ನಮ್ಮ ಸರ್ಕಾರವನ್ನು ಇಡಿ ದೇಶ ನೋಡುತ್ತಿದೆ: ಸಚಿವ ಸಿ.ಆರ್.ಎಸ್
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮಾ.28: ನಮ್ಮ ಸರ್ಕಾರವನ್ನು ಇಡಿ ದೇಶ ನೋಡುತ್ತಿದೆ. ಮಾದರಿ ಸರ್ಕಾರವನ್ನು ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಕಂಡು ಇತರರು ಅಸೂಯೆಪಡುತ್ತಿದ್ದಾರೆ. ಇಂತಹ ಸರ್ಕಾರವನ್ನು ಬೆಂಬಲಿಸಬೇಕಾದದ್ದು ಜನರ ಕರ್ತವ್ಯ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ ಹೇಳಿದರು.
ಅವರು ಪಟ್ಟಣದ ಎಂ.ಕೆ.ಬೊಮ್ಮೇಗೌಡ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಮಂಡ್ಯ ಜಿಲ್ಲೆಯಲ್ಲಿ ಹಾಗೂ ಹಳೆ ಮೈಸೂರು ಒಕ್ಕಲಿಗರ ಟ್ರಂಪ್ ಕಾರ್ಡ್ ಪ್ಲೇ ಆಗುತ್ತಿದೆ. ಜೋಪಾನ. ಇವರ ಮರುಳು ಮಾತುಗಳನ್ನು ಕೇಳಬೇಡಿ. ನಾವು ಪ್ರತಿ ಕುಟುಂಬದ ರಕ್ಷಣೆಗೆ ಯೋಜನೆಗಳನ್ನು ರೂಪಿಸಿ ಯಶಸ್ವಿಯಾಗಿದ್ದೇವೆ. ನಮ್ಮ ಬೆನ್ನು ತಟ್ಟಿ ಪೆÇ್ರೀತ್ಸಾಹಿಸಬೇಕಾದದ್ದು ಜನರ ಕರ್ತವ್ಯವಲ್ಲವೆ? ಪ್ರತಿನತ್ಯ ಹೋದೆಡೆಯಲ್ಲೆಲ್ಲಾ ನಾವು ಕೂಡಾ ಹೇಳಿದ್ದನ್ನೆ ಹೇಳಿದರೆ ನಿಮಗೆ ಬೇಜಾರಾಗುತ್ತದೆ. ಯಾವ ಕಾರಣಕ್ಕೆ ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರಿಗೆ ಮತಹಾಕಬೇಕು ಎಂದು ತೀರ್ಮಾನ ಮಾಡಿ. ಇವರೊಬ್ಬರೆ ಒಕ್ಕಲಿಗ ನಾಯಕರಾ? ಡಿ.ಕೆ.ಶಿವಕುಮಾರ್ ಹಾಗೂ ನಾವು ಒಕ್ಕಲಿಗರಲ್ಲವೆ? ಅದೇನು ಮಂಡ್ಯದಲ್ಲಿ ಮಾತ್ರ ಒಕ್ಕಲಿಗ ಮಂತ್ರ ಜಪಿಸ್ತೀರಿ. ಬೇರೆ ಕಡೆ ಏಕಿಲ್ಲಾ? ನಿಮ್ಮ ಹುಸಿ ಪ್ರೀತಿ ಜನರಿಗೆ ಗೊತ್ತಾಗಿದೆ ಎಂದು ಚೆಲುವರಾಯಸ್ವಾಮಿ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಒಕ್ಕಲಿಗರ ವಿರೋಧಿಯಲ್ಲ. ಅವರು ಒಕ್ಕಲಿಗರ ವಿರೋಧಿಯಾಗಿದ್ದರೆ ಮೈಷುಗರ್ ಕಾರ್ಖಾನೆ ವ್ಯಾಪ್ತಿಯ ರೈತರಿಗಾಗಿ ಹೊಸ ಸಕ್ಕರೆ ಕಾರ್ಖಾನೆ ಸ್ಥಾಪಿಸಲು 500 ಕೋಟಿ ಅನುದಾನ ನೀಡುತ್ತಿರಲಿಲ್ಲ. ಮಂಡ್ಯದ ವಿ.