ಶ್ರೀಗಂಧ ಅಕ್ರಮ ಸಾಗಾಟ: ನಾಲ್ವರು ಆರೋಪಿಗಳ ಬಂಧನ
ಸಂಜೆವಾಣಿ ವಾರ್ತೆ
ಹೊಸಪೇಟೆ (ವಿಜಯನಗರ), ಮಾ.27: ನಗರದ ಸಂಡೂರು ರಸ್ತೆಯಿಂದ ಬಳ್ಳಾರಿ ರಸ್ತೆಯತ್ತ ಅನಧಿಕೃತವಾಗಿ ಶ್ರೀಗಂಧದ ತುಂಡುಗಳನ್ನು ಸಾಗಿಸಿ ಇದೇ 22ರಂದು ಪೊಲೀಸರಿಗೆ ಸಿಕ್ಕಿಬಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರನ್ನು ಸಂಡೂರು ತಾಲ್ಲೂಕು ಸುಶೀಲ ನಗರದ ಎಲ್‌.ಗಂಗಾ ನಾಯ್ಕ (41), ಕೊಟ್ಟೂರು ತಾಲ್ಲೂಕು ಹಾರಕನಹಾಳು ಗ್ರಾಮದ ಮಹಾಂತೇಶ್‌ (24), ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಕಂದಗಲ್ಲು ಗ್ರಾಮದವರಾದ ಎಚ್‌.ಚಿನ್ನಪ್ಪ (49) ಮತ್ತು ಎಚ್‌.ರಾಮಣ್ಣ (61) ಎಂದು ಗುರುತಿಸಲಾಗಿದೆ.
ಪೊಲೀಸರ ತಪಾಸಣೆ ವೇಳೆ ಇಟಿಯೋಸ್ ಕಾರು, ಟಾಟಾ ಪಿಕಪ್‌ ವಾಹನಗಳನ್ನು ಸ್ಥಳದಲ್ಲೇ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು. ವಾಹನಗಳಲ್ಲಿ 203 ಕೆ.ಜಿ.ತೂಕದ ಶ್ರೀಗಂಧದ ತುಂಡುಗಳನ್ನು 11 ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ ಇಡಲಾಗಿತ್ತು. ಶ್ರೀಗಂಧದ ಮೌಲ್ಯ 30.45 ಲಕ್ಷ ಮತ್ತು ವಾಹನಗಳ ಮೌಲ್ಯ 7 ಲಕ್ಷ ಎಂದು ಅಂದಾಜಿಸಲಾಗಿತ್ತು. ಆರೋಪಿಗಳ ಪತ್ತೆಗಾಗಿ ಪಟ್ಟಣ ಠಾಣೆ ಇನ್‌ಸ್ಪೆಕ್ಟರ್ ಲಖನ್ ಆರ್.ಮಸಗುಪ್ಪಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ಇದೊಂದು ಅಂತರರಾಜ್ಯ ಕಳ್ಳದ ಜಾಲ ಎಂದು ಶಂಕಿಸಲಾಗಿದ್ದು, ಇನ್ನೂ ಕೆಲವು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರಿಗಾಗಿ ಶೋಧ ನಡೆಯುತ್ತಿದೆ ಎಂದು ಎಸ್‌ಪಿ ಶ್ರೀಹರಿಬಾಬು ಬಿ.ಎಲ್‌.ತಿಳಿಸಿದ್ದಾರೆ.  ಈ ಯಶಸ್ವಿ ಕಾರ್ಯಾಚರಣೆಗಾಗಿ ಅವರು ಪೊಲೀಸರನ್ನು ಅಭಿನಂದಿಸಿದ್ದಾರೆ.