ವೀ.ವಿ.ಸಂಘದ ನೂತನ ಅಧ್ಯಕ್ಷರಾಗಿ ಅಲ್ಲಂ ಗುರುಬಸವರಾಜ್ ಮತ್ತೊಮ್ಮೆ ಆಯ್ಕೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.27: ವೀರಶೈವ ವಿದ್ಯಾವರ್ಧಕ ಸಂಘಕ್ಕೆ ಅಲ್ಲಂ ಗುರುಬಸವರಾಜ್ ಅವರು ಮತ್ತೊಮ್ಮೆ ಅಚ್ಚರಿಯ ಆಯ್ಕೆಯಾಗಿದ್ದಾರೆ.
2011-14 ನೇ ಸಾಲಿನಲ್ಲಿ  ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಸಂಘದ 30 ಕಾರ್ಯಕಾರಿ ಸಮಿತಿ ಸದಸ್ಯರಲ್ಲಿ ಯುವಕ ವೃಂದದಿಂದ 16 ಜನ, ಹಿರಿಯರ ತಂಡದಿಂದ 13 ಮತ್ತು ಒರ್ವ ಸ್ವತಂತ್ರ ಅಭ್ಯರ್ಥಿ ಆಯ್ಕೆಯಾಗಿದ್ದರು.
ಈ ವರೆಗೆ ಅಧ್ಯಕ್ಷರಾಗಿದ್ದ ಆರ್.ರಾಮನಗೌಡ ಅವರು ಬೆಳಿಗ್ಗೆ 11 ಕ್ಕೆ ನೂತನ ಕಾರ್ಯಕಾರಿ ಸಮಿತಿಯ ಸದಸ್ಯರ ಸಭೆ ಕರೆದು. ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆರಂಭಿಸಿದರು.
ಮತದಾನ ಮುಕ್ತವಾಗಿ ಅಂದರೆ ಕೈ ಎತ್ತುವ ಮೂಲಕ ಅಧ್ಯಕ್ಷರ ಆಯ್ಕೆಯಾಗಬೇಕೆಂದು ಯುವಕ ವೃಂದ ಹೇಳಿತು. ಆಗ ಹಿರಿಯರ ತಂಡ ಇಲ್ಲ. ಈ ಮೊದಲಿನಿಂದ ನಡೆದುಕೊಂಡು ಬಂದಿರುವ ರೀತಿಯಲ್ಲಿ ಗುಪ್ತವಾಗಿ ನಡೆಯಲಿ ಎಂದಾಗ‌ ಎರೆಡು ತಂಡಗಳ ನಡುವೆ ವಾಗ್ವಾದ ನಡೆಯಿತು. ವಾಗ್ವಾದಕ್ಕೆ ಬೇಸರಗೊಂಡ ಅಧ್ಯಕ್ಷರು ಹೀಗೆ ಮಾಡಿದರೆ ಸರಿಯಲ್ಲ. ಬೇಕಾದರೆ ಇನ್ನೊಂದು ದಿನ ಚುನಾವಣೆ ನಡೆಸುತ್ತೇನೆಂದು ಸಿಟ್ಟಿನಿಂದ  ಸಭೆಯಿಂದ  ಹೊರ ಬಂದಿದ್ದರು.
ಈ ವೇಳೆ ಕೆಲ ಆಜೀವ ಸದಸ್ಯರು ಈ ರೀತಿ ಹೊರಗೆ ಬರ ಬೇಡಿ ಚುನಾವಣೆ ಶಾಂತಿಯಿತವಾಗಿ ನಡೆಸಿ ಎಂದು ಸಭಾಂಗಣಕ್ಕೆ ನುಗ್ಗಿ ಗಲಾಟೆ ಮಾಡಿದರು.ಆಗ  ರಾಮನಗೌಡ ಅವರನ್ನು ಸಮುದಾಯದ ಮುಖಂಡರು. ಸಂತೈಸಿ ಅಧ್ಯಕ್ಷರು ರೂಲಿಂಗ್ ನೀಡಿ ಎಂದು ಹೇಳಿದರು.
ರಾಮನಗೌಡರು ಈ ಹಿಂದೆ ನಡೆದುಕೊಂಡು ಬಂದಿರುವಂತೆ ಗುಪ್ತ ಮತದಾನಕ್ಕೆ ರೂಲಿಂಗ್ ನೀಡಿದರು‌ ಒಂದುವರೆ ವೇಳೆಗೆ ಮತದಾನ ಆರಂಭಗೊಂಡಿತು.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ  ಹಿರಿಯರ ತಂಡದ ಅಲ್ಲಂ ಗುರುಬಸವರಾಜ್ ಅವರಿಗೆ  17   ಮತಗಳು ಬಂದರೆ. ಯುವಕ ವೃಂದದಿಂದ ಸ್ಪರ್ಧೆ ಮಾಡಿದ್ದ ಡಾ.ಮಹಾಂತೇಶ್ ಅವರಿಗೆ  12   ಮತಗಳು ಬಂದವು.
ಈ ವೇಳೆ ಸಂಘದ ಮಾಜಿ ಅಧ್ಯಕ್ಷ ಉಡೇದ ಬಸವರಾಜ್, ಮಾಜಿ ಕಾರ್ಯದರ್ಶಿ ಚೋರನೂರು ಕೊಟ್ರಪ್ಪ, ಮಾಜಿ ಕೋಶಾದಾಧಿಕಾರಿ ಕೋಳೂರು ಮಲ್ಲಿಕಾರ್ಜುನ ಗೌಡ ಮೊದಲಾದವರು ಇದ್ದರು.
ಇದಕ್ಕೂ ಮುನ್ನ ಅಲ್ಲಂ ಗುರುಬಸವರಾಜ್ ಅವರ ಮನೆಯಲ್ಲಿ ನಡೆದ ಹಿರಿಯರ ತಂಡದ ಸಭೆಯಲ್ಲಿ ತಂಡ ಅಧಿಕಾರಕ್ಕೆ ಬರುವುದು ಮುಖ್ಯ ಉಪಾಧ್ಯಕ್ಷರಾಗಿ ಜಾನೆಕುಂಟೆ ಬಸವರಾಜ್, ಕಾರ್ಯದರ್ಶಿಯಾಗಿ ಅರವಿಂದ ಪಾಟೀಲ, ಸಹ ಕಾರ್ಯದರ್ಶಿಯಾಗಿ ಕಾತ್ಯಾಯಿನಿ ಮರಿದೇವಯ್ಯ,  ಕೋಶಾಧಿಕಾರಿಯಾಗಿ ಬೈಲುವದ್ದಿಗೇರಿ ಎರ್ರಿಸ್ವಾಮಿ ಅವರ ಹೆಸರನ್ನು ಅಲ್ಲಂ ಬಸವರಾಜ್ ಪ್ರಕಟಿಸಿದರು.
ಉಡೇದ ಬಸವರಾಜ್ ಅವರು ಎಲ್ಲರೂ ಒಗ್ಗಟ್ಟಿನಿಂದ ಇದ್ದರೆ ತಂಡದ ಜಯ ಗ್ಯಾರೆಂಟಿ ತಂಡದ ಬಲ 17 ಆಗಲಿದೆಂದ ಪ್ರಭುಸ್ವಾಮಿ, ಜಯ ನಮ್ಮದೇ, ಯಾರು ಮತ್ತೊಂದು ತಂಡದ ಅಮಿಷಗಳಿಗೆ ಬಲಿಯಾಗಬೇಡಿ ಎಂದಿದ್ದರು.
ಮತದಾನದಲ್ಲಿ ಯುವಕ ವೃಂದದ ಮೂವರು ಸದಸ್ಯರು ಹಿರಿಯರ ತಂಡದ ಪರ ಮತ ಚಲಾಯಿಸಿದ್ದಾರೆ. ಕೆಲವರು ಮತ್ತೊಂದು ತಂಡಕ್ಕೆ ಮತ ನೀಡಲಿದ್ದಾರೆಂದು ನಿನ್ನೆಯೇ ಸಂಜೆವಾಣಿ ವರದಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.