ಸಿ ಫಾರಂನಲ್ಲಿ ಕೃಷಿ ವಿ.ವಿ.ಸ್ಥಾಪನೆಗೆ ಮುಂದಾಗುತ್ತಿರಲಿಲ್ಲ ಎಂದು ಚಲುವರಾಯಸ್ವಾಮಿ ಸಿದ್ದರಾಮಯ್ಯ ಅವರ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಬಣ್ಣಿಸಿದರು. ನಾವು ನಮ್ಮ ಖುಷಿಗಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿಲ್ಲ. ನಮ್ಮ ಗ್ಯಾರಂಟಿ ಯೋಜನೆಗಳಿಂದ ಇಂದು ರಾಜ್ಯದಲ್ಲಿ ತೀವ್ರ ಬರಗಾಲವಿದ್ದರೂ ಜನ ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ದೇಶದ ರೈತರ ಸಂಪೂರ್ಣ ಸಾಲ ಮನ್ನಾ, ಕೃಷಿ ಉತ್ಪನ್ನಗಳ ಮೇಲಿನ ಜಿ ಎಸ್.ಟಿ ರದ್ದು ಮತ್ತು ಪ್ರತೀ ಮಹಿಳೆಗೂ ವಾರ್ಷಿಕ 01 ಲಕ್ಷ ಹಣ ಅವರ ಖಾತೆಗೆ ಬರುವಂತೆ ಮಾಡಲಾಗುತ್ತದೆಯಲ್ಲದೆ ನಾವು ನೀಡಿರುವ ಗ್ಯಾರಂಟಿ ಯೋಜನೆಗಳಿಗೂ ಮತ್ತಷ್ಟು ಶಕ್ತಿ ಬಂದಂತಾಗುತ್ತದೆಂದರು.
ಮಾಜಿ ಪ್ರಧಾನಿ ದೇವೇಗೌಡರು ಮೇಕೆದಾಟು ಯೋಜನೆಯ ಬಗೆಗೆ ಮಾತನಾಡಿದಾಗ ಅವರ ಮುತ್ಸದ್ದಿತನವನ್ನು ನಾವೆಲ್ಲಾ ಕೊಂಡಾಡಿದ್ದೋ. ಆದರೆ ಈಗ ಚುನಾವಣೆಯಲ್ಲಿ ಹೇಳ್ತಾರೆ. ಎನ್‍ಡಿಎ ಗೆಲ್ಲಿಸಿದ್ರೆ ಮೇಕೆದಾಟು ಮಾಡಿಸ್ತೀವಿ ಅಂತಾ. ಇದು ಸರಿಯೆ? ಜನರ ಜೀವನಕ್ಕೆ ರಾಜಕೀಯವನ್ನು ಬೆರೆಸಬಹುದೆ? ನೀವು ಮಂಡ್ಯ ಜಿಲ್ಲೆ ಉಳಿಸ್ತೀವಿ ಅಂತಾಯಿದ್ದೀರಲ್ಲಾ. ಪಕ್ಷ ಉಳಿಸಲಿಕ್ಕೆ ಅಂತಾ ಹೇಳಬಹುದೆ? ಇದುವರೆಗೆ ಮಂಡ್ಯ ಜಿಲ್ಲೆಯ ಜನರು ಜೆಡಿಎಸ್ ಪಕ್ಷವನ್ನು ಉಳಿಸಿದ್ರಲ್ಲಾ. ಮಂಡ್ಯಕ್ಕೆ ಏನು ಕೊಟ್ರಿ? ಜನ ನಮಗೆ ಆಶೀರ್ವಾದ ಮಾಡಿದ್ದಾರೆ. ನಮಗೆ ಸಹಕರಿಸಿ. ನಾವು ಅಭಿವೃದ್ದಿಯನ್ನು ಮಾಡಿ ತೋರಿಸುತ್ತೇವೆ ಎಂದು ಚೆಲುವರಾಯಸ್ವಾಮಿ ಹೇಳಿದರು.
