ಜಾತ್ರಾ ಮಹೋತ್ಸವದಲ್ಲಿ‌ ಪ್ರಾಣಿಬಲಿ ತಡೆಗೆ ಹಿರೇಹಾಲಿವಾಣ ಗ್ರಾಮಸ್ಥರ ಮನವಿ

ಸಂಜೆವಾಣಿ ವಾರ್ತೆ
ದಾವಣಗೆರೆ.ಮಾ.೨೮: ಹರಿಹರ ತಾಲೂಕಿನ ಹಿರೇಹಾಲಿವಾಣ ಗ್ರಾಮದ ಶ್ರೀ ಏಳೂರು ಕರಿಯಮ್ಮ ದೇವಿಯ ಜಾತ್ರಾ ಮಹೋತ್ಸವದಲ್ಲಿ ಪ್ರಾಣಿಬಲಿ ಆಗದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮದ ಮುಖಂಡ ಡಿ.ಕೆ. ಮಲ್ಲೇಶಪ್ಪ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಪ್ರತಿ 15 ವರ್ಷಕ್ಕೊಮ್ಮೆ ದೇವಿಯ ಜಾತ್ರೆ ನಡೆಯುತ್ತದೆ. ಈಗಾಗಲೇ ಮಾ. 18 ರಿಂದ 22 ರ ವರೆಗೆ ನಡೆದಿದ್ದ ಸಂದರ್ಭದಲ್ಲಿ ಯಾವುದೇ ಪ್ರಾಣಿ‌ಬಲಿಗೆ ಅವಕಾಶ ನೀಡಿರಲಿಲ್ಲ ಎಂದು ತಿಳಿಸಿದರು.ಈಗ ಗ್ರಾಮದ ಕೆಲವರು ಮತ್ತೆ ಏ. 1 ರಿಂದ  5 ರವರೆಗೆ ಜಾತ್ರೆ ನಡೆಸಲು ಮುಂದಾಗಿದ್ದಾರೆ. ಜಾತ್ರೆಯಲ್ಲಿ ಕೋಣ ಬಲಿ ನೀಡಿಯೇ ತೀರುವುದಾಗಿ ಗ್ರಾಮಸ್ಥರಲ್ಲಿ ಹೇಳಿಕೊಂಡು ಓಡಾಡುತ್ತಿದ್ದಾರೆ. ಕೆಲವಾರು ಕಡೆ ಕೋಣಗಳನ್ನು ತಂದಿಟ್ಟಿದ್ದಾರೆ. ಜಾತ್ರಾ ಮಹೋತ್ಸವಕ್ಕೆ ನಮ್ಮದು ಯಾರ ವಿರೋಧವೂ ಇಲ್ಲ. ಜಾತ್ರೆ ಮಾಡಲಿ. ಆದರೆ, ಕೋಣ, ಪ್ರಾಣಿಬಲಿ ಬೇಡ ಎನ್ನುವುದು ನಮ್ಮ ಮನವಿ ಎಂದು ತಿಳಿಸಿದರು.ಜಾತ್ರೆಯಲ್ಲಿ ನಡೆಯಬಹುದಾದ ಪ್ರಾಣಿ ಬಲಿಗೆ ಅವಕಾಶ ನೀಡಬಾರದು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ. ಜಿಲ್ಲಾ ಮತ್ತು ತಾಲೂಕು ಆಡಳಿತ, ಪೊಲೀಸ್ ಇಲಾಖೆಯವರು ಕೋಣಗಳ ವಶಕ್ಕೆ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಗ್ರಾಮದ ಟಿ. ತಿಪ್ಪೇಶಪ್ಪ, ಟಿ. ಸಂತೋಷ್, ಟಿ. ಸೋಮಪ್ಪ, ಎಂ.ಪಿ. ತಿಪ್ಪೇಶಪ್ಪ, ಹಳ್ಳೂರು ಚಂದ್ರಪ್ಪ ಇದ್ದರು.