ಕಡ್ಡಾಯ ಮತದಾನ ನಮ್ಮ ಹಕ್ಕು
ನರಗುಂದ,ಮಾ28 : ಮೇ-07 ರ ಮತದಾನದ ದಿನದಂದು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ನರಗುಂದ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣೆ ಅಧಿಕಾರಿಗಳು ಹಾಗೂ ನರಗುಂದ ತಹಶೀಲ್ದಾರ ಶ್ರೀಶೈಲ್ ತಳವಾರ ಹೇಳಿದರು.
ನರಗುಂದ ನಗರದಲ್ಲಿ ಗದಗ ಜಿಲ್ಲಾ ಮತ್ತು ನರಗುಂದ ತಾಲೂಕು ಚುನಾವಣೆ ಸ್ವೀಪ್ ಸಮಿತಿ, ವಿವಿದ್ಧೋದೇಶ ಪುನರ್ ವಸತಿ (ಒಖW) ಮತ್ತು ಗ್ರಾಮೀಣ ಪುನರ್ ವಸತಿ (ಗಿಖW) ಹಾಗೂ ತಾಲೂಕು ಪಂಚಾಯತ ನರಗುಂದ ವತಿಯಿಂದ ಹಮ್ಮಿಕೊಂಡಿದ್ದ ಸಾರ್ವಜನಿಕರಿಗೆ ಮತದಾನ ಜಾಗೃತಿ ಜಾಥಾದಲ್ಲಿ ಭಾಗವಹಿಸಿ ಮಾತನಾಡಿದರು.
ಲೋಕಸಭೆ ಚುನಾವಣೆಯಲ್ಲಿ ಎಲ್ಲ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು. ಮತದಾನ ನಮ್ಮ ಹಕ್ಕು ನಮ್ಮ ಇಷ್ಟದ ಅಭ್ಯರ್ಥಿಗೆ ಮತ ಚಲಾಯಿಸುವ ಕೆಲಸ ನಮ್ಮದಾಗಬೇಕು. ಈ ಭಾರಿ ಲೋಕಸಭಾ ಚುನಾವಣೆಯಲ್ಲಿ 100% ರಷ್ಟು ಮತದಾನ ಮಾಡಿದ್ರೆ ಮಾತ್ರ ಪ್ರಜಾಪ್ರಭುತ್ವದ ಪ್ರಾಮುಖ್ಯತೆಗೆ ಅರ್ಥ ಬರುತ್ತದೆ. ಹೆದರಿಕೆ ಬೆದರಿಕೆ ಅಂಜದೇ ಧೈರ್ಯವಾಗಿ ಮತವನ್ನು ಚಲಾಯಿಸಿ ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ಚಲಾಯಿಸಿ ಎಂದರು.
ಜಾಥಾದಲ್ಲಿ ಭಾಗವಹಿಸಿ ಮಾತನಾಡಿದ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ತಾಲೂಕು ಪಂಚಾಯತ ನರಗುಂದದ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸೋಮಶೇಖರ ಬಿರಾದರ ಅವರು, ಸಾರ್ವಜನಿಕರು ಮತದಾನದಿಂದ ತಪ್ಪಿಸಿಕೊಳ್ಳದೇ ತಮ್ಮ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಕಡ್ಡಾಯವಾಗಿ ಮತ ಚಲಾಯಿಸಿಬೇಕೆಂದು ತಿಳಿಸಿದರು.
ಕಡ್ಡಾಯ ಮತದಾನ ಜಾಗೃತಿ ಜಾಥಾದಲ್ಲಿ ಭಾಗವಹಿಸಿದ ಆಶಾಕಾರ್ಯಕರ್ತೆಯರು ಹಾಗೂ ಅಧಿಕಾರಿ ಸಿಬ್ಬಂದಿ ವರ್ಗದವರಿಗೆ ತಾಲೂಕು ಪಂಚಾಯತ ಮಾಹಿತಿ ಮತ್ತು ಶಿಕ್ಷಣ ಸಂಯೋಜಕರಾದ ಸುರೇಶ ಬಾಳಿಕಾಯಿ ಅವರು ಮತದಾನ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ನಗರದ ಪುರಸಭೆ ಮುಖ್ಯ ಕಚೇರಿಯಿಂದ ಮತದಾನ ಜಾಗೃತಿ ಜಾಥಾ ಆರಂಭವಾಗಿ ನಗರದ ಟಿ.ಎಂ.ಸಿ ರೋಡ, ಸರ್ವಜ್ಞ ಸರ್ಕಲ್, ಹುಬ್ಬಳ್ಳಿ-ಬಿಜಾಪುರ ಹೆದ್ದಾರಿ ಮೂಲಕ ಸಂಚರಿಸಿ ನಗರದ ಶಿವಾಜಿ ಸರ್ಕಲ್ ನಲ್ಲಿ ಮತದಾನ ಕುರಿತಾದ ವಿಶೇಷ ಘೋಷಣೆಗಳನ್ನು ಕೂಗುತ್ತಾ ಸಾರ್ವಜನಿಕರಲ್ಲಿ ಕಡ್ಡಾಯ ಮತದಾನ ಕುರಿತು ಜಾಗೃತಿ ಮೂಡಿಸಲಾಯಿತು.
ಕಡ್ಡಾಯ ಮತದಾನ ಜಾಗೃತಿ ಜಾಥಾದಲ್ಲಿ ಡಾ.ಹಂಪಣ್ಣ ಸಜ್ಜನ ಚುನಾವಣಾಧಿಕಾರಿಗಳು ನರಗುಂದ ವಿಧಾನಸಭಾ ಕ್ಷೇತ್ರ, ತಾಲೂಕು ಪಂಚಾಯತ ಸಿಬ್ಬಂದಿ ವರ್ಗ, ವಿವಿದ್ಧೋದೇಶ ಪುನರ್ ವಸತಿ ಮತ್ತು ಗ್ರಾಮೀಣ ಪುನರ್ ವಸತಿ ಕಾರ್ಯಕರ್ತರು ಹಾಜರಿದ್ದರು.