ಕೆ.ಆರ್.ಪೇಟೆ ತಾಲೂಕಿನ ಜನರು ಲೋಕಸಭೆ ಚುನಾವಣೆಯಲ್ಲಿ ಅತ್ಯಧಿಕ ಲೀಡ್‍ಕೊಡಿಸಿ. ಮುಂದಿನ 2028ಕ್ಕೆ ಕಾಂಗ್ರೆಸ್ ಶಾಸಕನನ್ನು ಗೆಲ್ಲಿಸಿಕೊಡುತ್ತೇವೆ. ಕಾಂಗ್ರೆಸ್ ಪಕ್ಷಕ್ಕೆ ಕೆ.ಆರ್.ಪೇಟೆಯಲ್ಲಿ ಅನ್ಯಾಯವಾಗಬಾರದು. ನಿಮ್ಮ ಐಚನಹಳ್ಳಿ ಏತ ನೀರಾವರಿ, ಗೂಡೆಹೊಸಹಳ್ಳಿ ಏತ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಲು ಸಹಕಾರ ನೀಡಿ. 250 ಕೋಟಿ ರೂಪಾಯಿಗಳ ಯೋಜನೆಗೆ 25 ಕೋಟಿ ನೀಡಿದ್ದಾರೆ. ಆದರೆ ನಾವು ಪೂರ್ಣಗೊಳಿಸುತ್ತೇವೆ. ನಮಗೆ ಶಕ್ತಿ ನೀಡಿ. ನೀವು ಶಕ್ತಿಯನ್ನು ನೀಡಿದರೆ ಖಂಡಿತಾ ನಿಮ್ಮ ಜೊತೆಯಲ್ಲಿ ನಾನಿರುತ್ತೇನೆ. ನೀವು ನಿಮ್ಮ ಲೀಡರ್‍ಗಳನ್ನು ಅವಲಂಬಿಸಬೇಡಿ. ನೀವೆ ಮನೆ ಮನೆಗೆ ನುಗ್ಗಿ. ನಮ್ಮ ಸರಕಾರದ ಸಾಧನೆಗಳನ್ನು ಹೇಳಿ. ನಿಮ್ಮ ವೇಗವನ್ನು ನೋಡಿ ನಾಯಕರುಗಳೆ ಹೆದರಬೇಕು. ದಯಮಾಡಿ ಕಾಂಗ್ರೆಸ್ ಅಭ್ಯರ್ಥಿ ಚಂದ್ರು ಅವರನ್ನು ಗೆಲ್ಲಿಸಿಕೊಡಿ ಎಂದು ಚೆಲುವರಾಸ್ವಾಮಿ ಮನವಿ ಮಾಡಿದರು.
ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸದೆ ಇರುವುದನ್ನು ನೋಡಿ ಬೇಸರಗೊಂಡ ಚೆಲುವರಾಯಸ್ವಾಮಿ ಇಡಿ ಮಂಡ್ಯ ಜಿಲ್ಲೆಯಲ್ಲಿರುವ ಕಾಂಗ್ರೆಸ್ ನಾಯಕರು ಕೆ.ಆರ್.ಪೇಟೆ ಒಂದರಲ್ಲಿಯೆ ಇದ್ದಾರೆ. ಆದರೆ ಏನು ಪ್ರಯೋಜನವಾಗುತ್ತಿಲ್ಲ. ಒಬ್ಬೊಬ್ಬ ನಾಯಕರೆನಿಸಿಕೊಂಡವರು 100 ಜನರನ್ನು ಕರೆದುಕೊಂಡು ಬಂದಿದ್ದರೆ ಸಾವಿರಾರು ಜನರು ಇರಬೇಕಾಗಿತ್ತು. ಆದ್ದರಿಂದ ಕಾರ್ಯಕರ್ತರು ಮುಖಂಡರನ್ನು ನಂಬದೆ ನಮ್ಮ ಪಕ್ಷದ ಅಭ್ಯರ್ಥಿ ಸ್ಟಾರ್ ಚಂದ್ರು ಅವರ ಪರವಾಗಿ ಕೆಲಸಮಾಡಿ. ಕನಿಷ್ಠ 20 ಸಾವಿರದಷ್ಟಾದರೂ ಮತಗಳ ಲೀಡ್‍ಕೊಡಿ ಎಂದು ಬೇಡಿಕೊಂಡರು.
ಸಭೆಯಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ ಮತನಾಡಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರನ್ನು ಮುಖ್ಯಮಂತ್ರಿ ಹಾಗೂ ಪ್ರಧಾನಿ ಮಾಡಿದ ಜಿಲ್ಲೆ ನಮ್ಮದು. ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಎರಡು ಸಲ ಮುಖ್ಯಮಂತ್ರಿ ಮಾಡಿದ ಜಿಲ್ಲೆ ನಮ್ಮದು. ಆದರೆ ಮಂಡ್ಯ ಜಿಲ್ಲೆಯ ಅಭಿವೃದ್ದಿಗೆ ನಿಮ್ಮ ಕೊಡುಗೆ ಏನು? ಎಂದು ಪ್ರಶ್ನಿಸಿದರು. ಮಂಡ್ಯ ಜಿಲ್ಲೆಯಲ್ಲಿ ಒಕ್ಕಲಿಗರ ನಾಯಕತ್ವ ಬೆಳೆಯದಂತೆ ಮಾಡಿದವರು ನೀವು. ಎಸ್.ಎಂ.ಕೃಷ್ಣ ಅವರನ್ನು 2ನೇ ಅವಧಿಗೆ ಮುಖ್ಯಮಂತ್ರಿಯಾಗದಂತೆ ತಡೆದವರು ಯಾರು ದೇವೇಗೌಡ್ರೆ? ಮುಖ್ಯಮಂತ್ರಿಯ ಕನಸನ್ನು ಕಾಣದೆ ಇದ್ದ ಧರ್ಮಸಿಂಗ್ ಅವರಿಗೆ ಮುಖ್ಯಮಂತ್ರಿ ಪಟ್ಟವನ್ನು ಕಟ್ಟಿದ್ರಲ್ಲಾ ನೀವು ಒಕ್ಕಲಿಗರೇನ್ರಿ? ಯಾಕ್ರೀ ಸ್ವಾಮಿ ನಮ್ಮ ಮಂಡ್ಯದ ಒಕ್ಕಲಿಗರ ಮರ?ಯಾದೆ ಕಳೀತೀರಿ? ಎಂದು ಛೇಡಿಸಿದ ಮರಿತಿಬ್ಬೇಗೌಡ ನಾನು ಕಾಂಗ್ರೆಸ್ ಪಕ್ಷದಿಂದ ಮೊದಲ ಬಾರಿಗೆ ಶಾಸಕನಾದೆ. ಆದರೆ ನನ್ನನ್ನು ನಿಮ್ಮ ಪಕ್ಷಕ್ಕೆ ಕರೆದುಕೊಂಡು ಹೋದ್ರಲ್ಲಾ? ನನ್ನ ಬೆಳವಣಿಗೆಗೆ ಏನು ಮಾಡಿದ್ರಿ ಸ್ವಾಮಿ? ಮಂಡ್ಯದ ಒಕ್ಕಲಿಗ ನಾಯಕರನ್ನು ಹೇಗೆ ನಡೆಸಿಕೊಂಡ್ರಿ? ಜ್ಞಾಪಕ ಇದೆಯಾ? ಕೆ.ಆರ್.ಪೇಟೆ ಕೃಷ್ಣ ಮನಸ್ಸು ಮಾಡದೆ ಇದ್ದಿದ್ದರೆ ನಿಮ್ಮ ಮಗ ಮುಖ್ಯಮಂತ್ರಿಯಾಗತಿದ್ರಾ? ಆದರೆ ಅವರಿಗೇನು ಮಾಡಿದ್ರಿ? ಚುನಾವಣೆಯಲ್ಲಿ ಅವರಿಗೆ ಟಿಕೆಟ್‍ನ್ನೇ ನೀಡ್ಲಿಲ್ಲ. ಅದೆ ರೀತಿ ರಾಜಕೀಯವಾಗಿ ನಿಮ್ಮ ಕುಟುಂಬಕ್ಕೆ ಶಕ್ತಿ ತುಂಬಿದ ಎಸ್.