ಆಗ್ತಿರ್ತಕಂತ ದೌರ್ಜನ್ಯ ಅತ್ಯಾಚಾರಗಳು, ರೈತರ ಸಮಸ್ಯೆಗಳು, ಕಾರ್ಮಿಕರ ಸಮಸ್ಯೆಗಳ ವಿರುದ್ಧ ಒಗ್ಗಟ್ಟಾಗಿ ಹೋರಾಟಗಳನ್ನ ಬೆಳೆಸುವಂತಹ ಅವಶ್ಯಕತೆ ಇದೆ ಹಾಗಾಗಿ ಯುವಕರು ಇಂಥ ವಿಚಾರಗಳ ಬಗ್ಗೆ ಹೆಚ್ಚು ಹೆಚ್ಚು ಚರ್ಚೆ- ಸಂವಾದಗಳನ್ನು ಮಾಡುವ ಮೂಲಕ ಸಮಾಜದ ಸಮಸ್ಯೆಗಳನ್ನು ಗ್ರಹಿಸಿ ಅರ್ಥ ಮಾಡಿಕೊಂಡು ಮುಂದೆ ಬರಬೇಕಾಗಿದೆ ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಸದಸ್ಯರಾದ ಪಾಲಾಕ್ಷ, ನರ್ಸಿಂಗ್ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಾದ ಪ್ರಸನ್ನ, ಮಂಜುನಾಥ್ ಹಾಗೂ ನೂರಾರು ವಿಧ್ಯಾರ್ಥಿಗಳು ಭಾಗವಹಿಸಿದ್ದರು.
