ಒಳ್ಳೆಯ ಸರಕಾರ ಆಯ್ಕೆ ಮಾಡಿದಲ್ಲಿ ರಾಮ ರಾಜ್ಯದ ನಮ್ಮ ಕನಸು : ಸತ್ಯಾತ್ಮತೀರ್ಥ ಸ್ವಾಮೀಜಿ
ಅಥಣಿ : ಮಾ.27:ನಮ್ಮ ಸನಾತನ ಧರ್ಮ, ಪ್ರಜಾಪ್ರಭುತ್ವ , ರಾಮ ರಾಜ್ಯದ ಕಲ್ಪನೆಯನ್ನು ಸಾಕಾರಗೊಳಿಸುವ ಮತ್ತು ದೇಶದ ಅಖಂಡತೆಯನ್ನು ರಕ್ಷಣೆ ಮಾಡುವವರನ್ನು ಈ ಚುನಾವಣೆಯಲ್ಲಿ ಬೆಂಬಲಿಸೋಣ ಎಂದು ಉತ್ತರಾಧಿ ಮಠದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಭಕ್ತ ಸಮೂಹಕ್ಕೆ ಕರೆ ನೀಡಿದರು.
ಅವರು ಸ್ಥಳೀಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಫಲ, ಮಂತ್ರಾಕ್ಷತೆ ನೀಡಿ ಮಾತನಾಡುತ್ತಿದ್ದರು.
ಈ ದೇಶದಲ್ಲಿಯೇ ಹುಟ್ಟಿ ಬೆಳೆದು, ಅನ್ನ, ನೀರಿನ ಜೊತೆಗೆ ಅಧಿಕಾರ, ಅಂತಸ್ತು ಪಡೆದುಕೊಂಡ ಅನೇಕರು ಈ ದೇಶದ ಅಖಂಡತೆಯನ್ನು ಮತ್ತು ಸನಾತನ ಧರ್ಮವನ್ನು ನಾಶ ಮಾಡಲು ಹೊರಟಿರುವುದು ದುರದೃಷ್ಟಕರ ಸಂಗತಿಯಾಗಿದ್ದು, ಇಂತವರೂ ಕೂಡ ಧರ್ಮ ಮತ್ತು ಸನ್ಮಾರ್ಗದಲ್ಲಿ ಬರಲಿ ಎಂದು ನಾವೆಲ್ಲ ಭಗವಂತನಲ್ಲಿ ಪಾರ್ಥಿಸೋಣ ಎಂದ ಅವರು ಐದು ವರ್ಷಗಳಿಗೊಮ್ಮೆ ನಡೆಯುವ ಚುನಾವಣೆಯಲ್ಲಿ ಒಳ್ಳೆಯ ಸರಕಾರ ಆಯ್ಕೆ ಮಾಡಿದಲ್ಲಿ ಮಾತ್ರ ರಾಮ ರಾಜ್ಯದ ನಮ್ಮ ಕನಸು ನನಸಾಗುವುದು ಇದಕ್ಕಾಗಿ ನಾವೆಲ್ಲ ಧರ್ಮದ ದಾರಿಯಲ್ಲಿ ನಡೆಯಬೇಕಿದೆ ಎಂದರು.
ಈ ದೇಶದ ಅಧಿಕಾರಿಗಳು, ಜನ ಪ್ರತಿನಿಧಿಗಳು ಜೊತೆಗೆ ಈ ದೇಶದ ಪ್ರತಿಯೊಬ್ಬ ಪ್ರಜೆಯೂ ಕೂಡ ಪ್ರಾಮಾಣಿಕವಾಗಿ ದೇಶಕ್ಕೆ ನಿಷ್ಠರಾದಾಗ ಮಾತ್ರ ನಿಜವಾಗಿ ರಾಮ ರಾಜ್ಯದ ಕನಸು ಸಾಕಾರಗೊಳ್ಳಲು ಸಾಧ್ಯವಾಗುತ್ತದೆ ಆಗ ಮಾತ್ರ ಭಾರತ ವಿಶ್ವ ಗುರುವಿನ ಸ್ಥಾನ ಪಡೆದುಕೊಳ್ಳಲು ಸಾಧ್ಯ ಎಂದ ಅವರು ರಾಮ ರಾಜ್ಯ ವಿಧಾನ ಸಭೆಯಲ್ಲಾಗಲಿ ಅಥವಾ ಸಂಸತ್ ಭವನದಲ್ಲಿ ಒಮ್ಮಿಂದೊಮ್ಮೆ ನಿರ್ಮಾಣ ಆಗುವುದಿಲ್ಲ ಇದಕ್ಕಾಗಿ ತಂದೆ-ತಾಯಿಗಳ, ನಿಸ್ವಾರ್ಥದ ಸೇವೆಯ ಪಾಠ ಬೋಧಿಸಿದ ಶ್ರೀರಾಮ ಚಂದ್ರನ ಆದರ್ಷ ಪಾಲಿಸಿಕೊಂಡು ಹೋಗಬೇಕು ಎಂದರು.
