ಸಮಾಜಮುಖಿಗಳಾಗಿ ಸೇವೆಗೆ ಮುಂದಾಗಿ
ಕೋಲಾರ.ಸೆ೧೯:ಚಿತ್ರನಟರ ಅಭಿಮಾನಿಗಳು ಅಂಧಾಭಿಮಾನಿಗಳಾಗದೆ ಸಮಾಜ ಮುಖಿ ಚಿಂತನೆಗಳನ್ನು ಮೈಗೂಡಿಸಿಕೊಂಡು ನಿರಂತರ ಸಮಾಜ ಸೇವೆ ಮಾಡುವ ಮೂಲಕ ಮೆಚ್ಚಿನ ಚಿತ್ರನಟನ ಹೆಸರನ್ನು ಚಿರಸ್ಥಾಯಿಗೊಳಿಸಬೇಕೆಂದು ಮನ್ವಂತರ ಸೇವಾ ಟ್ರಸ್ಟ್ ಅಧ್ಯಕ್ಷ ಪಾ.ಶ್ರೀ.ಅನಂತರಾಮ್ ತಿಳಿಸಿದರು.
ನಗರದ ಅಂತರಗಂಗೆ ಬೆಟ್ಟದ ತಪ್ಪಲಿನಲ್ಲಿರುವ ಅಂತರಗಂಗೆ ವಿಕಲಚೇತನರ ವಿದ್ಯಾಸಂಸ್ಥೆಯಲ್ಲಿ ಬುಧವಾರ ಕೋಲಾರದ ವಿಷ್ಣುವರ್ಧನ್ ಅಭಿಮಾನಿಗಳು ಆಯೋಜಿಸಿದ್ದ ಡಾ.ವಿಷ್ಣುವರ್ಧನ್‌ರ ೯೪ ನೇ ಜನ್ಮಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ವಿಷ್ಣುವರ್ಧನ್ ಕೇವಲ ಕಲಾವಿದರಾಗಿ ಸೇವೆ ಸಲ್ಲಿಸುವುದು ಮಾತ್ರವಲ್ಲದೆ ಉತ್ತಮ ಸಮಾಜ ಸೇವೆಯ ಮೂಲಕವೂ ಕನ್ನಡಿಗರ ಮನಸ್ಸಿನಲ್ಲಿ ಸ್ಥಾನ ಸಂಪಾದಿಸಿಕೊಂಡಿದ್ದಾರೆ. ವಿಷ್ಣುವರ್ಧನ್‌ರ ಅಭಿಮಾನಿಗಳು ಕೋಲಾರ ಜಿಲ್ಲಾ ಮಟ್ಟದಲ್ಲಿ ತಂಡವನ್ನು ರಚಿಸಿಕೊಂಡು ನಿರಂತರವಾಗಿ ಸಮಾಜ ಸೇವೆ ಮಾಡಲು ಮುಂದಾಗಬೇಕೆಂದು ಸಲಹೆ ನೀಡಿದರು.
ಕೋಲಾರದ ವಿಷ್ಣುವರ್ಧನ್‌ರ ಅಪ್ಪಟ ಅಭಿಮಾನಿಗಳಾದ ಪಿಸಿ ಬಡಾವಣೆಯ ಕೆ.ಗಣೇಶ್ ಮತ್ತು ಮಲ್ಲಿಕಾಪ್ರಕಾಶ್ ತಂಡವು ಪ್ರತಿ ವರ್ಷವೂ ಅಂತರಗಂಗೆ ವಿಕಲಚೇತನ ಹಾಗೂ ಬುದ್ದಿಮಾಂದ್ಯರ ಶಾಲೆಯಲ್ಲಿ ಸೇವಾ ಕಾರ್ಯದ ಜೊತೆಗೆ ವಿಷ್ಣುವರ್ಧನ್‌ರ ಹುಟ್ಟುಹಬ್ಬ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.
