ದಿ.28 ರಂದು ಜಗ್ಗಲಗಿ ಹಬ್ಬ
ಹುಬ್ಬಳ್ಳಿ,ಮಾ27: ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಹೋಳಿ ಹಬ್ಬದ ಅಂಗವಾಗಿ ಹುಬ್ಬಳ್ಳಿ ಜಗ್ಗಲಗಿ ಹಬ್ಬವನ್ನು ಮಾ.28 ರಂದು ಮಧ್ಯಾಹ್ನ 3 ಕ್ಕೆ ನಗರದ ಮೂರುಸಾವಿರಮಠದ ಮೈದಾನದಿಂದ ಆಯೋಜನೆ ಮಾಡಲಾಗಿದೆ ಎಂದು ಶಾಸಕರು ಹಾಗೂ ಹುಬ್ಬಳ್ಳಿ ಜಗ್ಗಲಗಿ ಹಬ್ಬದ ಆಯೋಜಕರಾದ ಮಹೇಶ ಟೆಂಗಿನಕಾಯಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾನಿಧ್ಯವನ್ನು ಮೂರುಸಾವಿರಮಠದ ಡಾ.ಗುರುಸಿದ್ದ ರಾಜಯೋಗಿಂದ್ರ ಮಹಾಸ್ವಾಮಿಗಳು ವಹಿಸಲಿದ್ದಾರೆ. ವಿವಿಧ ಮಠಾಧೀಶರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಈಗಾಗಲೇ ಕಳೆದ 11 ವರ್ಷಗಳಿಂದ ವಿವಿಧ ಗ್ರಾಮಗಳ ಹಾಗೂ ಹುಬ್ಬಳ್ಳಿ ನಗರದ ವಿವಿಧ ಪ್ರದೇಶಗಳ ಜಗ್ಗಲಗಿ ತಂಡಗಳ ಸಹಾಯ, ಸಹಕಾರದೊಂದಿಗೆ ಅತ್ಯಂತ ವಿಜೃಂಭಣೆಯಿಂದ ಜಗ್ಗಲಗಿ ಹಬ್ಬವನ್ನು ಆಚರಿಸುತ್ತಾ ಬರಲಾಗಿದೆ. ಅದರಂತೆ ಈ ವರ್ಷವೂ ಹುಬ್ಬಳ್ಳಿ ಜಗ್ಗಲಗಿ ಹಬ್ಬದ ಭವ್ಯ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಅಂದು ನೂರಾರು ಜಗ್ಗಲಗಿ, ವಿವಿಧ ಚರ್ಮವಾದ್ಯಗಳ ಇಂಪಾದ ನಾದದೊಂದಿಗೆ, ಜಾನಪದ ಕಲಾವಿದರ ಸಾರಥ್ಯದಲ್ಲಿ ಮೂರುಸಾವಿರಮಠದ ಮೈದಾನದಿಂದ ಮೆರವಣಿಗೆ ಆರಂಭಗೊಂಡು ವಿಕ್ಟೋರಿಯಾ ರಸ್ತೆ, ಕೊಪ್ಪಿಕರ ರಸ್ತೆ, ಬ್ರಾಡ್ ವೇ, ದುರ್ಗಲ ಬಯಲು ವೃತ್ತ, ರಾಧಾಕೃಷ್ಣ ಗಲ್ಲಿ, ಬಾರದಾನ ಸಾಲ, ಜವಳಿ ಸಾಲ, ಬೆಳಗಾಂವ್ ಗಲ್ಲಿ, ಪೆಂಡಾರ್ ಗಲ್ಲಿ, ಶ್ರೀ ತುಳಜಾಭವಾನಿ ವೃತ್ತ, ದಾಜಿಬಾನಪೇಟ ಮಾರ್ಗವಾಗಿ ಪುನಃ ಮೂರುಸಾವಿರಮಠವನ್ನು ತಲುಪಲಿದೆ ಎಂದು ತಿಳಿಸಿದರು.
ಈ ಜಗ್ಗಲಗಿ ಹಬ್ಬದಲ್ಲಿ ಸುಳ್ಳ, ಬ್ಯಾಹಟ್ಟಿ, ಛಬ್ಬಿ, ಸೂರಶೆಟ್ಟಿಕೊಪ್ಪ, ಧಾರವಾಡ, ಅರಳಿಕಟ್ಟಿ, ಅಮರಗೋಳ, ತಾರಿಹಾಳ, ಶಿವಳ್ಳಿ, ಕಲಘಟಗಿ, ಗುಂಡೇನಟ್ಟಿ, ಮರೆವಾಡ, ಬೊಮ್ಮಸಮುದ್ರ, ಅಮ್ಮಿನಬಾವಿ, ಸೋಮನಕೊಪ್ಪ, ಗಂಗಾವತಿ, ಕಣವಿಹೊನ್ನಾಪುರ, ಹಂಚಿನಾಳ ಸೇರಿದಂತೆ ಇನ್ನಿತರ ಹಳ್ಳಿಗಳಿಂದ ಒಟ್ಟು 400 ತಂಡಗಳು ಭಾಗವಹಿಸಲಿವೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮೂರುಸಾವಿರಮಠದ ಡಾ.ಗುರುಸಿದ್ದರಾಜಯೋಗಿಂದ್ರ ಮಹಾಸ್ವಾಮಿಗಳು, ಮುಖಂಡರಾದ ಸಂತೋಷ ಚೌಹಾನ್, ಸತೀಶ ಶೇಜವಾಡಕರ್, ಸುಬ್ರಮಣ್ಯ ಶಿರಕೋಳ ಮುಂತಾದವರು ಇದ್ದರು.