ಅದೇಷ್ಟೋ ಜನ್ಮಗಳ ಪುಣ್ಯ ಮಾಡಿದ ಪರಿಣಾಮ ಮನುಷ್ಯ ಜನ್ಮಕ್ಕೆ ಬಂದಿರುವ ನಾವು ದೇಶದ ಮತ್ತು ಧರ್ಮದ ಒಳಿತಿಗಾಗಿ ನಿರಂತರ ಜಪ, ತಪ, ಪ್ರಾರ್ಥನೆ, ಸ್ತೋತ್ರಗಳ ಪಠಣ ಮಾಡಬೇಕು ಆಗ ಮಾತ್ರ ನಮ್ಮ ಮಕ್ಕಳೂ ಕೂಡ ಧರ್ಮದಿಂದ ಮುನ್ನಡೆಯುತ್ತಾರೆ ಎಂದ ಅವರು ಪುಸ್ತಕ ಓದಲು ನಾವು ದೀಪ ಹಚ್ಚಿದಾಗ ಆ ದೀಪ ಪುಸ್ತಕ ಓದುವ ನಮಗೆ ಮಾತ್ರ ಬೆಳಕು ನೀಡುವುದಿಲ್ಲ ಆ ಕೋಣೆಯಲ್ಲಿ ಇರುವವರೆಲ್ಲರಿಗೂ ಬೆಳಕು ನೀಡುವಂತೆ ನಾವು ಮಾಡಿದ ಪ್ರಾರ್ಥನೆ, ಜಪ, ತಪ, ಸ್ತೋತ್ರಗಳ ಪಠಣದಿಂದ ನಮಗೆ ಮಾತ್ರ ಅಲ್ಲ ನಮ್ಮ ಜೊತೆಗಿರುವ ಮಕ್ಕಳಿಗೂ ಪುಣ್ಯ ಬರುತ್ತದೆ ಎಂದರು.
ನಮಗೆ ಮರಣ ಯಾವ ಸಮಯದಲ್ಲಾದರೂ ಬಂದು ನಮ್ಮ ಅಸ್ತಿತ್ವ ಕಳೆದುಕೊಳ್ಳಬಹುದು ಇದು ಸತ್ಯ ಹೀಗಾಗಿ ಪ್ರತಿ ಕ್ಷಣವೂ ಕೂಡ ಸತ್ಕಾರ್ಯಗಳಲ್ಲಿ ತೊಡಗುವುದರ ಜೊತೆಗೆ ದೇವರ ನಾಮಸ್ಮರಣೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಮಠಾಧಿಕಾರಿ ಪಂ.ಎಮ್.ಜಿ.ಜೋಶಿ, ಪಂ.ಬಿಂದುಮಾಧವ ಜೋಶಿ, ಪಂ ಆರ್.ಜಿ.ಗುಡಿ, ಬ್ರಾಹ್ಮಣ ಸಮಾಜ ಸಂಘಟನೆಯ ಕಾರ್ಯಾಧ್ಯಕ್ಷ ಶ್ರೀರಾಮ ಕಟ್ಟಿ, ರಾಘವೇಂದ್ರ ಮಠದ ಟ್ರಸ್ಟಿಗಳಾದ ಎಸ್.ವ್ಹಿ.ಜೋಶಿ, ಅನೀಲ ದೇಶಪಾಂಡೆ (ಹಿಡಕಲ್), ಎಲ್.ವ್ಹಿ.ಕುಲಕರ್ಣಿ, ರಾಜು ಪಾಟೀಲ, ವಿಶ್ವ ಮಧ್ವ ಪರಿಷತ್ ನ ಶ್ರೀನಿವಾಸ ಜೋಶಿ, ಬ್ರಾಹ್ಮಣ ಸಮಾಜದ ಅರವಿಂದ ದೇಶಪಾಂಡೆ, ಸುಧೀಂದ್ರ ಬಾದರಾಯಣ. ವಾದಿರಾಜ ಜಂಬಗಿ, ಎನ್.ಕೆ.ಪಾಟೀಲ, ಲಕ್ಷ್ಮಣ ರಾಮದಾಸಿ, ಬಾಬು ಕುಲಕರ್ಣಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ವಿಪ್ರ ಬಾಂಧವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಶ್ರೀಗಳು ಫಲ, ಮಂತ್ರಾಕ್ಷತೆ ನೀಡಿದರು.