ಕಾಕನಹಳ್ಳಿ ಗ್ರಾಮವನ್ನು ನರಚನಹಳ್ಳಿ ಪಂಚಾಯಿತಿಯಲ್ಲಿ ಉಳಿಸುವಂತೆ ಮನವಿ
ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಮಾ.28:- ತಾಲ್ಲೂಕಿನ ಕಾಕನಹಳ್ಳಿ ಗ್ರಾಮವನ್ನು ಗಂಧನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿಸದೇ ನರಚನಹಳ್ಳಿ ಗ್ರಾಮಪಂಚಾಯಿತಿಯಲ್ಲಿಯೇ ಉಳಿಸಬೇಕು. ಒಂದು ವೇಳೆ ಬದಲಾಯಿ ಸಿದರೆ ಹೊಸಅಗ್ರಹಾರ ಗ್ರಾಪಂ ವ್ಯಾಪ್ತಿಗೆ ಸೇರಿಸಬೇಕು ಎಂದು ಕಾಕನಹಳ್ಳಿ ಗ್ರಾಮದ ಹಂದಿ ಜೋಗಿ ಸಮಾಜದ ಮುಖಂಡ ಕೃಷ್ಣ ಜಿಲ್ಲಾಧಿಕಾರಿಗಳು ಮತ್ತು ಸರ್ಕಾರವನ್ನು ಒತ್ತಾಯಿಸಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಕನಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಅಲೆ ಮಾರಿ ಹಂದಿಜೋಗಿ ಸಮಾಜದವರು ಹೆಚ್ಚಾಗಿದ್ದು, ಹಂಪಾಪುರ ಮಂಡಲ ಪಂಚಾ ಯಿತಿಯಿಂದ ಬೇರ್ಪಟ್ಟು ನರಚನಹಳ್ಳಿ ಗ್ರಾಪಂಗೆ ಸೇರಿದಾಗಿನಿಂದ ನಮ್ಮನ್ನು ಗೌರವಯುತ ವಾಗಿ ನಡೆಸಿಕೊಂಡು ಬರುತ್ತಿದ್ದು, ಸಮರ್ಪಕ ವಾಗಿ ಮೂಲಭೂತ
ಸೌಲಭ್ಯಗಳನ್ನು ನೀಡಲಾಗುತ್ತಿದೆ. ಗ್ರಾಮ ದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಾಗಲಿ, ಮಾನಸಿಕ ಕಿರಿಕಿರಿಗಳಾಗಲಿ ಇದುವರೆಗೆ ನಡೆದಿಲ್ಲ ಎಂದು ಹೇಳಿದರು.
2ಕಿ.ಮೀ ದೂರದಲ್ಲಿರುವ ಗಂಧನಹಳ್ಳಿ ಗ್ರಾಮದ ಕೆಲವು ಕಿಡಿಗೇಡಿಗಳು ನಮ್ಮ ಗ್ರಾಮದ ಒಗ್ಗಟ್ಟನ್ನು ಒಡೆದು ಮುಗ್ಧರನ್ನು ಎತ್ತಿಕಟ್ಟಿದ್ದು, ಗಂಧನಹಳ್ಳಿ ಗ್ರಾಪಂಗೆ ಸೇರಿಸುವಂತೆ ನಮ್ಮ ಗ್ರಾಮದ ಕೆಲವರು ಮನವಿಯನ್ನು ನೀಡುವಂತೆ ಮಾಡಿದ್ದಾರೆ.
ಇದರಿಂದ ಗ್ರಾಮದಲ್ಲಿ ಶಾಂತಿ ನೆಮ್ಮದಿಗೆ ಭಂಗ ಉಂಟಾಗಲಿದೆ. ಸರ್ಕಾರ ಇಂತಹ ಕಿಡಿಗೇಡಿಗಳ ಮನವಿಯನ್ನು ಪುರಸ್ಕರಿಸಿ ಕಾಕನಹಳ್ಳಿ ಗ್ರಾಮವನ್ನು ವಿಭಜಿಸಲು ಮುಂದಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹತ್ತಾರು ವರ್ಷಗಳಿಂದಲೂ ಕಾಕನಹಳ್ಳಿ ಗ್ರಾಮದ 1.5 ಎಕರೆ ಕೆರೆಯನ್ನು ಒತ್ತುವರಿ ಮಾಡಿಕೊಂಡು ದಬ್ಬಾಳಿಕೆ ನಡೆಸಿದ್ದು, ಪ್ರಶ್ನಿಸಿದ್ದಕ್ಕೆ ಕಾಕನಹಳ್ಳಿ ಗ್ರಾಮದ ಸಣ್ಣ ಜೋಗಿರವರ ಮಗ ಕೃಷ್ಣ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೂರಿದರು.
ಕಾಕನಹಳ್ಳಿ ಗ್ರಾಮದ ಮುಖಂಡ ವೆಂಕಟಜೋಗಿ, ಯುವ ಮುಖಂಡ ಕೃಷ್ಣ ರವರ ಮೇಲೆ ಎರಡು ಪ್ರಕರಣಗಳನ್ನು ದಾಖಲಿಸಿ, ಕಾಕನಹಳ್ಳಿ ಗ್ರಾಮದ ಹಂದಿ ಜೋಗಿ ಜನಾಂಗವನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ವೆಂಕಟಜೋಗಿ, ಶಿವಣ್ಣಜೋಗಿ, ತಮ್ಮಯ್ಯಜೋಗಿ, ಲೋಕೇಶ್, ಇನ್ನಿತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.