ವಿಷ್ಣುವರ್ಧನ್ ಅಭಿಮಾನಿಗಳಾದ ಕೆ.ಗಣೇಶ್ ಮತ್ತು ಮಲ್ಲಿಕಾಪ್ರಕಾಶ್ ಮಾತನಾಡಿ, ಸರಕಾರವು ಈ ವರ್ಷವೂ ವಿಷ್ಣುವರ್ಧನ್‌ರ ಸ್ಮಾರಕವನ್ನು ಸರಿಯಾಗಿ ಗುರುತಿಸದ ಕಾರಣದಿಂದ ಜನ್ಮದಿನವನ್ನು ಬೆಂಗಳೂರಿನಲ್ಲಿ ಅಥವಾ ಮೈಸೂರಿನಲ್ಲಿ ಮಾಡಬೇಕಾ ಎಂಬ ಜಿeಸೆ ಉಂಟಾಗಿದೆ, ಸರಕಾರ ಕೂಡಲೇ ಈ ಗೊಂದಲ ಬಗೆಹರಿಸಿ ವಿಷ್ಣುವರ್ಧನ್‌ರ ಸ್ಮಾರಕವನ್ನು ಗುರುತಿಸಬೇಕೆಂದರು.
ಅಧ್ಯಕ್ಷತೆವಹಿಸಿದ್ದ ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ವಿಷ್ಣುವರ್ಧನ್ ಹೆಸರಿನಲ್ಲಿ ಕೋಲಾರ ಜಿಲ್ಲಾ ಕೇಂದ್ರದ ಸಾರ್ವಜನಿಕ ಸ್ಥಳ ಅಥವಾ ರಸ್ತೆಗೆ ಅವರ ಹೆಸರಿಡಬೇಕು, ಅವರ ಪ್ರತಿಮೆ ಸ್ಥಾಪಿಸಬೇಕೆಂಬ ಹಲವಾರು ವರ್ಷಗಳ ಬೇಡಿಕೆಯನ್ನು ಈಡೇರಿಸಿಕೊಳ್ಳಲು ಅಭಿಮಾನಿಗಳು ಮುಂದಾಗ ಬೇಕೆಂದರು.
ವಿಷ್ಣುವರ್ಧನ್ ಭಾವಚಿತ್ರಕ್ಕೆ ಮೃತ್ಯುಂಜಯ ಶಂಕರ್ ಪೂಜೆ ಸಲ್ಲಿಸಿದರು. ವೇದಿಕೆಯಲ್ಲಿ ಕಿಲಾರಿಪೇಟೆ ಮುನಿವೆಂಕಟ ಯಾದವ್, ಯೋಧ ದಿಲೀಪ್, ಧನಂಜಯ್, ವಿನಯ್ , ಸರ್ವೇಶ್, ಗಂಗರಾಜು, ಸಂತೋಷ, ರಜ್, ಶರತ್ ಹಾಗೂ ಕೋಲಾರ ವ್ಯಾಯಾಮ ಶಾಲೆಯ ಕ್ರೀಡಾಪಟುಗಳಾದ ನೆರ್ನಹಳ್ಳಿ ಆನಂದ್, ಕೆಇಬಿ ಮುನಿವೆಂಕಟಪ್ಪರ ಮಕ್ಕಳು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಅಂತರಗಂಗೆ ಶಾಲಾ ಮಕ್ಕಳಿಗೆ ವಿಷ್ಣುವರ್ಧನ್ ನೆನಪಿನಲ್ಲಿ ಬೆಳಗಿನ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಸೇಬು, ಮೋಸಂಬಿ, ಬ್ರೆಡ್, ಬಿಸ್ಕೆಟ್ ಹಾಗೂ ಬಾಳೇಹಣ್ಣನ್ನು ವಿತರಿಸಲಾಯಿತು.
ಅಂತರಗಂಗೆ ವಿಕಲಚೇತನರ ಹಾಗೂ ಬುದ್ದಿಮಾಂದ್ಯರ ಶಾಲೆಯ ಕೆ.ಎಸ್.ಶಂಕರ್ ಸ್ವಾಗತಿಸಿ, ನಿರೂಪಿಸಿದರು. ವಿದ್ಯಾರ್ಥಿನಿ ನಾಗವೇಣಿ ಪ್ರಾರ್ಥಿಸಿದರು.