ಬರಿದಾದ ತುಂಗಾನದಿ ಒಡಲು: ನೀರಿಗಾಗಿ ಪರದಾಟ
ಲಕ್ಷ್ಮೇಶ್ವರ,ಮಾ.28: ಪಟ್ಟಣಕ್ಕೆ ನೀರು ಪೂರೈಸುವ ಹಾವೇರಿ ಜಿಲ್ಲೆಯ ಮೇವುಂಡಿಯಲ್ಲಿ ಹಾದುಹೋಗಿರುವ ತುಂಗಭದ್ರಾ ನದಿಯ ಒಡಲು ಬರಿದಾಗಿದ್ದು ಪಟ್ಟಣದ ಜನತೆ ಕುಡಿಯುವ ನೀರಿಗೆ ಪರದಾಡುವಂತಾಗದೆ.
ಹಾವೇರಿ ಜಿಲ್ಲೆಯ ಮೇವುಂಡಿ ಯಿಂದ ಲಕ್ಷ್ಮೇಶ್ವರಕ್ಕೆ 36ಞm ಅಂತರದಲ್ಲಿ ನೀರು ಪೂರೈಕೆಯಾಗುತ್ತಿದ್ದು ಭೀಕರ ಬರಗಾಲದ ಹಿನ್ನೆಲೆಯಲ್ಲಿ ನದಿ ಹಳ್ಳ ಕೊಳ್ಳಗಳು ಬತ್ತಿ ಹೋಗಿದ್ದು ಕುಡಿಯುವ ನೀರಿಗಾಗಿ ಜನ ಜಾನುವಾರು ಎಲ್ಲವೂ ಬಳಲುವಂತಾಗಿದೆ.
ತುಂಗಭದ್ರಾ ನದಿಗೆ ಭಾರತ ಹುಣ್ಣಿಮೆಯ ಹಿನ್ನೆಲೆಯಲ್ಲಿ ಮೈಲಾರದ ಜಾತ್ರೆಗಾಗಿ ಭದ್ರಾ ಜಲಾಶಯದಿಂದ ನೀರು ಹರಿಸಲಾಗಿತ್ತು ಇದನ್ನೇ ಉಪಯೋಗ ಮಾಡಿಕೊಂಡು ಪುರಸಭೆಯವರು ನೀರು ಸಂಗ್ರಹಣೆಗೆ ನದಿಯಲ್ಲಿ ವ್ಯವಸ್ಥೆ ಮಾಡಿದ್ದರು ಆದರೆ ಇದರಿಂದ ಲಕ್ಷ್ಮೇಶ್ವರ ಪಟ್ಟಣಕ್ಕೆ ಸ್ವಲ್ಪಮಟ್ಟಿನ ಕುಡಿಯುವ ನೀರಿನ ವ್ಯವಸ್ಥೆಯಾಗಿತ್ತು.
ಈಗ ವಿಪರೀತವಾದ ಬಿಸಿಲು ಧಗೆಯಿಂದಾಗಿ ತುಂಗಭದ್ರ ನದಿಯ ಒಡಲು ಖಾಲಿಯಾಗಿದ್ದು ಗಂಗಾ ಸ್ನಾನ ತುಂಗಾಪಾನ ಎಂಬ ಮಾತಿದ್ದರೂ ತುಂಗಾಪಾನ ಅಸಾಧ್ಯವಾಗಿದೆ.
ಜನರು ಬಳಕೆಯ ನೀರಿಗಾಗಿ ಪಟ್ಟಣದಲ್ಲಿರುವ ಕೊಳವೆಬಾವಿಗಳ ಮುಖಾಂತರ ಸಂಗ್ರಹಿಸುತ್ತಿದ್ದು ಆದರೆ ಕುಡಿಯುವ ನೀರಿನ ಬವಣೆ ದಿನದಿಂದ ದಿನಕ್ಕೆ ತಾರಕಕ್ಕೆ ಏರುತ್ತಿದೆ. ಜನರು ಕುಡಿಯುವ ನೀರಿಗಾಗಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.
ಈ ನಿಟ್ಟಿನಲ್ಲಿ ಜಿಲ್ಲಾ ಆಡಳಿತ ತಾಲೂಕ ಆಡಳಿತ ಭದ್ರಾ ಜಲಾಶಯದಿಂದ ನೀರು ಹರಿಸಲು ಪ್ರಯತ್ನಿಸುತ್ತಿದ್ದು ಈ ವಾರಾಂತ್ಯದಲ್ಲಿ ನೀರು ಬಿಡುವ ಸಾಧ್ಯತೆ ಇದೆ ಎನ್ನಲಾಗಿದೆ.
ನದಿಗೆ ಬಂದ ನೀರನ್ನು ಬೇರೆ ಉದ್ದೇಶಕ್ಕಾಗಿ ಬಳಸದಂತೆ ಮನವೊಲಿಸಲು ಪುರಸಭೆಯ ಮುಖ್ಯ ಅಧಿಕಾರಿ ಮಹೇಶ್ ಹಡಪದ್ ಮತ್ತು ತಾಲೂಕ ತಹಶೀಲ್ದಾರ್ ವಾಸದ ವಿ ಸ್ವಾಮಿಅವರು ನದಿ ಪಾತ್ರದ ಗ್ರಾಮಗಳಿಗೆ ತೆರಳಿ ಮನವರಿಕೆ ಮಾಡಿಕೊಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ಆದರೆ ಅಧಿಕಾರಿಗಳಿಗಿಂತಲೂ ಜಿಲ್ಲಾ ಉಸ್ತುವಾರಿ ಸಚಿವರು ಹೆಚ್ಚುಮುತುವರ್ಜಿ ವಹಿಸಿ ಭದ್ರಾ ಜಲಾಶಯದ ಮುಖ್ಯ ಇಂಜಿನಿಯರ್ ಗಳಿಗೆ ನೀರಾವರಿ ಸಚಿವರಿಗೆ ಕುಡಿಯುವ ನೀರಿನ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟು ಇನ್ನೆರಡು ತಿಂಗಳಿಗೆ ಆಗುವಷ್ಟು ನೀರನ್ನು ಹರಿಸಲು ಮುಂದಾಗಬೇಕು ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.