ಡಿ.ಜಯರಾಂ ಕುಟುಂಬ ಎಲ್ಲಿದೆ ಸ್ವಾಮಿ? ಮದ್ದೂರಿನ ಸಿದ್ದರಾಜು ಕುಟುಂಬಕ್ಕೇನು ಮಾಡಿದ್ರಿ? ಮಳವಳ್ಳಿ ನಾಗೇಗೌಡ್ರ ಕುಟುಂಬಕ್ಕೇನು ಮಾಡಿದ್ರಿ? ಇವೆಲ್ಲಾ ಜಿಲ್ಲೆಯ ಜನರ ಜ್ಞಾಪಕದಲ್ಲಿದೆ ಸ್ವಾಮಿ. ಮತ್ತೆ ನಿಮ್ಮ ಕುಟುಂಬದ ಪ್ರತಿಷ್ಠಾಪನೆಗೆ ಹೊರಟಿದ್ದೀರಾ? ಎಂದು ಕಿಡಿಕಾರಿದರಲ್ಲದೆ ದೇವೇಗೌಡರ ಕುಟುಂಬದ ಮಾತುಗಳಿಗೆ ಜಿಲ್ಲೆಯ ಜನ ಮರುಳಾಗಬಾರದೆಂದು ಮನವಿ ಮಾಡಿದರು.
ಲೋಕಸಭಾ ಚುನಾವಣಾ ಅಭ್ಯರ್ಥಿ ಸ್ಟಾರ್ ಚಂದ್ರು( ವೆಂಕಟರಮಣೇಗೌಡ) ಮಾತನಾಡಿ ನಾನು ಹಣ ಮಾಡಲು ರಾಜಕಾರಣಕ್ಕೆ ಬಂದಿಲ್ಲ. ಜಿಲ್ಲೆಯ ಜನರ ಸೇವೆ ಮಡಲು ಬಂದಿದ್ದೇನೆ. ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ. ನಾನು ನಿಮ್ಮ ಋಣ ತೀರಿಸುತ್ತೇನೆಂದರು.
ವೇದಿಕೆಯಲ್ಲಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಚಲನಚಿತ್ರ ನಟ ಸಾಧುಕೋಕಿಲಾ, ಮಾಜಿ ಶಾಸಕರುಗಳಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್, ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ರಾಜ್ಯ ಕೆಯುಐಡಿಎಫ್‍ಸಿ ಮಾಜಿ ಅಧ್ಯಕ್ಷ ಮತ್ತಿಘಟ್ಟ ಕೃಷ್ಣಮೂರ್ತಿ, ಮುಖಂಡರುಗಳಾದ ಬಿ.ಎಲ್.ದೇವರಾಜು, ಬೂಕನಕೆರೆ ವಿಜಯರಾಮೇಗೌಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಹರಳಹಳ್ಳಿ ವಿಶ್ವನಾಥ್, ಐಪನಹಳ್ಳಿ ನಾಗೇಂದ್ರಕುಮಾರ್, ಸೇರಿದಂತೆ ಹಲವು ಮುಖಂಡರು ವೇದಿಕೆಯಲ್ಲಿದ್ದರು.