ವಾಲ್ಮೀಕಿ ಭವನ ಜಾಗ ಒತ್ತುವರಿ ತೆರವಿಗೆ ಹೋರಾಟ
ಕೋಲಾರ,ಸೆ,೧೯- ನಗರದ ಶ್ರೀನಿವಾಸಪುರ ಗೇಟ್ ಸಮೀಪ ನೊತನವಾಗಿ ನಿರ್ಮಾಣವಾಗುತ್ತಿರುವ ವಾಲ್ಮೀಕಿ ಭವನಕ್ಕೆ ಮಂಜೂರಾಗಿದ್ದ ೩೧ ಗುಂಟೆ ಜಾಗದಲ್ಲಿ ೨.೫ ಗುಂಟೆ ಜಾಗವನ್ನು ಪಕ್ಕದ ಖಾಸಗಿಯವರ ಕಲ್ಯಾಣ ಮಂಟಪಕ್ಕೆ ಒತ್ತುವರಿ ಮಾಡಿ ಕಾಂಪೌಂಡ್ ನಿರ್ಮಾಣ ಮಾಡಲಾಗಿದೆ ಈ ಸಂಬಂಧವಾಗಿ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದ್ದು ವಿಚಾರಣೆ ಹಂತದಲ್ಲಿದ್ದರೂ ಸಹ ರಾಜಕಾರಣಿಗಳ ಒತ್ತಡ ಹಾಗೂ ವಾಲ್ಮೀಕಿ ಸಮುದಾಯದ ಕೆಲವು ಮುಖಂಡರು ರಾಜಕಾರಣಕ್ಕೆ ಪ್ರೇರಿತರಾಗಿ ಅವರೊಂದಿಗೆ ಶಾಮೀಲಾಗಿ ಕಟ್ಟಡವನ್ನು ನಿರ್ಮಿಸುತ್ತಿದ್ದಾರೆ ಎಂದು ವಾಲ್ಮೀಕಿ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ನರಸಿಂಹಯ್ಯ ಆರೋಪಿಸಿದರು,
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಾ ಈ ವಿವಾದವು ಇಂದಿನದಲ್ಲ ಕಳೆದ ೬ ವರ್ಷಗಳದ್ದಾಗಿದೆ. ಈ ಸಂಬಂಧವಾಗಿ ಹಿಂದಿನ ಜಿಲ್ಲಾಧಿಕಾರಿಗಳಾಗಿದ್ದ ಮಂಜುನಾಥ್ ಅವರು ಸರ್ವೆ ಮಾಡಿಸಿ ಸ್ಥಳ ಪರಿಶೀಲಿಸಿದಾಗ ಕಲ್ಯಾಣ ಮಂಟಪದ ನಿರ್ಮಿಸುತ್ತಿರುವರು ವಾಲ್ಮೀಕಿ ಭವನದ ಜಾಗದಲ್ಲಿ ೨,೫ ಗುಂಟೆ ಜಾಗವನ್ನು ಒತ್ತುವರಿ ಮಾಡಿ ಕಾಂಪೌಂಡ್ ನಿರ್ಮಾಣಕ್ಕೆ ಮುಂದಾಗಿರುವುದು ಧೃಡಪಟ್ಟ ಹಿನ್ನಲೆಯಲ್ಲಿ ಕಟ್ಟಡ ನಿರ್ಮಾಣದ ಕೆಲಸವನ್ನು ಸ್ಥಗಿತಗೊಳಿಸಲು ಅದೇಶಿಸಿ ನೋಟಿಸ್ ಜಾರಿ ಮಾಡಿದರೂ ಸಹ ಯಾವೂದೇ ರೀತಿ ಸ್ಪಂದಿಸದಿದ್ದಾಗ ಜಿಲ್ಲಾಧಿಕಾರಿಗಳ ತಂಡವು ಅಗಮಿಸಿ ಒತ್ತುವರಿ ತೆರವು ಮಾಡಿಸಲು ಮುಂದಾಗಿದ್ದರು ಎಂದರು.
ಈ ಸಂದರ್ಭದಲ್ಲಿ ಕಲ್ಯಾಣ ಮಂಟಪದ ಮಾಲೀಕರಾದ ಕುಡಾ ಮತ್ತು ನಗರಸಭಾ ಮಾಜಿ ಅಧ್ಯಕ್ಷರಾದ ಅಥಾವುಲ್ಲಾ ಅವರು ಜಿಲ್ಲಾಧಿಕಾರಿಗಳ ಬಳಿ ನಾವೇ ತೆರುವು ಮಾಡಿಸುತ್ತೇವೆ ನಮಗೆ ಒಂದುವಾರ ಕಾಲವಕಾಶ ಬೇಕೆಂದು ಮನವಿ ಮಾಡಿ ಕೊಂಡರು. ಜಿಲ್ಲಾಧಿಕಾರಿಗಳು ಮನವಿಗೆ ಸಂದಿಸಿ ಒಂದು ವಾರಗಳ ಕಾಲವಕಾಶ ನೀಡಿದರು. ಅದರೆ ಅಥಾವುಲ್ಲಾ ಅವರು ನ್ಯಾಯಾಲಯದಿಂದ ತೆರವು ಕಾರ್ಯಚರಣೆ ನಡೆಸದಂತೆ ತಡೆಯಾಜ್ಞೆಯನ್ನು ತಂದರು, ತಡೆಯಾಜ್ಞೆಯನ್ನು ತೆರವುಗೊಳಿಸಲು ಒಕ್ಕೂಟವು ಪ್ರಯತ್ನಿಸುತ್ತಿತ್ತು ಎಂದರು.
ಈ ಮಧ್ಯೆ ಕೆಲವು ಬೆಳವಣಿಗೆಗಳು ನಡೆದು ಒಕ್ಕೂಟದ ಕೆಲವು ಪ್ರಮುಖ ಮುಖಂಡರು ಕಲ್ಯಾಣ ಮಂಟಪದ ಮಾಲೀಕರ ಒತ್ತುವರಿಯನ್ನು ಪ್ರಬಲವಾಗಿ ವಿರೋಧಿಸಿದವರೇ ರಾಜಕೀಯದ ಒತ್ತಡಗಳಿಗೆ ಮಣಿದು ಶಾಮಿಲಾಗಿ ಅವರೇ ಕಟ್ಟಡವನ್ನು ನಿರ್ಮಿಸಿ ಕೊಡಲು ಮುಂದಾಗಿದ್ದಾರೆ. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳಾದ ಅಕ್ರಂಪಾಷ ಅವರ ಗಮನಕ್ಕೆ ತರಲು ಪ್ರಯತ್ನಿಸಿದಾಗ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಬ್ಯೂಸಿಯಾಗಿದ್ದರು. ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತರಲಾಯಿತು ಎಂದರು.
ರಾಜ್ಯ ಮುಖಂಡ ಆನಂದ್ ಮಾತನಾಡಿದರು. ಒಕ್ಕೂಟದ ಪದಾಧಿಕಾರಿಗಳಾದ ರೋಣೂರು ಕೃಷ್ಣಪ್ಪ, ಮುನಿಯಪ್ಪ, ಶ್ಯಾಮ್ ನಾಯಕ್, ನಾಗರಾಜ್,ಗಿರೀಶ್, ಅಶ್ವಥ್‌ಪ್ಪ, ಇತರರು ಉಪಸ್ಥಿತರಿದ್ದರು.