ಬಿಜೆಪಿ ವಿರುದ್ಧ ಸಚಿವ ಪ್ರಿಯಾಂಕ್ ವಾಗ್ದಾಳಿ
ಕಲಬುರಗಿ,ಮಾ.27: ಮೋದಿ ಕರ್ನಾಟಕಕ್ಕೆ ಬಂದಾಗೆಲ್ಲಾ ಶ್ಯಾಡೋ ಸಿಎಂ ಎಂದು ಹೇಳಿಕೆ ನೀಡುವುದನ್ನು ರೂಢಿಸಿಕೊಂಡಿದ್ದಾರೆ. ಆದರೆ ವಾಸ್ತವದಲ್ಲಿ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಂತ ಇದ್ದಾರೆ ಅನ್ನೋದನ್ನು ಏಕೆ ಮರೆಯುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಇಂತಹ ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದರು.ಮೋದಿ ಗ್ಯಾರಂಟಿ ಟಿವಿಯಲ್ಲಿದೆ. ನಮ್ಮ ಗ್ಯಾರೆಂಟಿ ಕೈಯಲ್ಲಿದೆ ಎಂದ ಸಚಿವ ಪ್ರಿಯಾಂಕ್ ಮೋದಿ ಸುನಾಮಿ ದಕ್ಷಿಣದಲ್ಲಿ ಎಲ್ಲೂ ಇಲ್ಲ ಎಂದು ನುಡಿದರು.
ವಿಜಯೇಂದ್ರ ನಾಯಕತ್ವವನ್ನು ಅವರ ಪಕ್ಷದವರೇ ಒಪ್ಪಿಕೊಳ್ಳತ್ತಿಲ್ಲ.ಕಾಂಗ್ರೆಸ್ ಗಿಂತ ಹೆಚ್ಚಿನ ಕುಟುಂಬ ರಾಜಕಾರಣ ಬಿಜೆಪಿಯಲ್ಲಿದೆ. ಡಿ.ಎನ್.ಎ ಟೆಸ್ಟ್ ಮಾಡಿಸಿದರೆ ಯಾರ್ಯಾರು ಯಾರ ಕುಟಂಬದವರು ಅನ್ನೋದು ಗೊತ್ತಾಗುತ್ತದೆ. ಹಾಗಾಗಿ, ಡಿ.ಎನ್.ಎ ಕಿಟ್ ಇಟ್ಟು ಚರ್ಚೆ ಮಾಡೋಣ ಬನ್ನಿ ಎಂದು ಸವಾಲು ಹಾಕಿದರು.
ಬಿಜೆಪಿಯವರು ಒಂದೇ ಕುಟುಂಬ ಎನ್ನುತ್ತಿದ್ದಾರೆ. ವಾಟ್ಸ್ ಆಪ್ ಯೂನಿವರ್ಸಿಟಿ ಅವರು ಮೋದಿಗೆ ಅವರಿಗೆ ಭಾಷಣ ಬರೆದುಕೊಡುತ್ತಾರೆ. ಅತಿ ಹೆಚ್ಚು ಭ್ರಷ್ಟಾಚಾರ ಆಗಿರೋದು ಬಿಜೆಪಿಯ ಅವಧಿಯಲ್ಲಿ ಎಂಬುದನ್ನು ಬಿಜೆಪಿಯವರು ಮರೆತಿದ್ದಾರೆ ಎಂದರು.ಇವರದ್ದು 40 ಪರ್ಸೆಂಟ್ ಸರ್ಕಾರ ಎನ್ನುವ ಕಾರಣಕ್ಕಾಗಿಯೇ ಬಿಜೆಪಿಯವರನ್ನು ಜನರು ಕಿತ್ತೊಗೆದಿದ್ದಾರೆ ಎಂದರು.
ಮೋದಿಯ ಅಲೆಗೆ ಹೆದರಿ ಯಾವೊಬ್ಬ ಸಚಿವರೂ ಲೋಕಸಭಾ ಚುನಾವಣೆಗೆ ನಿಲ್ಲುತ್ತಿಲ್ಲ ಎಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇರುವವರೇ ಸಾಕಲ್ಲ, ಸಚಿವರು ಯಾಕೆ ನಿಲ್ಲಬೇಕು. ಸಚಿವರೇ ನಿಲ್ಲಬೇಕು ಅಂತ ಎಲ್ಲಿಯಾದರೂ ಇದೆಯೇ ಎಂದು ಪ್ರಶ್ನಿಸಿದರು.ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಎಷ್ಟು ಯುವಕರಿಗೆ ಅವಕಾಸದ ಅವಕಾಶ ಮಾಡಿಕೊಟ್ಟಿದ್ದೇವೆ ಅನ್ನೋದನ್ನು ಬಿಜೆಪಿಯವರು ನೋಡಲಿ. ವಿಜಯೇಂದ್ರ ನಾಯಕತ್ವದ ಮೇಲೆಯೇ ಅಸಮಾಧಾನ ಇದೆ. ಈ ನಿಟ್ಟಿನಲ್ಲಿ ಗೋ ಬ್ಯಾಕ್ ಅಭಿಯಾನ ಈಗಾಗಲೆ ಶುರುವಾಗಿದೆ ಎಂದರು.
ನಿಮ್ಮ ಸ್ವಕ್ಷೇತ್ರದಲ್ಲಿ ಏನಾಗುತ್ತಿದೆಯೋ ಅದನ್ನು ಮೊದಲು ನೋಡಿಕೊಳ್ಳಿ ಎಂದ ಪ್ರಿಯಾಂಕ್, ನಿಮ್ಮ ಪೂಜ್ಯ ಅಪ್ಪಾಜಿಯವರ ಕ್ಷೇತ್ರದಲ್ಲಿ ಇಷ್ಟರಲ್ಲೇ ಗೋ ಬ್ಯಾಕ್ ಶುರುವಾಗುತ್ತದೆ ಎಂದು ಹೇಳಿದರು.