ಜೈವಿಕ ತ್ಯಾಜ್ಯಗಳನ್ನು ಸರಿಯಾಗಿ ವಿಲೇವಾರಿಗೆ ಡಿಸಿ ಸೂಚನೆ
ಕೋಲಾರ, ಸೆ,೧೯-ಪರಿಸರದಲ್ಲಿ ಅನೇಕ ಮಾಲಿನ್ಯಗಳು ಸಂಭವಿಸುತ್ತಿವೆ. ಮಾಲಿನ್ಯಗಳಿಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಮುಂದಿನ ಪೀಳಿಗೆಗೆ ಮಾರಣಾಂತಕವಾಗುತ್ತದೆ ಹಾಗೂ ಜೈವಿಕ ತ್ಯಾಜ್ಯಗಳಿಂದ ಜನರಿಗೆ ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಗಟ್ಟಬೇಕು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ತಿಳಿಸಿದರು.
ಜಿಲ್ಲಾ ಆಡಳಿತ ಕಛೇರಿ ಆಡಿಟೋರಿಯಂನಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಜೀವ ವೈದ್ಯಕೀಯ ತ್ಯಾಜ್ಯ ವಸ್ತುಗಳ ನಿಯಮಗಳ ಕುರಿತು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಜೈವಿಕ ತ್ಯಾಜ್ಯಗಳಿಂದ ಸಾಂಕ್ರಾಮಿಕ ರೋಗಗಳು ಹರಡುವುದು ಹಾಗೂ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳು ಬೀರುತ್ತಿವೆ ಎಂದರು. ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರಗಳು ಜೊತೆಗೂಡಿ ಹಲವು ನೀತಿಗಳನ್ನು ಜಾರಿಗೊಳಿಸಿದ್ದಾರೆ. ಕರ್ನಾಟಕ ಸರ್ಕಾರವು ಕೆ.ಎಂ.ಎಫ್ ಕಾಯ್ದೆಯ ಮೂಲಕ ಅನೇಕ ಪಾಲಿಸಿಗಳು, ವಿಧಾನಗಳು ಮತ್ತು ತರಬೇತಿಗಳನ್ನು ನೀಡುತ್ತಿದ್ದು, ಅತೀ ಸೂಕ್ಷ್ಮತೆಯಿಂದ ಈ ಕಾರ್ಯವನ್ನು ನಿರ್ವಹಣೆ ಮಾಡಬೇಕು ಎಂದು ಹೇಳಿದರು.
ನಕಲಿ ವೈದ್ಯರು, ಖಾಸಗಿ ಆಸ್ಪತ್ರೆಗಳಿಂದ ಹಾಗೂ ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ತರಬೇತಿ ನೀಡಿದ ಜೈವಿಕ ತ್ಯಾಜ್ಯಗಳನ್ನು ನಗರಸಭೆ ಕಸದಲ್ಲಿ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ತ್ಯಾಜ್ಯಗಳನ್ನು ಬಿಸಾಡುತ್ತಿದ್ದರು. ಅಂತವರ ವಿರುದ್ಧ ಹಾಗೂ ಸುಮಾರು ೧೦೦೫ ನಕಲಿ ವೈದ್ಯರ ಮೇಲೆ ಪ್ರಕರಣಗಳನ್ನು ದಾಖಲಿಸಿದ್ದೇವೆ ಎಂದರು. ವೈದ್ಯರು ನೈತಿಕ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಸಾಂಕ್ರಾಮಿಕ ರೋಗಗಳನ್ನು ಹೇಗೆ ತಡೆಗಟ್ಟಬೇಕು ಎಂಬ ತರಬೇತಿಗಳನ್ನು ಅತೀ ಹೆಚ್ಚು ಪಡೆದುಕೊಂಡು ಸಾಂಕ್ರಾಮಿಕ ರೋಗಗಳು ಹೆಚ್ಚು ಹರಡದಂತೆ ನೋಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸಿ.ಪಿ.ಸಿ.ಬಿ ಪ್ರಾದೇಶಿಕ ನಿರ್ದೇಶಕ ಜೆ.ಚಂದ್ರಬಾಬು, ಪಶುಸಂಗೋಪನ ಇಲಾಖೆಯ ಉಪ ನಿರ್ದೇಶಕ ಗಂಗಾ ತುಲಸಿ ರಾಮಯ್ಯ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಚಂದನ್ ಕುಮಾರ್, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ನಾರಾಯಣಸ್ವಾಮಿ. ಎಂ., ಪರಿಸರ ಅಧಿಕಾರಿ ಡಾ. ರಾಜು.ಕೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.