ಅಕ್ರಮ ಮದ್ಯ ಮಾರಾಟ: ನಾಲ್ವರ ಬಂಧನ, 16,331 ರೂ.ಮೌಲ್ಯದ ಮದ್ಯ ಜಪ್ತಿ
ಕಲಬುರಗಿ,ಮಾ.27-ಹೋಳಿ ಹಬ್ಬದ ಪ್ರಯುಕ್ತ ಮದ್ಯ ಮಾರಾಟ ನಿಷೇಧ ಆದೇಶವಿದ್ದರೂ ಇದನ್ನು ಉಲ್ಲಂಘಿಸಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿರುವ ಪೊಲೀಸರು 16,331 ರೂ.ಮೌಲ್ಯದ ಮದ್ಯ ಜಪ್ತಿ ಮಾಡಿದ್ದಾರೆ.
ನಗರದ ಕಣ್ಣಿ ಮಾರ್ಕೆಟ್ ಹತ್ತಿರವಿರುವ ಎಲ್‍ಐಸಿ ಆಫೀಸ್ ಹಿಂದುಗಡೆಯ ಖುಲ್ಲಾ ಜಾಗದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಿಇಎನ್ ಪೊಲೀಸ್ ಠಾಣೆಯ ಪಿಐ ನಾಸೀರ್ ಡಿ.ಸನದಿ ಮತ್ತು ಸಿಬ್ಬಂದಿ ದಾಳಿ ನಡೆಸಿ ಶಾಂತಿ ನಗರದ ಪ್ರವೀಣ್ ಮುಲಗೆ (28) ಎಂಬಾತನನ್ನು ಬಂಧಿಸಿ 9,234 ರೂ.ಮೌಲ್ಯದ ಮದ್ಯ ಜಪ್ತಿ ಮಾಡಿದ್ದಾರೆ.
ಕುಸನೂರ ರಸ್ತೆಯ ಆಟೋಸ್ಟ್ಯಾಂಡ್ ಹತ್ತಿರ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಪಿಎಸ್‍ಐ ಮಹಮ್ಮದ್ ಇಬ್ರಾಹಿಂ ಮತ್ತು ಸಿಬ್ಬಂದಿ ದಾಳಿ ನಡೆಸಿ ಕುಸನೂರ ಗ್ರಾಮದ ಚಂದ್ರಕಾಂತ ತಳವಾರ (58) ಎಂಬಾತನನ್ನು ಬಂಧಿಸಿ 2,197 ರೂ.ಮೌಲ್ಯದ ಮದ್ಯ ಜಪ್ತಿ ಮಾಡಿದ್ದಾರೆ.
ಹುಮನಾಬಾದ ರಿಂಗ್ ರಸ್ತೆಯಲ್ಲಿರುವ ಪಾನ್‍ಶಾಪ್ ಮುಂದುಗಡೆ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಬ್ ಅರ್ಬನ್ ಠಾಣೆ ಪೊಲೀಸರು ದಾಳಿ ನಡೆಸಿ ಯಾಸಿನ್ ಪಠಾಣ್ (23) ಎಂಬಾತನನ್ನು ಬಂಧಿಸಿ 1940 ರೂ.ಮೌಲ್ಯದ ಮದ್ಯ ಜಪ್ತಿ ಮಾಡಿದ್ದಾರೆ.
ಇನ್ನು ಹುಮನಾಬಾದ ರಸ್ತೆಯ ಜವಾರಿ ಧಾಭಾ ಹತ್ತಿರ ಮದ್ಯ ಮಾರಾಟ ಮಾಡುತ್ತಿದ್ದ ಜವಾರಿ ಧಾಬಾ ಮಾಲಿಕ ಬಾಬು ಹಡಗಿಲ್ (24) ಎಂಬಾತನನ್ನು ಬಂಧಿಸಿ 2960 ರೂ.ಮೌಲ್ಯದ ಮದ್ಯ ಜಪ್ತಿ ಮಾಡಿದ್ದಾರೆ.
ಸಿಇಎನ್, ವಿಶ್ವವಿದ್ಯಾಲಯ ಮತ್ತು ಸಬ್ ಅರ್ಬನ್ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ.