ಬಂಡಾಯ ಶಮನಕ್ಕೆ ಕ್ರಮ: ಜೋಶಿ
ಹುಬ್ಬಳ್ಳಿ, ಮಾ 28: ಪ್ರಸಕ್ತ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯಲ್ಲಿ ಕೆಲ ಕ್ಷೇತ್ರಗಳಲ್ಲಿ ಬಂಡಾಯ ಕಾಣಿಸಿಕೊಂಡಿದ್ದರೂ ಅದನ್ನು ಸರಿಪಡಿಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ದಾವಣಗೆರೆ ಕ್ಷೇತ್ರದಲ್ಲಿ ಈ ಕುರಿತು ಮಾತುಕತೆ ನಡೆಸಲಾಗಿದೆ. ಇನ್ನು ಉಳಿದಿರುವ ರಾಯಚೂರು ಕ್ಷೇತ್ರದಲ್ಲೂ ಅದನ್ನು ಸರಿಪಡಿಸಲಾಗುತ್ತದೆ ಎಂದು ತಿಳಿಸಿದರು.
ರಾಜ್ಯಾದ್ಯಂತ ಈ ಬಾರಿ ಬಿಜೆಪಿ 28 ಸ್ಥಾನಗಳನ್ನೂ ಗೆಲ್ಲಲಿದೆ. ಕಾಂಗ್ರೆಸ್‍ನವರು ಹತಾಶರಾಗಿ ಪ್ರಧಾನಿ ಮೋದಿಯವರ ವಿರುದ್ಧ ಕ್ಷುಲ್ಲಕ ಭಾಷೆ ಬಳಸಲು ಆರಂಭಿಸಿದ್ದಾರೆ. ಅದುವೇ ಮೋದಿಯವರಿಗೆ ರಕ್ಷಾಕವಚವಾಗಲಿದೆ ಎಂದು ನುಡಿದರು.
ಲಿಂಗಾಯತ ಸಮಾಜ ಸೇರಿ ಇತರ ಸಮಾಜವನ್ನು ಜೋಶಿ ಅವರು ಕಡೆಗಣಿಸಿದ್ದು, ಅವರನ್ನು ಕ್ಷೇತ್ರದಿಂದ ಬದಲಾವಣೆ ಮಾಡಬೇಕು ಎಂಬ ಶಿರಹಟ್ಟಿಯ ದಿಂಗಾಲೇಶ್ವರ ಸ್ವಾಮಿಗಳ ಆರೋಪ ಕುರಿತಾದ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತ, ತಾವು ಲೋಕಸಭಾ ಸದಸ್ಯರಾದ ಮೇಲೆ ಕ್ಷೇತ್ರದಲ್ಲಿ ಏಳು ಜನ ಲಿಂಗಾಯಿತರಿಗೆ ಟಿಕೆಟ್ ನೀಡಲಾಗಿದೆ. ಪಕ್ಷದಲ್ಲಿ ಜಾತಿ ಮತಭೇದವಿಲ್ಲ. ಎಲ್ಲರಿಗೂ ಅವಕಾಶ ಕೊಟ್ಟಿದ್ದೇವೆ ಎಂದು ಅವರು ಸ್ಪಷ್ಟವಾಗಿ ಹೇಳಿದರು.
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳುವಳಿಕೆಯಾಗಿದ್ದರೆ ಪರಿಹರಿಸುತ್ತೇವೆ. ಏನಾದರೂ ತಪ್ಪು ಮಾಡಿದ್ದರೆ ನೇರವಾಗಿ ಕ್ಷಮೆ ಕೇಳುತ್ತೇವೆ. ಸ್ವಾಮಿಗಳು ಏನೇ ಹೇಳಿದರೂ ನನಗೆ ಆಶೀರ್ವಾದವಿದ್ದಂತೆ ಎಂದು ಅವರು ಹೇಳಿದರು.
ಶಿರಹಟ್ಟಿ ಪೀಠ ನನಗೆ ಸದಾ ಆಶೀರ್ವಾದ ಮಾಡಿದೆ. ನಾನು ಹೆಚ್ಚಿಗೆ ಮಾತನಾಡುವುದಿಲ್ಲ. ಸ್ವಾಮೀಜಿ ಸಮಯ ಕೊಟ್ಟರೆ ಅವರೊಂದಿಗೆ ಮಾತನಾಡಲು ಸಿದ್ಧನಿದ್ಧೇನೆ ಎಂದವರು ತಿಳಿಸಿದರು.