ಮಿರಗಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಾತ್ಸಲ್ಯ ಮನೆ ಹಸ್ತಾಂತರ
ಇಂಡಿ:ಮಾ.27:ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ವತಿಯಿಂದ ಹೇಮಾವತಿ ಅಮ್ಮನವರ ಕನಸಿನ ಕೂಸು ವಾತ್ಸಲ್ಯ ಮನೆಯನ್ನು ತಾಲೂಕಿನ ಮಿರಗಿ ಗ್ರಾಮದಲ್ಲಿ ಶಕುಂತಲಾ ಭೀಮರಾಯ ಬಡಿಗೇರ ಅವರಿಗೆ ವಿತರಿಸಿದರು.
ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ಜಿಲ್ಲಾ ನಿರ್ದೇಶಕ ಸಂತೋಷಕುಮಾರ ರೈ ಶಕುಂತಲಾ ಬಡಿಗೇರ ಅವರಿಗೆ ವಾತ್ಸಲ್ಯ ಮನೆ ಹಸ್ತಾಂತರಿಸಿ ಮಾತನಾಡಿ,ಗ್ರಾಮೀಣ ಭಾಗದಲ್ಲಿ ವಾಸಿಸುವ ಅತ್ಯಂತ ಕಡು ಬಡವರನ್ನು ಗುರುತಿಸಿ ಡಾ.ಡಿ.ವೀರೇಂದ್ರ ಹೆಗಡೆಯವರು ವಾತ್ಸಲ್ಯ ಮನೆಗಳನ್ನು ನಿರ್ಮಿಸಿ ಸೂರು ಕಲ್ಪಿಸುತ್ತಿದ್ದಾರಲ್ಲದೆ ಪ್ರತಿ ತಿಂಗಳು ಮಾಶಾಸನವನ್ನು ನೀಡುತ್ತಿದ್ದಾರೆ ಎಂದು ಹೇಳಿದ ಅವರು,ಅತಿ ಸಣ್ಣ ರೈತರ ಆರ್ಥಿಕ ಸಬಲೀಕರಣದೊಂದಿಗೆ ಆರಂಭಗೊಂಡ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಇಂದು ದೇಶದ ಪ್ರಮುಖ ಸ್ವಯಂ ಸೇವಾ ಸಂಸ್ಥೆಯಲ್ಲೊಂದಾಗಿದೆ.ಸುಮಾರು 40 ವರ್ಷಗಳ ಸುದೀರ್ಘ ಪ್ರಯಾಣದಲ್ಲಿ ಹತ್ತು ಹಲವಾರು ಕಾರ್ಯಕ್ರಮ ಆಯೋಜಿಸಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಾರ್ಯಕ್ರಮ ಆಯೋಜಿಸುತ್ತ ಬಂದಿದ್ದು, ಮಹಿಳಾ ಸಬಲೀಕರಣದೊಂದಿಗೆ ಸ್ವಾವಲಂಬನೆಯ ಬದುಕು,ಪಾಲುದಾರರ ಕುಟುಂಬಗಳ ಏಳ್ಗೆಗೆ ಕಾರಣವಾಗಿದೆ ಎಂದು ಹೇಳಿದರು.
ನ್ಯಾಯವಾದಿ ಸೋಮಶೇಖರ ನಿಂಬರಗಿಮಠ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಹಾಗೂ ನಿರ್ಗತಿಕರಿಗೆ ಸೂರು ಕಲ್ಪಿಸುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯ ಶ್ಲಾಘನೀಯವಾದದ್ದು ಎಂದು ಹೇಳಿದರು.
ಯೋಜನೆಯ ಮೂಲಕ ಸಾಲಸೌಲಭ್ಯ ಪಡೆದು ಮಹಿಳೆಯರು ಸಂಘಟಿತರಾಗಿ ಸ್ವಾವಲಂಭಿ ಜೀವನ ನಡೆಸುತ್ತಿದ್ದಾರೆ.ಪ್ರತಿ ಯೋಜನೆಯನ್ನು ಫಲಾನುಭವಿಗಳಿಗೆ ತಲುಪಿಸುತ್ತಿರುವುದು ಮೆಚ್ಚುವಂತದ್ದು ಎಂದು ಹೇಳಿದರು.
ಇಂಡಿ ತಾಲೂಕ ಯೋಜನಾಧಿಕಾರಿ ನಟರಾಜ, ಗ್ರಾಪಂ ಅಧ್ಯಕ್ಷ ಬಸವರಾಜ ಹೊರ್ತಿ, ಜ್ಞಾನ ವಿಕಾಸ ಯೋಜನಾಧಿಕಾರಿ ಶಕುಂತಲಾ, ಕವಿಗ್ರಾ ಬ್ಯಾಂಕ್ ನಿವೃತ್ ಮ್ಯಾನೇಜರ್ ಅಶೋಕ, ಜ್ಞಾನ ವಿಕಾಸ ತಾಲೂಕ ಸಮನ್ವಯಾಧಿಕಾರಿ ಜಯಶ್ರೀ, ವಲಯದ ಮೇಲ್ವಿಚಾರಕಿ ಗೀತಾ, ಗ್ರಾಪಂ ಸದಸ್ಯ ಶ್ರೀಶೈಲ ಮದರಿ, ರಾಜು ದೇವರಮನಿ, ಬಸವರಾಜ ಖಸ್ಕಿ, ದೇವೆಂದ್ರ ಬರಡೋಲ, ಶರಣಬಸು ಶ್ರೀಗಿರಿ, ಒಕ್ಕೂಟದ ಅಧ್ಯಕ್ಷೆ ನಾಗರತ್ನ ಅತನೂರ, ಗೀತಾ ಶಿವಾನಂದ ಕಲಶೆಟ್ಟಿ, ಶಾಂತಾ ರೋಡಗಿ, ಭಾಗ್ಯಶ್ರೀ ರೋಡಗಿ, ಪ್ರದೀಪ, ಸೇವಾ ಪ್ರತಿನಿಧಿ ರೇಖಾ ಕಲಶೆಟ್ಟಿ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.