ಇಂದು ಅಮರಣಾಂತ ಉಪವಾಸ ಸತ್ಯಾಗ್ರಹ ಅಂತ್ಯ:ಭೀಮಾ ನದಿಗೆ 1 ಟಿಎಂಸಿ ನೀರು ಹರಿವು:ಇಂದು ಹೋರಾಟಗಾರರ ತಂಡ ಹಾಗೂ ಪ್ರಮುಖರೊಂದಿಗೆ ಮಣ್ಣೂರ ಭೀಮಾ ನದಿಗೆ ಭೇಟಿ
ಅಫಜಲಪುರ:ಮಾ.27: ನಾರಾಯಣಪುರ ಜಲಾಶಯದಿಂದ ಭೀಮಾ ನದಿಗೆ ಕುಡಿಯುವ ನೀರಿಗಾಗಿ 1 ಟಿಎಂಸಿ ನೀರು ಹರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಕಳೆದ 12 ದಿನಗಳಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಹೋರಾಟಗಾರ ಶಿವಕುಮಾರ ನಾಟೀಕಾರ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಉಪವಾಸ ಸತ್ಯಾಗ್ರಹಕ್ಕೆ ಈ ಹಿಂದೆಯೇ ಬರಬೇಕಾಗಿತ್ತು.
ಆದರೆ ಒಂದು ಸಮಸ್ಯೆಗೆ ಪರಿಹಾರ ಸಿಕ್ಕ ಮೇಲೆ ಬಂದರೆ ಉತ್ತಮ ಎಂದು ನಿರಂತರವಾಗಿ ನಮ್ಮ ಅಧಿಕಾರಿಗಳ ತಂಡದೊಂದಿಗೆ ಚರ್ಚಿಸಿ ಸರ್ಕಾರದ ಗಮನಕ್ಕೆ ತರಲಾಗಿದೆ. ಅಲ್ಲದೇ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಸಹ ಸಾಕಷ್ಟು ಶ್ರಮ ವಹಿಸಿದ್ದಾರೆ. ಹೀಗಾಗಿ ಗಂಭೀರವಾದ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರವು ಹೆಚ್ಚಿನ ಕಾಳಜಿ ವಹಿಸಿ ನಾರಾಯಣಪುರ ಜಲಾಶಯದಿಂದ 1 ಟಿಎಂಸಿ ನೀರು ಹರಿಸಲು ಸೂಚನೆ ನೀಡಿದೆ. ಅಲ್ಲದೇ ಕುಡಿಯುವ ನೀರಿನ ಸಮಸ್ಯೆ ಆಗಲಾರದಂತೆ ನೋಡಿಕೊಳ್ಳಲು ಈಗಾಗಲೇ 200 ಖಾಸಗಿ ಕೊಳವೆ ಬಾವಿಗಳಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಹಿಂದಿನ ವರ್ಷ 2 ಟಿಎಂಸಿ ನೀರು ಬ್ಯಾರೇಜ್ ನಲ್ಲಿ ಸಂಗ್ರಹವಿತ್ತು. ಆದರೆ ಈ ಬಾರಿ ಬರಗಾಲ ಇರುವುದರಿಂದ ನೀರಿನ ಸಂಗ್ರಹ ಪ್ರಮಾಣ ಕಡಿಮೆ ಆಗಿದೆ.
ಅಫಜಲಪುರ ಮತ್ತು ಆಳಂದ ತಾಲೂಕಿನಲ್ಲಿ ಸಾಕಷ್ಟು ನೀರಿನ ಸಮಸ್ಯೆ ಇದೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಕಲಬುರಗಿ ಎಸ್ಪಿ ಅಕ್ಷಯ್ ಹಾಕೆ ಮಾತನಾಡಿ, ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡ 5-6 ದಿನಗಳ ಮೇಲೆ ಈ ವಿಷಯ ಹೆಚ್ಚು ಗಮನ ಸೆಳೆದಿದೆ. ಹೋರಾಟಗಾರರು ಮತ್ತು ಸಾರ್ವಜನಿಕರು ಈ ಹೋರಾಟವನ್ನು ಶಾಂತಿಯುತವಾಗಿ ನಡೆಸಿದ್ದಾರೆ. ಹೀಗಾಗಿ ಪೆÇೀಲಿಸ್ ಇಲಾಖೆಯಿಂದ ಧನ್ಯವಾದಗಳು ಸಲ್ಲಿಸಲಾಗುವುದು ಎಂದರು.
ಹೋರಾಟಗಾರ ಶಿವಕುಮಾರ ನಾಟೀಕಾರ ಮಾತನಾಡಿ, ಭೀಮಾ ನದಿಗೆ ನಾರಾಯಣಪುರ ಜಲಾಶಯದಿಂದ 1 ಟಿಎಂಸಿ ನೀರು ಹರಿಸಲು ಆದೇಶ ಹೊರಡಿಸಲಾಗಿದೆ. ಆದರೆ ನೀರು ಹೆಚ್ಚಿನ ಪ್ರಮಾಣದಲ್ಲಿ ಹಾಳಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಪಕ್ಷಾತೀತವಾಗಿ ಹೋರಾಟ ನಡೆಸಿ ಭೀಮಾ ನದಿ ಉಳಿವಿಗಾಗಿ ಹೋರಾಟ ನಡೆಸಲಾಗಿದೆ. ವೈಯಕ್ತಿಕ ಹಿತದೃಷ್ಟಿಯಿಂದ ಅಲ್ಲ. ಇಂದು ಬುಧವಾರ ಬೆಳಿಗ್ಗೆ 11 ಗಂಟೆಗೆ ಸತ್ಯಾಗ್ರಹಕ್ಕೆ ಬೆಂಬಲಿಸಿದ ಪ್ರಮುಖರನ್ನು ಕರೆಸಿ ಉಪವಾಸ ಸತ್ಯಾಗ್ರಹ ಕೈಬಿಡುವ ನಿರ್ಧಾರ ಕೈಗೊಳ್ಳಲಾಗಿದೆ ಹಾಗೂ
ಇಂದು ಹೋರಾಟಗಾರರ ತಂಡ ಮತ್ತು ಪ್ರಮುಖರೊಂದಿಗೆ ಮಣ್ಣೂರ ಭೀಮಾ ನದಿಗೆ ಭೇಟಿ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಮಹಮ್ಮದ್ ಶರೀಫ್ ರಾವುತರ್, ಚುನಾವಣಾಧಿಕಾರಿ ಜಾವೀದ್ ಕಾರಂಗಿ, ತಹಶೀಲ್ದಾರ್ ಸಂಜೀವಕುಮಾರ ದಾಸರ, ಸಿಪಿಐ ಚನ್ನಯ್ಯ ಹಿರೇಮಠ, ಪಿಎಸ್‍ಐ ಮಹೆಬೂಬ ಅಲಿ, ಪುರಸಭೆ ಮುಖ್ಯಾಧಿಕಾರಿ ಪ್ರಕಾಶ್ ಮಠದ, ಚಿದಾನಂದ ಮಠ, ಸಂತೋಷ ದಾಮಾ, ದಯಾನಂದ ದೊಡ್ಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.