ಉತ್ತಮ ಕಲಾವಿದ ವೈದ್ಯರಿಗೆ ಸಮಾನ : ಪ್ರಭುದೇವರು
ಬೀದರ:ಮಾ.27: ವೈದ್ಯರು ಮಾತ್ರೆ ಮೂಲಕ ರೋಗ ಕಡಿಮೆ ಮಾಡಿದರೆ ಕಲಾವಿದರು ತನ್ನ ಕಲೆಯ ಮೂಲಕ ವ್ಯಕ್ತಿಯ ರೋಗಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತಾರೆ ಎಂದು ಬಸವ ಸೇವಾ ಪ್ರತಿಷ್ಠಾನದ ಪೂಜ್ಯ ಶ್ರೀ ಪ್ರಭುದೇವರು ತಿಳಿಸಿದರು.
ಜಾನಪದ ಕಲಾವಿದರ ಬಳಗ, ಮಕ್ಕಳ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಜಿಲ್ಲಾ ರಂಗಮಂದಿರದಲ್ಲಿ ನಡೆಯುತ್ತಿರುವ ಏಳು ದಿವಸಗಳ ನೇಪಥ್ಯ ನಾಟಕೋತ್ಸವದ ಐದನೇ ದಿನದಂದು “ಅಡುಗೆ ಮನೆಯಲೊಂದು ಹುಲಿ” ನಾಟಕೋತ್ಸವದ ಸಾನಿಧ್ಯ ವಹಿಸಿ ಮಾತನಾಡಿದರು.
ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಶಿವಕುಮಾರ ಎಚ್.ಎಂ. ಮಾತನಾಡಿ ಬೀದರ ಜಿಲ್ಲೆ ಕಲಾವಿದರ ತವರೂರಾಗಿ ಹೊರಹೊಮ್ಮುತ್ತಿದೆ. ರಾಜ್ಯದ ಕಲಾವಿದರನ್ನು ಜಿಲ್ಲೆಗೆ ಆಹ್ವಾನಿಸಿ, ಅವರಿಗೆ ವೇದಿಕೆ ಒದಗಿಸಿಕೊಡುತ್ತಿರುವುದು ಬಣ್ಣಿಸಲಸಾಧ್ಯವಾದುದು ಎಂದರು. ಇಲ್ಲಿಯ ಕಲಾವಿದರು ಪರಿಪೂರ್ಣತೆಯನ್ನು ಗಟ್ಟಿಗೊಳಿಸಿಕೊಂಡು ರಾಜ್ಯ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆ ಅನಾವರಣಗೊಳಿಸುತಿದ್ದಾರೆ ಎಂದು ಪ್ರತಿಪಾದಿಸಿದರು.
ವೇದಿಕೆ ಮೇಲೆ ರಾಜ್ಯ ಯುವ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಫಣೀಂದ್ರಪ್ರಸಾದ, ಸಾಹಿತಿಗಳಾದ ಕನ್ಯಾಕುಮಾರಿ, ಪುಷ್ಪ ಕನಕ ಉಪಸ್ಥಿತರಿದ್ದರು.
ಬಳಗದ ಅಧ್ಯಕ್ಷ ವಿಜಯಕುಮಾರ ಸೋನಾರೆ ಅಧ್ಯಕ್ಷತೆ ವಹಿಸಿದ್ದರು. ಕೊನೆಯಲ್ಲಿ ಬಿ.ಸುರೇಶ ರಚನೆಯ, ಮೇಘ ಸಮೀರ್ ನಿರ್ದೇಶನದ “ಅಡುಗೆ ಮನೆಯಲೊಂದು ಹುಲಿ” ಸಾಮಾಜಿಕ ನಾಟಕ ಪ್ರದರ್ಶನ ಮಾಡಲಾಯಿತು. ಸಂಜೀವಕುಮಾರ ಖಾಶೆಂಪೂರ ತತ್ವಪದ ಗಾಯನ ನಡೆಸಿಕೊಟ್ಟರು.
ನಾಗಶೆಟ್ಟಿ ಧರಂಪೂರ ನಿರೂಪಿಸಿದರು. ಸುನೀಲ ಕಡ್ಡೆ ಸ್ವಾಗತಿಸಿದರು. ಏಸುದಾಸ ಅಲಿಯಂಬರ ವಂದಿಸಿದರು.